Advertisement

ಇನಿಂಗ್ಸ್‌ ಜಯದತ್ತ ಕರ್ನಾಟಕ ದಾಪುಗಾಲು

06:00 AM Dec 10, 2017 | |

ನಾಗ್ಪುರ: ರಣಜಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತನ್ನ ಬಿಗಿಹಿಡಿತ ಮುಂದುವರಿಸಿದೆ. ಬಲಿಷ್ಠ ಎದುರಾಳಿ ಎನ್ನಲಾದ ಮುಂಬೈ ಹೋರಾಟ ಎಂಟರಘಟ್ಟಕ್ಕೆ ಅಂತ್ಯವಾಗುವ ಎಲ್ಲ ಸಾಧ್ಯತೆಗಳಿವೆ. 3ನೇ ದಿನವೂ ಅದ್ಭುತ ಆಟ ಮುಂದುವರಿಸಿದ ಕರ್ನಾಟಕ ತಂಡ 570 ರನ್‌ಗಳಿಗೆ ತನ್ನ ಮೊದಲ ಇನಿಂಗ್ಸ್‌ ಮುಗಿಸಿದೆ. ಇದಕ್ಕೆ ಪ್ರತಿಯಾಗಿ 2ನೇ ಇನಿಂಗ್ಸ್‌ ಆರಂಭಿಸಿದ ಮುಂಬೈ 120 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಇನ್ನೂ 277 ರನ್‌ ಹಿನ್ನಡೆಯಲ್ಲಿದೆ.

Advertisement

ಮುಂಬೈನ ಭಾರೀ ಹಿನ್ನಡೆಗೆ ಕಾರಣವಾಗಿದ್ದು ರಾಜ್ಯದ ಶ್ರೇಯಸ್‌ ಗೋಪಾಲ್‌ ಬ್ಯಾಟಿಂಗ್‌. 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಅವರು 2ನೇ ದಿನ ರಾಜ್ಯಕ್ಕೆ ಆಸರೆಯಾಗಿ ಶೀಘ್ರ ಕುಸಿತ ತಪ್ಪಿಸಿ ಭಾರೀ ಮುನ್ನಡೆ ಸಿಗಲು ಕಾರಣವಾಗಿದ್ದರು. 3ನೇ ದಿನದಲ್ಲೂ ಅಜೇಯರಾಗುಳಿದ ಅವರು ಮುನ್ನಡೆ ಬೃಹತ್ತಾಗಲು ಕಾರಣವಾದರು. 274 ಎಸೆತ ಎದುರಿಸಿದ ಅವರು 11 ಬೌಂಡರಿ ಸಹಿತ 150 ರನ್‌ ಗಳಿಸಿದರು. ಅವರ ಬ್ಯಾಟಿಂಗ್‌ನಲ್ಲಿ ಸಿಕ್ಸರ್‌ ಇರಲಿಲ್ಲ. ಪಂದ್ಯದಲ್ಲಿ ಹಿಡಿತ ಸಾಧಿಸುವುದು ಮೊದಲ ಆದ್ಯತೆಯಾಗಿದ್ದ ಕಾರಣ ಅವರು ಭಾರೀ ಹೊಡೆತಗಳಿಗೆ ಕಾರಣವಾಗದೆ ತಂಡವನ್ನು ಸುರಕ್ಷಿತಗೊಳಿಸುವುದಕ್ಕೆ ಆದ್ಯತೆ ನೀಡಿದರು.

ಶ್ರೇಯಸ್‌ ಅವರು ಹಂತಹಂತವಾಗಿ ಇನಿಂಗ್ಸ್‌ ಕಟ್ಟಿದರು. 2ನೇ ದಿನದಂತ್ಯಕ್ಕೇ ಅವರು ತಮ್ಮ ಬ್ಯಾಟಿಂಗ್‌ನಿಂದ ರಾಜ್ಯವನ್ನು ಸುರಕ್ಷಿತ ಸ್ಥಿತಿಗೆ ತಲುಪಿಸಿದ್ದರು. 395 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿದ್ದ ಕರ್ನಾಟಕದ ಮೊತ್ತವನ್ನು ಉಬ್ಬಿಸಲು ನೆರವಾದರು. ಇತರೆ ಕ್ರಿಕೆಟಿಗರ ಜೊತೆಗೂಡಿ 3ನೇ ದಿನ ಹೆಚ್ಚುವರಿ 175 ರನ್‌ಗಳನ್ನು ಸೇರಿಸಿ ತಂಡದ ಸ್ಥಿತಿಯನ್ನು ಮಜಬೂತುಗೊಳಿಸಿದರು.

ಅರ್ಧಶತಕ ಬಾರಿಸಿದ ಅರವಿಂದ್‌: ಕರ್ನಾಟಕ ಇನಿಂಗ್ಸ್‌ನ ಮತ್ತೂಂದು ಮುಖ್ಯ ಸಂಗತಿ ಕಡೆಯ ಬ್ಯಾಟ್ಸ್‌ಮನ್‌ ಶ್ರೀನಾಥ್‌ ಅರವಿಂದ್‌ ಅರ್ಧಶತಕ. ನಾಯಕ ವಿನಯ್‌ ಕುಮಾರ್‌, ಕೆ.ಗೌತಮ್‌ ಅವರ ಸ್ಪರ್ಧಾತ್ಮಕ ಬ್ಯಾಟಿಂಗ್‌. ಕಡೆಯ ಹಂತದಲ್ಲಿ ಬಿರುಸಾದ ಅರವಿಂದ್‌ ಎದುರಿಸಿದ್ದು ಕೇವಲ 41 ಎಸೆತ. ಅಷ್ಟರಲ್ಲೇ 9 ಬೌಂಡರಿ, 1 ಸಿಕ್ಸರ್‌ ಸಹಿತ 51 ರನ್‌ ಚಚ್ಚಿ ಹಾಕಿದರು. ರಾಜ್ಯದ ಮೊತ್ತ ಉಬ್ಬಲು ಇವರದ್ದು ಮುಖ್ಯ ಕೊಡುಗೆ. ಇದುವರೆಗೆ ಬೌಲರ್‌ ಆಗಿ ಗುರ್ತಿಸಿಕೊಂಡಿದ್ದ ಶ್ರೀನಾಥ್‌ ತಮ್ಮ ಈ ಇನಿಂಗ್ಸ್‌ನ ಮೂಲಕ ಬ್ಯಾಟಿಂಗ್‌ ಕೂಡ ಮಾಡಬಲ್ಲೆ ಎಂದು ತೋರಿಸಿಕೊಂಡಿದ್ದಾರೆ. ಸದ್ಯದಲ್ಲೇ ಐಪಿಎಲ್‌ ಹರಾಜು ಇರುವುದರಿಂದ ಶ್ರೀನಾಥ್‌ ಅವರ ಈ ಇನಿಂಗ್ಸ್‌ ನೆರವಿಗೆ ಬರುವ ಸಾಧ್ಯತೆಯಿದೆ.

ಇನ್ನೊಂದು ಕಡೆ ನಾಯಕ ವಿನಯ್‌ ಕುಮಾರ್‌ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಸರೆಯಾದರು. ಮಾರಕವಾಗಿ ಬೌಲಿಂಗ್‌ ಮಾಡಿ ಹ್ಯಾಟ್ರಿಕ್‌ ಸಹಿತ 6 ವಿಕೆಟ್‌ ಕಿತ್ತಿದ್ದ ವಿನಯ್‌ ಬ್ಯಾಟಿಂಗ್‌ನಲ್ಲೂ ಕೈಹಿಡಿದು 37 ರನ್‌ ಗಳಿಸಿದರು. ವಿಶೇಷವೆಂದರೆ ಈ ಇನಿಂಗ್ಸ್‌ಗಾಗಿ ಅವರು 110 ಎಸೆತಗಳನ್ನು ತೆಗೆದುಕೊಂಡರು. ಅತ್ಯಂತ ತಾಳ್ಮೆಯಿಂದ ಅವರು ಇನಿಂಗ್ಸ್‌ ಕಟ್ಟಿದ ಪರಿಣಾಮ ಕರ್ನಾಟಕ ಬಹುತೇಕ ಸೆಮಿಫೈನಲ್‌ಗೇರುವುದು ಈಗಲೇ ಖಚಿತವಾಗಿದೆ.

Advertisement

ಇನಿಂಗ್ಸ್‌ ಸೋಲಿನ ಇಕ್ಕಟ್ಟಿನಲ್ಲಿ ಮುಂಬೈ ತಂಡ
ಕರ್ನಾಟಕದ ಬೃಹತ್‌ ಮೊತ್ತಕ್ಕೆ ಪ್ರತಿಯಾಗಿ ಒತ್ತಡದಲ್ಲೇ 2ನೇ ಇನಿಂಗ್ಸ್‌ ಆರಂಭಿಸಿರುವ ಮುಂಬೈ ಈಗಾಗಲೇ ತನ್ನ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು 120 ರನ್‌ ಬಾರಿಸಿದೆ. ಇನ್ನೂ ಎರಡು ದಿನ ಬಾಕಿಯಿರುವುದರಿಂದ ತಾಳ್ಮೆಯಿಂದ ಆಡಿ ಮೊದಲ ಇನಿಂಗ್ಸ್‌ ಹಿನ್ನಡೆ ಮೀರುವುದರ ಜೊತೆಗೆ ಹೆಚ್ಚುವರಿ ಮುನ್ನಡೆ ಗಳಿಸಬೇಕಾಗಿದೆ. ಸದ್ಯದ ಸ್ಥಿತಿಯಲ್ಲಿ ಮುಂಬೈಗೆ ಇನ್ನೂ 277 ರನ್‌ಗಳ ಹಿನ್ನಡೆ ಮೀರುವುದೇ ದೊಡ್ಡ ಸಾಹಸವಾಗಬಹುದು. ಇನಿಂಗ್ಸ್‌ ಸೋಲು ತಪ್ಪಿಸಿಕೊಳ್ಳುವುದೇ ಮುಂಬೈ ಗುರಿಯಾಗುವ ಲಕ್ಷಣವಿದೆ.

ಅದರ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಪೃಥ್ವಿ ಶಾ 2ನೇ ಇನಿಂಗÕಲ್ಲೂ ಅಲ್ಪ ಮೊತ್ತಕ್ಕೆ (14) ಕುಸಿದಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಪ್ರತಿಹೋರಾಟ ಸಂಘಟಿಸಿ ಅಜೇಯ 55 ರನ್‌ಗಳಿಸಿದ್ದಾರೆ. 4ನೇ ದಿನ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಕೈಜೋಡಿಸಿದರೆ ಮುಂಬೈ ಬಚಾವಾಗಲಿದೆ. ಇಲ್ಲವಾದರೆ ಇನಿಂಗ್ಸ್‌ ಸೋಲಿನೊಂದಿಗೆ ಈ ಬಾರಿಯ ರಣಜಿ ಅಭಿಯಾನವನ್ನು ಅಂತ್ಯಗೊಳಿಸಲಿದೆ.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ 1ನೇ ಇನಿಂಗ್ಸ್‌ 570 ಆಲೌಟ್‌ (ಶ್ರೇಯಸ್‌ ಗೋಪಾಲ್‌ 150, ಶ್ರೀನಾಥ್‌ ಅರವಿಂದ 51, ಎಸ್‌.ಮಲ್ಹೋತ್ರಾ 97ಕ್ಕೆ3), ಮುಂಬೈ 2ನೇ ಇನಿಂಗ್ಸ್‌ 120/3 (ಸೂರ್ಯಕುಮಾರ್‌ ಅಜೇಯ 55, ಕೆ.ಗೌತಮ್‌ 30ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next