Advertisement

ರಣಜಿ ಟ್ರೋಫಿ ಸೆಮಿಫೈನಲ್‌ : ಮುಂಬಯಿಗೆ ಮಹತ್ವದ ಮುನ್ನಡೆ

10:03 PM Jun 16, 2022 | Team Udayavani |

ಬೆಂಗಳೂರು: ಉತ್ತರ ಪ್ರದೇಶ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯದಲ್ಲಿ ಮುಂಬಯಿ ಮಹತ್ವದ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದ್ದು, ಫೈನಲ್‌ ಪ್ರವೇಶವನ್ನು ಬಹುತೇಕ ಖಚಿತಪಡಿಸಿದೆ. 3ನೇ ದಿನದಾಟದ ಅಂತ್ಯಕ್ಕೆ ಮುಂಬಯಿ ಇನ್ನೂ 9 ವಿಕೆಟ್‌ ಕೈಲಿರಿಸಿಕೊಂಡು 346 ಲೀಡ್‌ ಹೊಂದಿದೆ.

Advertisement

ಮುಂಬಯಿಯ 393ಕ್ಕೆ ಉತ್ತರವಾಗಿ ಉತ್ತರ ಪ್ರದೇಶ 180ಕ್ಕೆ ಕುಸಿಯಿತು. 213 ರನ್ನುಗಳ ಬೃಹತ್‌ ಮುನ್ನಡೆ ಸಾಧಿಸಿದ ಬಳಿಕ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ್ದು, ಒಂದು ವಿಕೆಟಿಗೆ 133 ರನ್‌ ಗಳಿಸಿದೆ. ನಾಯಕ ಪೃಥ್ವಿ ಶಾ ಮಿಂಚಿನ ಗತಿಯಲ್ಲಿ 64 ರನ್‌ ಮಾಡಿ ಪೆವಿಲಿಯನ್‌ ಸೇರಿಕೊಂಡಿದ್ದಾರೆ (71 ಎಸೆತ, 12 ಬೌಂಡರಿ). ಸ್ವಾರಸ್ಯವೆಂದರೆ, ಶಾ ಔಟಾದರೂ ಜತೆಗಾರ ಜೈಸ್ವಾಲ್‌ ರನ್‌ ಮಾಡಿರಲಿಲ್ಲ! ಜೈಸ್ವಾಲ್‌ ಖಾತೆ ತೆರೆದದ್ದೇ 54ನೇ ಎಸೆತದಲ್ಲಿ. ಅವರು 114 ಎಸೆತಗಳಿಂದ 35 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಜತೆಗಿರುವವರು ಅರ್ಮಾನ್‌ ಜಾಫ‌ರ್‌ (32 ರನ್‌).

ತುಷಾರ್‌ ದೇಶಪಾಂಡೆ, ಮೋಹಿತ್‌ ಅವಸ್ಥಿ ಮತ್ತು ತನುಷ್‌ ಕೋಟ್ಯಾನ್‌ ಸೇರಿಕೊಂಡು ಉತ್ತರ ಪ್ರದೇಶದ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೂವರೂ ತಲಾ 3 ವಿಕೆಟ್‌ ಕಿತ್ತರು. 9ನೇ ಕ್ರಮಾಂಕದಲ್ಲಿ ಆಡಲಿಳಿದ ಶಿವಂ ಮಾವಿ ಸರ್ವಾಧಿಕ 48 ರನ್‌, ಆರಂಭಕಾರ ಮಾಧವ್‌ ಕೌಶಿಕ್‌ 38 ರನ್‌ ಹೊಡೆದರು.

ಸಂಕ್ಷಿಪ್ತ ಸ್ಕೋರ್‌: ಮುಂಬಯಿ-393 ಮತ್ತು ಒಂದು ವಿಕೆಟಿಗೆ 133 (ಪೃಥ್ವಿ ಶಾ 64, ಜೈಸ್ವಾಲ್‌ ಬ್ಯಾಟಿಂಗ್‌ 35, ಜಾಫ‌ರ್‌ ಬ್ಯಾಟಿಂಗ್‌ 32). ಉತ್ತರ ಪ್ರದೇಶ-180 (ಮಾವಿ 48, ಕೌಶಿಕ್‌ 38, ಕರಣ್‌ ಶರ್ಮ 27, ದೇಶಪಾಂಡೆ 34ಕ್ಕೆ 3, ಕೋಟ್ಯಾನ್‌ 35ಕ್ಕೆ 3, ಅವಸ್ಥಿ 39ಕ್ಕೆ 3).

ಸಚಿವ ತಿವಾರಿ, ಶಬಾಜ್‌ ಶತಕ :

Advertisement

ಬೆಂಗಳೂರು: ಬಂಗಾಲ ಕ್ರೀಡಾ ಸಚಿವರಾದ ಬಳಿಕವೂ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತಿರುವ ಮನೋಜ್‌ ತಿವಾರಿ ರಣಜಿ ಟ್ರೋಫಿಯಲ್ಲಿ ಸತತ 2ನೇ ಶತಕ ಬಾರಿಸಿದ್ದಾರೆ. ಇವರೊಂದಿಗೆ ಕ್ರೀಸ್‌ನಲ್ಲಿದ್ದ ಶಬಾಜ್‌ ಅಹ್ಮದ್‌ ಕೂಡ ಸೆಂಚುರಿ ಹೊಡೆದಿದ್ದಾರೆ. ಆದರೂ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಮಧ್ಯಪ್ರದೇಶ ವಿರುದ್ಧ ಬಂಗಾಲ ಇನ್ನಿಂಗ್ಸ್‌ ಹಿನ್ನಡೆಗೆ ಸಿಲುಕಿದೆ.

ಮಧ್ಯಪ್ರದೇಶದ 341ಕ್ಕೆ ಜವಾಬಾಗಿ ಬಂಗಾಲ 273 ರನ್‌ ಗಳಿಸಿ ಆಲೌಟ್‌ ಆಯಿತು. ತಿವಾರಿ 211 ಎಸೆತಗಳಿಂದ 102 ರನ್‌ (12 ಬೌಂಡರಿ) ಹಾಗೂ ಶಬಾಜ್‌ ಅಹ್ಮದ್‌ 209 ಎಸೆತ ಎದುರಿಸಿ 116 ರನ್‌ ಹೊಡೆದರು (12 ಬೌಂಡರಿ). ಈ ಜೋಡಿಯಿಂದ 6ನೇ ವಿಕೆಟಿಗೆ 183 ರನ್‌ ಒಟ್ಟುಗೂಡಿತು. ಆದರೂ ಇನ್ನಿಂಗ್ಸ್‌ ಮುನ್ನಡೆಗೆ ಈ ಪ್ರಯತ್ನ ಸಾಲಲಿಲ್ಲ.

ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಮಧ್ಯ ಪ್ರದೇಶ 2 ವಿಕೆಟಿಗೆ 163 ಗಳಿಸಿದ್ದು, ಒಟ್ಟು 231 ರನ್‌ ಮುನ್ನಡೆಯಲ್ಲಿದೆ. ರಜತ್‌ ಪಾಟೀದಾರ್‌ 63 ಮತ್ತು ನಾಯಕ ಆದಿತ್ಯ ಶ್ರೀವಾಸ್ತವ 34 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಮಧ್ಯ ಪ್ರದೇಶ-341 ಮತ್ತು 2 ವಿಕೆಟಿಗೆ 163 (ಪಾಟೀದಾರ್‌ ಬ್ಯಾಟಿಂಗ್‌ 63, ಶ್ರೀವಾಸ್ತವ ಬ್ಯಾಟಿಂಗ್‌ 34). ಬಂಗಾಲ-273 (ಶಬಾಜ್‌ 116, ತಿವಾರಿ 102, ಈಶ್ವರನ್‌ 22,

ದಾಟೆ 48ಕ್ಕೆ 3, ಕಾರ್ತಿಕೇಯ 61ಕ್ಕೆ 3, ಸಾರಾಂಶ್‌ ಜೈನ್‌ 63ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next