Advertisement

ರಣಜಿ ಟ್ರೋಫಿ ಕ್ರಿಕೆಟ್‌ 2019-20 : ಕರ್ನಾಟಕ ಸಾಧಾರಣ ಆರಂಭ

10:15 AM Dec 11, 2019 | sudhir |

ದಿಂಡಿಗಲ್‌ (ತಮಿಳುನಾಡು): ನೂತನ ರಣಜಿ ಋತುವಿನಲ್ಲಿ ಕರ್ನಾಟಕ ಸಾಧಾರಣ ಆರಂಭ ಕಂಡಿದೆ. ಸೋಮವಾರ ಆತಿಥೇಯ ತಮಿಳುನಾಡು ವಿರುದ್ಧ ದಿಂಡಿಗಲ್‌ನಲ್ಲಿ ಆರಂಭಗೊಂಡ ಮುಖಾಮುಖೀಯಲ್ಲಿ 6 ವಿಕೆಟಿಗೆ 259 ರನ್‌ ಗಳಿಸಿದೆ.

Advertisement

ದೇವದತ್ತ ಪಡಿಕ್ಕಲ್‌ (78 ರನ್‌) ಹಾಗೂ ಪವನ್‌ ದೇಶಪಾಂಡೆ (65 ರನ್‌) ಅರ್ಧ ಶತಕ ಬಾರಿಸಿ ತಂಡದ ನೆರವಿಗೆ ನಿಂತರು. ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ಕೊಡುಗೆ 43 ರನ್‌. ಶ್ರೇಯಸ್‌ ಗೋಪಾಲ್‌ 35 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದು, ಇವರೊಂದಿಗೆ ಖಾತೆ ತೆರೆಯದ ಡೇವಿಡ್‌ ಮಥಾಯಿಸ್‌ ಕ್ರೀಸಿನಲ್ಲಿದ್ದಾರೆ.

ಪಡಿಕ್ಕಲ್‌, ಪವನ್‌ ಆಸರೆ
ಇನ್ನಿಂಗ್ಸ್‌ ಆರಂಭಿಸಿದ ಡಿ. ನಿಶ್ಚಲ್‌ ಕೇವಲ 4 ರನ್‌ ಮಾಡಿ ಕೆ. ವಿಘ್ನೇಶ್‌ಗೆ ಬೌಲ್ಡ್‌ ಆಗಿ ಹೊರ ನಡೆದಾಗ ಕರ್ನಾಟಕ ಆರಮಭಿಕ ಆಘಾತಕ್ಕೆ ಸಿಲುಕಿತು. ಆದರೆ ಅಗರ್ವಾಲ್‌-ಪಡಿಕ್ಕಲ್‌ 2ನೇ ವಿಕೆಟಿಗೆ 67 ರನ್‌ ಒಟ್ಟುಗೂಡಿಸಿ ನೆರವಿಗೆ ನಿಂತರು. ಸ್ಕೋರ್‌ 71ರ ತನಕ ಸಾಗಿತು. ಆಗ ಅರ್ಧ ಶತಕದ ಸನಿಹ ಬಂದಿದ್ದ ಅಗರ್ವಾಲ್‌ ವಿಕೆಟ್‌ ಬಿತ್ತು (43 ರನ್‌, 78 ಎಸೆತ, 7 ಬೌಂಡರಿ, 1 ಸಿಕ್ಸರ್‌).

ಮನೀಷ್‌ ಪಾಂಡೆ ಅನುಪಸ್ಥಿತಿಯಲ್ಲಿ ನಾಯಕನಾಗಿರುವ ಕರುಣ್‌ ನಾಯರ್‌ (8) ಇಲ್ಲದ ರನ್ನಿಗಾಗಿ ಪ್ರಯತ್ನಿಸಿ ವಿಜಯ್‌ ಶಂಕರ್‌ ನಡೆಸಿದ ಅದ್ಭುತ ರನೌಟ್‌ಗೆ ಬಲಿಯಾದರು. 88ಕ್ಕೆ 3ನೇ ವಿಕೆಟ್‌ ಉರುಳಿತು.

ಈ ಹಂತದಲ್ಲಿ ಒಟ್ಟುಗೂಡಿದ ಪಡಿಕ್ಕಲ್‌ ಮತ್ತು ಪವನ್‌ ದೇಶಪಾಂಡೆ ನಿಧಾನವಾಗಿ ತಂಡದ ಮೊತ್ತವನ್ನು ಹೆಚ್ಚಿಸತೊಡಗಿದರು. ಎಚ್ಚರಿಕೆಯಿಂದ ಬ್ಯಾಟ್‌ ಬೀಸಿದ ಈ ಜೋಡಿ 4ನೇ ವಿಕೆಟಿಗೆ 121 ರನ್‌ ಒಟ್ಟುಗೂಡಿಸಿತು. ಸ್ಕೋರ್‌ 204ಕ್ಕೆ ಏರಿದಾಗ ಪಡಿಕ್ಕಲ್‌ ಔಟಾದರು. ಅವರ ಗಳಿಕೆ 182 ಎಸೆತಗಳಿಂದ 78 ರನ್‌ (7 ಬೌಂಡರಿ). ಮತ್ತೆ 18 ರನ್‌ ಒಟ್ಟುಗೂಡುವಷ್ಟರಲ್ಲಿ ದೇಶಪಾಂಡೆ ಕೂಡ ಪೆವಿಲಿಯನ್‌ ಸೇರಿಕೊಂಡರು. ಅವರ 65 ರನ್‌ 142 ಎಸೆತಗಳಿಂದ ಬಂತು (6 ಬೌಂಡರಿ). ವಿಕೆಟ್‌ ಕೀಪರ್‌ ಬಿ.ಆರ್‌. ಶರತ್‌ (10) ಅಗ್ಗಕ್ಕೆ ಔಟಾದರು.

Advertisement

ಆತಿಥೇಯರ ಬಿಗಿ ದಾಳಿ
ನಾಯಕ ವಿಜಯ್‌ ಶಂಕರ್‌, ಅನುಭವಿ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಕರ್ನಾಟಕದ ರನ್‌ ಗಳಿಕೆಗೆ ನಿಯಂತ್ರಣ ಹೇರಿದರು. 33ಕ್ಕೆ 2 ವಿಕೆಟ್‌ ಕಿತ್ತ ಎಂ. ಸಿದ್ಧಾರ್ಥ್ ತಮಿಳುನಾಡಿನ ಯಶಸ್ವಿ ಬೌಲರ್‌. ಉಳಿದಂತೆ ಕೆ. ವಿಘ್ನೇಶ್‌, ಆರ್‌. ಅಶ್ವಿ‌ನ್‌, ಬಾಬಾ ಅಪರಾಜಿತ್‌ ಒಂದೊಂದು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-6 ವಿಕೆಟಿಗೆ 259 (ಪಡಿಕ್ಕಲ್‌ 78, ದೇಶಪಾಂಡೆ 65, ಅಗರ್ವಾಲ್‌ 43, ಗೋಪಾಲ್‌ ಬ್ಯಾಟಿಂಗ್‌ 35, ಸಿದ್ಧಾರ್ಥ್ 33ಕ್ಕೆ 2).

ಅಂಗಳದಲ್ಲಿ ಹಾವು; ಪಂದ್ಯ ವಿಳಂಬ!
ವಿಜಯವಾಡ: ಸೋಮವಾರ ದೇಶಾದ್ಯಂತ ರಣಜಿ ಪಂದ್ಯಗಳು ಆರಂಭವಾದವು. ವಿದರ್ಭ-ಆಂಧ್ರಪ್ರದೇಶ ನಡುವಿನ ಪಂದ್ಯ ಮಾತ್ರ ತುಸು ತಡವಾಗಿ ಮೊದಲ್ಗೊಂಡಿತು. ಇದಕ್ಕೆ ಕಾರಣವೇನು ಗೊತ್ತಾ? ಮೈದಾನಕ್ಕೆ ಹಾವು ನುಗ್ಗಿದ್ದು!

ವಿಜಯವಾಡದ ಈ ಪಂದ್ಯದಲ್ಲಿ ಆಂಧ್ರದ ಆರಂಭಿಕರಾದ ಸಿ.ಆರ್‌. ಜ್ಞಾನೇಶ್ವರ್‌ ಮತ್ತು ಡಿ.ಬಿ. ಪ್ರಶಾಂತ್‌ ಕುಮಾರ್‌ ಬ್ಯಾಟ್‌ ಹಿಡಿದು ಮೈದಾನಕ್ಕೆ ಆಗಮಿಸಿದ್ದರು. ಆಗ ಮೈದಾನದ ಸಿಬಂದಿ ಏನೋ ಮಾಡುತ್ತಿರುವುದು ಕಂಡುಬಂತು. ಕ್ಯಾಮೆರಾವನ್ನು ಅತ್ತ ತಿರುಗಿಸಿದರೆ, ಹಾವು! ನಿಧಾನವಾಗಿ ಬರುತ್ತಿದ್ದ ಆ ಹಾವನ್ನು ಹಿಡಿಯಲು ಸಿಬಂದಿ ಒದ್ದಾಡುತ್ತಿದ್ದರು. ಏನೇನೋ ಪ್ರಯತ್ನ ಮಾಡಿ ಕೊನೆಗೂ ಹಾವನ್ನು ಹೊರಹಾಕಲಾಯಿತು. ಕೆಲವು ನಿಮಿಷಗಳ ವಿಳಂಬವಾಗಿ ಪಂದ್ಯ ಆರಂಭಗೊಂಡಿತು.

ಜಾಫ‌ರ್‌: 150 ಪಂದ್ಯಗಳ ದಾಖಲೆ
ಈಗ ವಿದರ್ಭ ಪರ ಆಡುತ್ತಿರುವ ಮುಂಬಯಿಯ ಮಾಜಿ ಆರಂಭಕಾರ ವಾಸಿಮ್‌ ಜಾಫ‌ರ್‌, ರಣಜಿ ಟ್ರೋಫಿ ಇತಿಹಾಸದಲ್ಲಿ 150 ಪಂದ್ಯಗಳನ್ನಾಡಿದ ಮೊದಲ ಕ್ರಿಕೆಟಿಗನೆಂಬ ದಾಖಲೆಗೆ ಪಾತ್ರರಾಗಿದ್ದಾರೆ. ಸೋಮವಾರ ಆಂಧ್ರ ವಿರುದ್ಧ ಆಡಲಿಳಿಯುವ ಮೂಲಕ ಅವರು ಈ ಮೈಲಿಗಲ್ಲು ನೆಟ್ಟರು. ದೇವೇಂದ್ರ ಬುಂದೇಲ (145 ಪಂದ್ಯ), ಅಮೋಲ್‌ ಮಜುಮಾªರ್‌ (136 ಪಂದ್ಯ) ಅನಂತರದ ಸ್ಥಾನದಲ್ಲಿದ್ದಾರೆ.

1996-97ರಲ್ಲಿ ರಣಜಿ ಪದಾರ್ಪಣೆ ಮಾಡಿದ ವಾಸಿಮ್‌ ಜಾಫ‌ರ್‌, ಒಂದೊಂದೇ ದಾಖಲೆಯನ್ನು ತಮ್ಮದಾಗಿಸಿಕೊಳ್ಳುತ್ತಲೇ ಬಂದಿದ್ದಾರೆ. ರಣಜಿಯಲ್ಲಿ ಅತ್ಯಧಿಕ 40 ಶತಕ ಬಾರಿಸುವ ಜತೆಗೆ 11 ಸಾವಿರ ರನ್‌ ಹೊಡೆದ ಮೊದಲ ಬ್ಯಾಟ್ಸ್‌ಮನ್‌ ಕೂಡ ಆಗಿದ್ದಾರೆ.

ಮುಂಬಯಿ ಮಿಂಚು
ಬರೋಡ: ಆತಿಥೇಯ ವಡೋದರ ವಿರುದ್ಧದ ರಣಜಿ ಮುಖಾಮುಖೀಯಲ್ಲಿ ಮುಂಬಯಿ ಮೊದಲ ದಿನವೇ ಬ್ಯಾಟಿಂಗ್‌ ಮಿಂಚು ಹರಿಸಿ 8 ವಿಕೆಟಿಗೆ 362 ರನ್‌ ಪೇರಿಸಿದೆ.

ಆರಂಭಕಾರ ಪೃಥ್ವಿ ಶಾ (66), ಅಜಿಂಕ್ಯ ರಹಾನೆ (79), ಶಮ್ಸ್‌ ಮುಲಾನಿ (ಬ್ಯಾಟಿಂಗ್‌ 56), ಶಾದೂìಲ್‌ ಠಾಕೂರ್‌ (64) ಬಿರುಸಿನ ಆಟದ ಮೂಲಕ ಅರ್ಧ ಶತಕ ಬಾರಿಸಿದರು. ಆದರೆ ನಾಯಕ ಸೂರ್ಯಕುಮಾರ್‌ ಯಾದವ್‌ ಖಾತೆ ತೆರೆಯಲು ವಿಫ‌ಲರಾದರು.

ಬರೋಡ ಪರ ಭಾರ್ಗವ್‌ ಭಟ್‌ 3 ವಿಕೆಟ್‌ ಉರುಳಿಸಿದರೂ ಇದಕ್ಕೆ 110 ರನ್‌ ಬಿಟ್ಟುಕೊಟ್ಟರು. ಯೂಸುಫ್ ಪಠಾಣ್‌ ಮತ್ತು ಅಭಿಮನ್ಯು ರಜಪೂತ್‌ ತಲಾ 2 ವಿಕೆಟ್‌ ಕಿತ್ತರು. ಇನ್ನೊಂದು ವಿಕೆಟ್‌ ನಾಯಕ ಕೃಣಾಲ್‌ ಪಾಂಡ್ಯ ಪಾಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next