Advertisement

ಮುಳುಗುವ ಲಂಕೆಗೆ ಆಸರೆಯಾದರೇ ರಾನಿಲ್‌?

02:43 PM May 13, 2022 | Team Udayavani |

ಶ್ರೀಲಂಕಾದ ರಾಜಕೀಯ ಅನಿಶ್ಚಿತತೆಗೆ ಕಡೆಗೂ ತೆರೆಬಿದ್ದಿದೆ. ನೂತನ ಪ್ರಧಾನಿಯಾಗಿ ಯುನೈಟೆಡ್‌ ನ್ಯಾಶನಲ್‌ ಪಾರ್ಟಿಯ ರಾನಿಲ್‌ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದರು. ವಿಕ್ರಮಸಿಂಘೆ ಅವರು ಶ್ರೀಲಂಕಾದ ಪ್ರಧಾನಿ ಹುದ್ದೆಗೇರುತ್ತಿರುವುದು ಇದು 5ನೇ ಬಾರಿ ಎಂಬುದು ವಿಶೇಷ.

Advertisement

ಹಿಂದೆಂದೂ ಕಾಣದಂಥ ತೀವ್ರ ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಜನಸಂಘರ್ಷ ತೀವ್ರಗೊಂಡು ತುರ್ತುಪರಿಸ್ಥಿತಿ ಘೋಷಣೆಯಾಗಿದ್ದು, ಅಲ್ಲಿನ ಪ್ರಧಾನಿ ಮಹೀಂದ್ರ ರಾಜಪಕ್ಸ ರಾಜೀನಾಮೆ ನೀಡಿದ್ದು ಹಳೆಯ ಸಂಗತಿ. ವಿಪಕ್ಷದಲ್ಲಿದ್ದ ವಿಕ್ರಮಸಿಂಘೆ ಅವರ ಹೆಸರನ್ನು ನೂತನ ಪ್ರಧಾನಿ ಹುದ್ದೆಗೆ ಶಿಫಾರಸು ಮಾಡಲಾಗಿದೆ. ಈ ವಾರದ ಕೊನೆಯಲ್ಲಿ ನೂತನ ಪ್ರಧಾನಿ ಹಾಗೂ ಸಚಿವ ಸಂಪುಟದ ಕುರಿತು ಅಧ್ಯಕ್ಷರು ಘೋಷಣೆ ಹೊರಡಿಸುತ್ತಾರೆ ಎಂದು ಈ ಮೊದಲು ಸುದ್ದಿಯಾಗಿತ್ತು. ಆದರೆ ಅದಕ್ಕೂ ಮುಂಚೆಯೇ 73 ವರ್ಷದ ವಿಕ್ರಮ ಸಿಂಘೆ ಪ್ರಧಾನಿ ಹುದ್ದೆಗೇರಿದ್ದಾರೆ.

1994ರಿಂದಲೂ ಯುನೈಟೆಡ್‌ ನ್ಯಾಶನಲ್‌ ಪಾರ್ಟಿಯ ನಾಯಕರಾಗಿರುವ ವಿಕ್ರಮ ಸಿಂಘೆ, ರಾಜಕೀಯದಲ್ಲಿ ಏಳುಬೀಳುಗಳನ್ನು ಸಮಪ್ರಮಾಣದಲ್ಲಿ ಕಂಡ ವರು. ನಾಲ್ಕು ಅವಧಿಗೆ
ಶ್ರೀಲಂಕಾದ ಪ್ರಧಾನಿಯಾಗಿದ್ದರು. ಅದಕ್ಕೂ ಮೊದಲು ಹಣಕಾಸು ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಆರ್ಥಿಕ ಸುಧಾರಣೆಗೆ ಕಾರಣವಾದ ಹಲವು ಯೋಜನೆಗಳನ್ನು ಜಾರಿಗೆ ತಂದು ಅದರಲ್ಲಿ ಯಶ ಕಂಡಿದ್ದು ವಿಕ್ರಮಸಿಂಘೆಯವರ ಹೆಗ್ಗಳಿಕೆ.

ಈಗ ಅಗತ್ಯ ವಸ್ತುಗಳ ಕೊರತೆ, ತೈಲದ ಕೊರತೆ, ಆರ್ಥಿಕ ದಿವಾಳಿತನದಿಂದ ತತ್ತರಿಸಿರುವ ಶ್ರೀಲಂಕಾವನ್ನು ಮತ್ತೆ ಅಭಿವೃದ್ಧಿಯ ಹಳಿಗೆ ತರುವುದು ಅವರ ಎದುರಿಗಿರುವ ದೊಡ್ಡ ಸವಾಲು. ಈ ಹಿಂದೆ ಶ್ರೀಲಂಕಾಕ್ಕೆ ಅನುಕೂಲವಾಗುವಂಥ ಯೋಜನೆಗಳನ್ನು ರೂಪಿಸಿ ರಾಜಕೀಯ ಜಾಣ್ಮೆ ಪ್ರದರ್ಶಿಸುತ್ತಿದ್ದ, ಆ ಮೂಲಕ ನೆರೆಯ ರಾಷ್ಟ್ರಗಳೊಂದಿಗೆ ಬಾಂಧವ್ಯ ಗಟ್ಟಿಮಾಡಿಕೊಳ್ಳುತ್ತಿದ್ದ ವಿಕ್ರಮಸಿಂಘೆ, ಈ ಸಂಕಷ್ಟದ ಸಮಯದಲ್ಲಿ ಯಾವ ನೀತಿ ಅನುಸರಿಸಬಹುದು, ಸವಾಲು ಗಳಿಗೆ ಹೇಗೆ ಎದೆ ಯೊಡ್ಡಬಹುದು, ಹತಾಶೆಯ ಅಂಚಿಗೆ ತಲುಪಿರುವ ಜನ ರಲ್ಲಿ ಹೇಗೆ ಆತ್ಮವಿಶ್ವಾಸ ತುಂಬಬಹುದು, ಈಗಿನ ಅನಾಹುತಕ್ಕೆ ಕಾರಣರಾದ ರಾಜಪಕ್ಸೆ ಕುಟುಂಬದ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು ಎಂಬ ಕುತೂಹಲ ಎಲ್ಲರದ್ದಾಗಿದೆ. ಸದ್ಯದ ಸಂದರ್ಭವನ್ನು ಗಮನಿಸಿದರೆ, ಶ್ರೀಲಂಕಾ ಸುಸ್ಥಿತಿಗೆ ಮರಳಲು ವರ್ಷಗಳೇ ಬೇಕಾ ಗಬಹುದು. ಅಗತ್ಯ ವಸ್ತುಗಳ ಆಮದು ಸೇರಿ ಹಲವು ಬಗೆಯ ನೆರವು ಬೇಕಿ ರುವುದರಿಂದ ನೆರೆ ರಾಷ್ಟ್ರ ಗಳಾದ ಭಾರತ, ಚೀನ, ಜಪಾನ್‌ ಮತ್ತು ಜರ್ಮನಿ ಯೊಂದಿಗೆ ಸೌಹಾರ್ದ ಸಂಬಂಧ ಬೆಳೆಸುವುದೇ ವಿಕ್ರಮಸಿಂಘೆ ಅವರ ಯೋಜನೆ. ಸದ್ಯದ ಪರಿಸ್ಥಿತಿ ಯಲ್ಲಿ ಅವರಿಗೆ ಉಳಿದಿರುವ ದಾರಿಯೂ ಅದೊಂದೇ.

ಅಂದ ಹಾಗೆ, ರಾನಿಲ್‌ ವಿಕ್ರಮ ಸಿಂಘೆ ಅವರದ್ದು ಅತ್ಯಂತ ಶಕ್ತಿಯುತ ರಾಜಕೀಯ ಕುಟುಂಬ. ಇವರ ತಂದೆ ಎಸ್ಮೋಂಡ್‌ ವಿಕ್ರಮಸಿಂಘೆ ದೇಶದ ಬಹುದೊಡ್ಡ ವಕೀಲರು ಮತ್ತು ಮಾಧ್ಯಮಗಳ ಮಾಲಕರಾಗಿದ್ದರು. ಇವರ ಚಿಕ್ಕಪ್ಪ ಜೆ.ಆರ್‌. ಜಯವರ್ಧನೆ, ಶ್ರೀಲಂಕಾದ ಅತ್ಯಂತ ಶಕ್ತಿಯುತ ಅಧ್ಯಕ್ಷರಾಗಿದ್ದವರು. ರಾನಿಲ್‌ ವಿದ್ಯಾಭ್ಯಾಸ ಮುಗಿಸಿದ್ದು ಇಂಗ್ಲೆಂಡ್‌ನಲ್ಲಿ. 1977ರಲ್ಲಿ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದ್ದರು. ಆಗ ಅವರಿಗೆ ಕೇವಲ 28 ವರ್ಷ. ಅಂದಿನಿಂದ 2020ರ ವರೆಗೆ ಎಲ್ಲ ಚುನಾವಣೆಗಳಲ್ಲೂ ವಿಜಯ ಸಾಧಿಸಿದ್ದಾರೆ. ಹಾಗೆಯೇ ಜಯವರ್ಧನೆ ಮತ್ತು ಪ್ರೇಮದಾಸ ಸರಕಾರದಲ್ಲಿ ಕ್ಯಾಬಿನೆಟ್‌ ಸಚಿವರಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next