ರಾಜ್‌ಕೋಟ್: ಆತಿಥೇಯ ಸೌರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದೆ. ಸ್ಪಿನ್ನರ್ ಧರ್ಮೇಂದ್ರ ಸಿನ್ಹ ಜಡೇಜ ಅವರ ಮಾರಕ ದಾಳಿಗೆ ಸಿಲುಕಿ (103ಕ್ಕೆ 7) ಪೆವಿಲಿಯನ್ ಪರೇಡ್ ನಡೆಸಿದ ಕರ್ನಾಟಕ 2ನೇ ದಿನದ ಅಂತ್ಯಕ್ಕೆ 78.1 ಓವರ್‌ಗಳಲ್ಲಿ 217ಕ್ಕೆ ಆಲೌಟಾಯಿತು. ಕರುಣ್ ನಾಯರ್ (63) ಹಾಗೂ ಡಿ. ನಿಶ್ಚಲ್ (58) ಅರ್ಧ ಶತಕ ಸಿಡಿಸಿದರಾದರೂ ರಾಜ್ಯ ತಂಡ ಚೇತರಿಕೆ ಕಾಣಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ 316 ರನ್ ಗಳಿಸಿದ ಸೌರಾಷ್ಟ್ರ 99 ರನ್‌ಗಳ ಲೀಡ್ ಸಂಪಾದಿಸಿತು.
ಕರುಣ್, ನಿಶ್ಚಲ್ ಆಸರೆ
ಕರ್ನಾಟಕ ಭದ್ರ ಅಡಿಪಾಯ ನಿರ್ಮಿಸುವಲ್ಲಿ ವಿಫಲವಾಯಿತು. ಆರ್. ಸಮರ್ಥ್ (15 )-ಡಿ. ನಿಶ್ಚಲ್ ಮೊದಲ ವಿಕೆಟಿಗೆ ಒಟ್ಟುಗೂಡಿಸಿದ್ದು ಕೇವಲ 17 ರನ್. ಈ ವೇಳೆ ಸಮರ್ಥ್ ಔಟಾದರು. ತಂಡದ ಮೊತ್ತ 25 ರನ್ ಆಗಿದ್ದಾಗ 3 ರನ್ ಗಳಿಸಿದ್ದ ದೇವದತ್ತ ಪಡಿಕ್ಕಲ್ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.
ಈ ಹಂತದಲ್ಲಿ ನಿಶ್ಚಲ್ ಹಾಗೂ ಕರುಣ್ ನಾಯರ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿ 3ನೇ ವಿಕೆಟಿಗೆ 91 ರನ್ ಪೇರಿಸಿದರು. 83 ಎಸೆತ ಎದುರಿಸಿದ ಕರುಣ್ ನಾಯರ್ 11 ಬೌಂಡರಿ ನೆರವಿನಿಂದ 63 ರನ್ ಹೊಡೆದರು. ಇದು ಕರ್ನಾಟಕ ಸರದಿಯ ಗರಿಷ್ಠ ಗಳಿಕೆಯಾಗಿತ್ತು. ನಿಶ್ಚಲ್ ಅವರ 58 ರನ್ 179 ಎಸೆತಗಳಿಂದ ಬಂತು (3 ಬೌಂಡರಿ, 1 ಸಿಕ್ಸರ್).
121 ರನ್ ಆಗಿದ್ದಾಗ ಕರುಣ್ ಔಟಾದೊಡನೆ ಕರ್ನಾಟಕದ ಸ್ಥಿತಿ ಬಿಗಡಾಯಿಸುತ್ತ ಹೋಯಿತು.
ಸಂಕ್ಷಿಪ್ತ ಸ್ಕೋರ್: ಸೌರಾಷ್ಟ್ರ-316. ಕರ್ನಾಟಕ- 217 (ನಾಯರ್ 63, ನಿಶ್ಚಲ್ 58, ದೇಶಪಾಂಡೆ 27, ಧರ್ಮೇಂದ್ರ ಸಿನ್ಹ ಜಡೇಜ 103ಕ್ಕೆ 7).