Advertisement

Ranji: ಕರ್ನಾಟಕದ ಮಿಂಚಿನ ಬೌಲಿಂಗ್‌

11:06 PM Feb 10, 2024 | Team Udayavani |

ಚೆನ್ನೈ: ಆತಿಥೇಯ ತಮಿಳುನಾಡಿನ ಮೇಲೆ ಮಿಂಚಿನ ಬೌಲಿಂಗ್‌ ದಾಳಿ ನಡೆಸಿದ ಕರ್ನಾಟಕ, ರಣಜಿ ಪಂದ್ಯದ ದ್ವಿತೀಯ ದಿನದಾಟದಲ್ಲಿ ಮೇಲುಗೈ ಸಾಧಿಸಿದೆ.

Advertisement

ಕರ್ನಾಟಕದ 366 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡಲಾರಂಭಿಸಿದ ತಮಿಳುನಾಡು, ಶನಿವಾರದ ಆಟದ ಅಂತ್ಯಕ್ಕೆ 129 ರನ್ನಿಗೆ 7 ವಿಕೆಟ್‌ ಕಳೆದುಕೊಂಡು ಪರದಾಡುತ್ತಿದೆ. ಇನ್ನೂ 237 ರನ್ನುಗಳ ಹಿನ್ನಡೆಯಲ್ಲಿದೆ.
ಬಲಗೈ ಸ್ಪಿನ್ನರ್‌ ಶಶಿಕುಮಾರ್‌ ಕೆ. ಮತ್ತು ಹಾರ್ದಿಕ್‌ ರಾಜ್‌ ಸೇರಿಕೊಂಡು ತಮಿಳುನಾಡು ಬ್ಯಾಟರ್‌ಗಳಿಗೆ ನೆಲೆ ತಪ್ಪುವಂತೆ ಮಾಡಿದರು. ಇವರಿಬ್ಬರು ಕ್ರಮವಾಗಿ 41ಕ್ಕೆ 3 ಹಾಗೂ 47ಕ್ಕೆ 2 ವಿಕೆಟ್‌ ಉರುಳಿಸಿದರು. ವಿದ್ವತ್‌ ಕಾವೇರಪ್ಪ ಮತ್ತು ವಿಜಯ್‌ಕುಮಾರ್‌ ವೈಶಾಖ್‌ ಒಂದೊಂದು ವಿಕೆಟ್‌ ಕೆಡವಿದರು.

55 ರನ್ನಿಗೆ ಬಿತ್ತು 6 ವಿಕೆಟ್‌!
ಒಂದು ಹಂತದಲ್ಲಿ ತಮಿಳುನಾಡು ಒಂದು ವಿಕೆಟಿಗೆ 66 ರನ್‌ ಮಾಡಿ ಸುಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಎನ್‌. ಜಗದೀಶನ್‌ ಅವರನ್ನು ಲೆಗ್‌ ಬಿಫೋರ್‌ ಮೂಲಕ ಔಟ್‌ ಮಾಡಿದ ಶಶಿಕುಮಾರ್‌ ಆತಿಥೇಯರ ಕುಸಿತಕ್ಕೆ ಚಾಲನೆ ನೀಡಿದರು. ಕೇವಲ 55 ರನ್‌ ಅಂತರದಲ್ಲಿ ತಮಿಳುನಾಡಿನ 6 ವಿಕೆಟ್‌ ಹಾರಿ ಹೋಯಿತು.

40 ರನ್‌ ಮಾಡಿದ ಜಗದೀಶನ್‌ ಅವರದೇ ತಮಿಳುನಾಡು ಸರದಿಯ ಸರ್ವಾಧಿಕ ಗಳಿಕೆ. ಬಾಬಾ ಅಪರಾಜಿತ್‌ 35 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಎರಡಂಕೆಯ ಸ್ಕೋರ್‌ ದಾಖಲಿಸಿದ ಮತ್ತೋರ್ವ ಆಟಗಾರ ವಿಮಲ್‌ ಕುಮಾರ್‌ (14). ಜಗದೀಶನ್‌-ವಿಮಲ್‌ ಕುಮಾರ್‌ ಮೊದಲ ವಿಕೆಟಿಗೆ 51 ರನ್‌ ಪೇರಿಸಿ ಉತ್ತಮ ಅಡಿಪಾಯ ನಿರ್ಮಿಸಿದ್ದರು.

ಪ್ರದೋಶ್‌ ಪೌಲ್‌ (5), ಸುರೇಶ್‌ ಲೋಕೇಶ್ವರ್‌ (3), ವಿಜಯ್‌ ಶಂಕರ್‌ (6), ಭೂಪತಿ ಕುಮಾರ್‌ (8), ನಾಯಕ ಸಾಯಿ ಕಿಶೋರ್‌ (2) ಅಗ್ಗಕ್ಕೆ ಔಟಾದರು.

Advertisement

ಪಡಿಕ್ಕಲ್‌ 151ಕ್ಕೇ ಔಟ್‌
ಮೊದಲ ದಿನದಾಟದಲ್ಲಿ 5 ವಿಕೆಟಿಗೆ 288 ರನ್‌ ಗಳಿಸಿದ್ದ ಕರ್ನಾಟಕ 366ಕ್ಕೆ ಆಲೌಟ್‌ ಆಯಿತು. ದೇವದತ್ತ ಪಡಿಕ್ಕಲ್‌ 151 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಆದರೆ ದ್ವಿತೀಯ ದಿನದಾಟದಲ್ಲಿ ಪಡಿಕ್ಕಲ್‌ ಒಂದೂ ರನ್‌ ಗಳಿಸದೆ ಪ್ರದೋಶ್‌ ಪೌಲ್‌ಗೆ ರಿಟರ್ನ್ ಕ್ಯಾಚ್‌ ನೀಡಿದರು. ದಿನದ ದ್ವಿತೀಯ ಎಸೆತದಲ್ಲೇ ಪಡಿಕ್ಕಲ್‌ ವಿಕೆಟ್‌ ಬೀಳುವುದರೊಂದಿಗೆ ಕರ್ನಾಟಕದ ಬೃಹತ್‌ ಮೊತ್ತದ ಯೋಜನೆ ಫ‌ಲಿಸಲಿಲ್ಲ.

35 ರನ್‌ ಮಾಡಿ ಆಡುತ್ತಿದ್ದ ಹಾರ್ದಿಕ್‌ ರಾಜ್‌ ಅರ್ಧ ಶತಕ ಬಾರಿಸುವಲ್ಲಿ ಯಶಸ್ವಿಯಾದರು (51). ಎಸ್‌. ಶರತ್‌ 45 ರನ್‌ ಕೊಡುಗೆ ಸಲ್ಲಿಸಿದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-366 (ಪಡಿಕ್ಕಲ್‌ 151, ಸಮರ್ಥ್ 57, ಹಾರ್ದಿಕ್‌ ರಾಜ್‌ 51, ಎಸ್‌. ಶರತ್‌ 45, ಅಜಿತ್‌ ರಾಮ್‌ 75ಕ್ಕೆ 4, ಸಾಯಿ ಕಿಶೋರ್‌ 102ಕ್ಕೆ 3, ಎಂ. ಮೊಹಮ್ಮದ್‌ 46ಕ್ಕೆ 2). ತಮಿಳುನಾಡು-7 ವಿಕೆಟಿಗೆ 129 (ಜಗದೀಶನ್‌ 40, ಬಾಬಾ ಅಪರಾಜಿತ್‌ ಬ್ಯಾಟಿಂಗ್‌ 35, ಶಶಿಕುಮಾರ್‌ ಕೆ. 41ಕ್ಕೆ 3, ಹಾರ್ದಿಕ್‌ ರಾಜ್‌ 47ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next