ಮುಂಬಯಿ: ರಣಜಿ ಟ್ರೋಫಿ ಕ್ರಿಕೆಟ್ ಇತಿಹಾಸದಲ್ಲಿ ತನ್ನ 500ನೇ ಪಂದ್ಯದಲ್ಲಿ ಆತಿಥೇಯ ಮುಂಬಯಿ ಭಾರೀ ಹಿನ್ನಡೆ ಅನುಭವಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 171 ರನ್ನಿಗೆ ಆಲೌಟಾದ ಮುಂಬಯಿ ಇದೀಗ ಎದುರಾಳಿ ಬರೋಡ ತಂಡಕ್ಕೆ ಭಾರೀ ಮೊತ್ತ ಪೇರಿಸಲು ಅವಕಾಶ ಕಲ್ಪಿಸಿದೆ. ಬರೋಡದ ಬ್ಯಾಟಿಂಗ್‌ಗೆ ಕಡಿವಾಣ ಹಾಕಲು ಮುಂಬಯಿ ಪೂರ್ಣ ವಿಫಲವಾಗಿದೆ.
ಒಂದು ವಿಕೆಟಿಗೆ 63 ರನ್ನಿನಿಂದ ಎರಡನೇ ದಿನದ ಆಟ ಆರಂಭಿಸಿದ ಬರೋಡ ಆದಿತ್ಯ ವಾಗ್ಮೋಡ್ ಅವರ ಆಕರ್ಷಕ ಶತಕದಿಂದಾಗಿ ದಿನದಾಟದ ಅಂತ್ಯಕ್ಕೆ 4 ವಿಕೆಟಿಗೆ 376 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ. ಈಗಾಗಲೇ 205 ರನ್ ಮುನ್ನಡೆ ಸಾಧಿಸಿರುವ ಬರೋಡ ಇನ್ನುಳಿದ ಆರು ವಿಕೆಟ್ ನೆರವಿನಿಂದ ಮುನ್ನಡೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಹೀಗಾಗಿ ಮುಂಬಯಿ ಗೆಲುವಿನ ಸಾಧ್ಯತೆ ದೂರವಾಗಿದೆ.
ವಾಗ್ಮೋಡ್ ಅವರ ಶತಕ ಹಾಗೂ ದೀಪಕ್ ಹೂಡ, ವಿಷ್ಣು ಸೋಲಂಕಿ ಮತ್ತು ಸ್ವಪ್ನಿಲ್ ಸಿಂಗ್ ಅವರ ಅರ್ಧಶತಕದಿಂದಾಗಿ ಬರೋಡ ಮೇಲುಗೈ ಸಾಧಿಸುವಂತಾಯಿತು. ವಾಗ್ಮೋಡ್ ಅವರು ದೀಪಕ್ ಹೂಡ ಜತೆ ಮೂರನೇ ವಿಕೆಟಿಗೆ 140 ರನ್ ಮತ್ತು ಸ್ವಪ್ನಿಲ್ ಸಿಂಗ್ ಜತೆ ನಾಲ್ಕನೇ ವಿಕೆಟಿಗೆ 105 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಬರೋಡ ಉತ್ತಮ ಮೊತ್ತ ಪೇರಿಸಲು ನೆರವಾದರು.
ತಾಳ್ಮೆಯ ಆಟವಾಡಿದ ವಾಗ್ಮೋಡ್ 309 ಎಸೆತ ಎದುರಿಸಿದ್ದು 13 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 138 ರನ್ ಗಳಿಸಿ ಔಟಾದರು. ವಿಷ್ಣು ಸೋಲಂಕಿ 54 ಮತ್ತು ದೀಪಕ್ ಹೂಡ 75 ರನ್ ಹೊಡೆದರೆ ಸ್ವಪ್ನಿಲ್ ಸಿಂಗ್ 63 ರನ್ ಗಳಿಸಿ ಆಡುತ್ತಿದ್ದಾರೆ.
ಸಂಕ್ಷಿಪ್ತ ಸ್ಕೋರು: ಮುಂಬಯಿ 171; ಬರೋಡ 4 ವಿಕೆಟಿಗೆ 376 (ಆದಿತ್ಯ ವಾಗ್ಮೋಡ್ 138, ವಿಷ್ಣು ಸೋಲಂಕಿ 54, ದೀಪಕ್ ಹೂಡ 75, ಸ್ವಪ್ನಿಲ್ ಸಿಂಗ್ 63 ಬ್ಯಾಟಿಂಗ್).