Advertisement

ರಣಜಿ: ಮುನ್ನಡೆ ಸಾಧಿಸಿದ ಕರ್ನಾಟಕ

11:09 PM Feb 19, 2022 | Team Udayavani |

ಚೆನ್ನೈ: ರೈಲ್ವೇಸ್‌ ಎದುರಿನ ರಣಜಿ ಮುಖಾಮುಖಿಯಲ್ಲಿ ಕರ್ನಾಟಕ ಇನ್ನಿಂಗ್ಸ್‌ ಲೀಡ್‌ ಗಳಿಸುವಲ್ಲಿ ಯಶಸ್ವಿಯಾಗಿದೆ. 3ನೇ ದಿನದಾಟದ ಅಂತ್ಯಕ್ಕೆ ಒಟ್ಟು 118 ರನ್‌ ಮುನ್ನಡೆ ಹೊಂದಿದೆ. ಇನ್ನೂ 7 ವಿಕೆಟ್‌ಗಳನ್ನು ಕೈಲಿರಿಸಿಕೊಂಡಿದೆ.

Advertisement

ಕರ್ನಾಟಕದ 481 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ ದ್ವಿತೀಯ ದಿನ ದಾಟದ ಅಂತ್ಯಕ್ಕೆ ರೈಲ್ವೇಸ್‌ 3 ವಿಕೆಟಿಗೆ 213 ರನ್‌ ಗಳಿಸಿತ್ತು. ಶನಿವಾರದ ಆಟ ಮುಂದುವರಿಸಿ 426ಕ್ಕೆ ಆಲೌಟ್‌ ಆಯಿತು. 55 ರನ್‌ ಬಹುಮೂಲ್ಯ ಮುನ್ನಡೆ ಬಳಿಕ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ರಾಜ್ಯ ತಂಡ, ಪಡಿಕ್ಕಲ್‌(4) ವಿಕೆಟ್‌ ಕಳೆದುಕೊಂಡು 63 ರನ್‌ ಮಾಡಿದೆ.

78 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದು ಕೊಂಡಿದ್ದ ಅರಿಂದಮ್‌ ಘೋಷ್‌ ಶತಕ ಬಾರಿಸಿದ್ದು ರೈಲ್ವೇಸ್‌ ಸರದಿಯ ವಿಶೇಷವೆನಿಸಿತು. ಘೋಷ್‌ 105 ರನ್‌ ಕೊಡುಗೆ ಸಲ್ಲಿಸಿದರು (197 ಎಸೆತ, 12 ಬೌಂಡರಿ, 3 ಸಿಕ್ಸರ್‌). ಮೊಹಮ್ಮದ್‌ ಸೈಫ್ 84 ರನ್‌ ಹೊಡೆದರು. ಇವರಿಬ್ಬರ 4ನೇ ವಿಕೆಟ್‌ ಜತೆಯಾಟ 294 ರನ್‌ ತನಕ ಮುಂದುವರಿಯಿತು. ಆಗ ಘೋಷ್‌ ವಿಕೆಟ್‌ ಕಿತ್ತ ಶ್ರೇಯಸ್‌ ಗೋಪಾಲ್‌ ಕರ್ನಾಟಕಕ್ಕೆ ಮೇಲುಗೈ ಒದಗಿಸಿದರು.

ಕೃಷ್ಣಪ್ಪ ಗೌತಮ್‌ 4, ರೋನಿತ್‌ ಮೋರೆ 3, ವಿದ್ಯಾಧರ ಪಾಟೀಲ್‌ 2 ವಿಕೆಟ್‌ ಉರುಳಿಸಿದರು. ಕರ್ನಾಟಕದ ದ್ವಿತೀಯ ಸರದಿಯಲ್ಲಿ ಮಾಯಾಂಕ್‌ ಅಗರ್ವಾಲ್‌ 39, ಆರ್‌. ಸಮರ್ಥ್ 20 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-481 ಮತ್ತು ಒಂದು ವಿಕೆಟಿಗೆ 63 (ಅಗರ್ವಾಲ್‌ ಬ್ಯಾಟಿಂಗ್‌ 39, ಸಮರ್ಥ್ ಬ್ಯಾಟಿಂಗ್‌ 20). ರೈಲ್ವೇಸ್‌- 426 (ಘೋಷ್‌ 105, ಸೈಫ್ 84, ವಿವೇಕ್‌ ಸಿಂಗ್‌ 59, ದೇವಧರ್‌ 56, ಗೌತಮ್‌ 27ಕ್ಕೆ 4, ಮೋರೆ 67ಕ್ಕೆ 3, ಪಾಟೀಲ್‌ 77ಕ್ಕೆ 2, ಶ್ರೇಯಸ್‌ ಗೋಪಾಲ್‌ 68ಕ್ಕೆ 1).

Advertisement

ಪೂಜಾರ ಸೊನ್ನೆ
ಅಹ್ಮದಾಬಾದ್‌: ಮುಂಬಯಿ ಎದುರಿನ “ಎಲೈಟ್‌ ಡಿ’ ವಿಭಾಗದ ರಣಜಿ ಪಂದ್ಯದಲ್ಲಿ ಸೌರಾಷ್ಟ್ರ ಫಾಲೋಆನ್‌ಗೆ ತುತ್ತಾಗಿದೆ. ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ್‌ ಪೂಜಾರ ಸೊನ್ನೆ ಸುತ್ತಿದ್ದಾರೆ. ಈ ಬ್ಯಾಟಿಂಗ್‌ ವೈಫ‌ಲ್ಯದ ಬೆನ್ನಲ್ಲೇ ಪೂಜಾರ ಟೆಸ್ಟ್‌ ತಂಡದಿಂದ ಹೊರಬಿದ್ದರು.

ಮುಂಬಯಿ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟಿಗೆ 544 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತು. ಜವಾಬಿತ್ತ ಸೌರಾಷ್ಟ್ರ 220ಕ್ಕೆ ಕುಸಿಯಿತು. ಫಾಲೋಆನ್‌ ಬಳಿಕ ವಿಕೆಟ್‌ ನಷ್ಟವಿಲ್ಲದೆ 105 ರನ್‌ ಮಾಡಿದೆ. ಇನ್ನಿಂಗ್ಸ್‌ ಸೋಲಿನಿಂದ ಪಾರಾಗಲು ಇನ್ನೂ 219 ರನ್‌ ಗಳಿಸಬೇಕಿದೆ.

ಸೌರಾಷ್ಟ್ರವನ್ನು ಕಾಡಿದ ಬೌಲರ್‌ಗಳೆಂದರೆ ಮೋಹಿತ್‌ ಅವಸ್ಥಿ ಮತ್ತು ಶಮ್ಸ್‌ ಮುಲಾನಿ. ಇಬ್ಬರೂ 4 ವಿಕೆಟ್‌ ಕೆಡವಿದರು.

 

Advertisement

Udayavani is now on Telegram. Click here to join our channel and stay updated with the latest news.

Next