ರಾಣಿಬೆನ್ನೂರ: ನಗರ ಸೇರಿದಂತೆ ತಾಲೂಕಿನ ಪ್ರತಿ ಗ್ರಾಮವೂ ಬೆಂಗಳೂರು ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಕನಸು ನನ್ನದು. ಎಲ್ಲ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು. ಇಲ್ಲವಾದರೆ ಇಲ್ಲಿಂದ ಹೋಗಬಹುದು ಎಂದು ಪೌರಾಡಳಿತ ಸಚಿವ ಆರ್.ಶಂಕರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬುಧವಾರ ಇಲ್ಲಿನ ತಾಪಂ ಸಭಾಭವನದಲ್ಲಿ ನಡೆದ ತ್ತೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕ್ಷೇತ್ರದ ಮತದಾರರಿಗೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅಧಿಕಾರಿಗಳು ಮುಂದಾಗಬೇಕು ಎಂದರು.
ಪಕ್ಕದಲ್ಲಿಯೇ ಕುಳಿತಿದ್ದ ತಹಶೀಲ್ದಾರ್ ಸಿ.ಎಸ್. ಕುಲಕರ್ಣಿ ಅವರ ಕಡೆಗೆ ತಿರುಗಿ ಏನ್ರೀ.. ತಾಲೂಕಿನ ರೈತರು ಪಹಣಿ ಪತ್ರಿಕೆ ಪಡೆಯಲು ಇಡೀ ದಿವಸ ಸರತಿಯಲ್ಲಿ ಕಾದು ಪಡೆಯುವ ಪರಿಸ್ಥಿತಿ ನಿರ್ಮಾಣವಿದ್ದರೂ ಕಣ್ಣು ಮುಚ್ಚಿ ಕುಳುತ್ತಿದ್ದೀರಾ? ಇನ್ನೂ ಎರಡು ಕೌಂಟರ್ ತೆರದು ಸೇವೆ ನೀಡಲು ಸಾಧ್ಯವಿಲ್ಲವೇ? ತಕ್ಷಣ ಜನರಿಗೆ ಅನುಕೂಲ ಕಲ್ಪಿಸಲು ವ್ಯವಸ್ಥೆ ಮಾಡಿಕೊಳ್ಳಿ ಎಂದು ಸೂಚಿಸಿದರು.
ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಸರಕಾರದ ಸವಲತ್ತುಗಳ ಅದಾಲತ್ ಹಾಕಿಕೊಳ್ಳಲಾಗುವುದು, ಜನರಿಗೆ ಜಾಗೃತಿ ಮೂಡಿಸಲಾಗುವುದು. ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಬಸ್ ಪಾಸ್ ನೀಡುವಲ್ಲಿ ವಿಳಂಬವಾಗಬಾರದು. ಆಟೋದಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ಕೊಂಡೊಯ್ಯಬಾರದು, ನಗರದಲ್ಲಿ ರಿಂಗ್ ರಸ್ತೆಗೆ ಹಾಗೂ ರಸ್ತೆ ಅಗಲೀಕರಣಕ್ಕೆ ಅಗತ್ಯ ಕ್ರೀಯಾ ಯೋಜನೆ ತಯಾರಿಸಬೇಕು. ಕೊಳಗೇರಿ ಮುಕ್ತಗೊಳಿಸಬೇಕು, ಕ್ಷೇತ್ರದಾದ್ಯಂತ ವಸತಿಗೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ಎಲ್ಲರಿಗೂ ಮನೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಅವಶ್ಯವಿರುವ ಎಲ್ಲರಿಗೂ ಚಾಲನಾ ಪತ್ರ ನೀಡಲು ಅಧಿಕಾರಿಗಳು ಜಾಗೃತಿ ರೂಪದಲ್ಲಿ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಪ್ರತಿ ಇಲಾಖೆಯ ಅಧಿಕಾರಿಗಳಿಂದ ಪ್ರಗತಿ ಪರಿಶೀಲನೆ ವರದಿ ಜತೆಗೆ ಇಲಾಖೆಯಲ್ಲಿ ಆಗದಿರುವ ಕಾಮಗಾರಿ, ಆಗದಿರಲು ಕಾರಣ, ಮುಂದೆ ಏನಾಗಬೇಕು ಎಂಬುದರ ಕುರಿತು ಪಟ್ಟಿ ಮಾಡಿ ಕೊಡಿ ಎಂದು ತಾಕೀತು ಮಾಡಿದರು.
ಈ ವರೆಗೆ ನಡೆದ ಪ್ರಗತಿ ಕುರಿತ ಮಾಹಿತಿಯನ್ನು ಲೋಕೋಪಯೋಗಿ, ಸಮಾಜ ಕಲ್ಯಾಣ, ಎಪಿಎಂಸಿ, ಹೆಸ್ಕಾಂ, ಶಿಕ್ಷಣ ಇಲಾಖೆ, ತೋಟಗಾರಿಕೆ, ಕೃಷಿ, ಪಶು ಸಂಗೋಪನಾ ಇಲಾಖೆ, ಕಂದಾಯ, ಮಕ್ಕಳ ಮತ್ತು ಮಹಿಳಾ, ಹಿಂದುಳಿದ ವರ್ಗ, ಶುದ್ಧ ಕುಡಿಯುವ ನೀರಿನ ಇಲಾಖೆ, ಜಿಪಂ ಉಪ ವಿಭಾಗ, ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ತಹಶೀಲ್ದಾರ್ ಸಿ.ಎಸ್. ಕುಲಕರ್ಣಿ, ಪೌರಾಯುಕ್ತ ಡಾ| ಮಹಾಂತೇಶ ಎನ್., ಶಿಕ್ಷಣಾಧಿಕಾರಿ ಶ್ರೀಧರ ಎನ್., ತಾಪಂ ಇಒ ಎಸ್.ಎಂ. ಕಾಂಬ್ಳೆ, ವ್ಯವಸ್ಥಾಪಕ ಬಸವರಾಜ ಶಿಡೇನೂರ, ನಿರ್ದೇಶಕ ಅಶೋಕ ನಾರಜ್ಜಿ ಇದ್ದರು.
ಈ ಹಿಂದಿನ ಯಾವುದೇ ಪ್ರಗತಿ ವಿಚಾರ ನನಗೆ ಬೇಡ, ಮುಂದೇನಾಗಬೇಕು, ಪ್ರತಿ ಇಲಾಖೆಗೆ ಬೇಕಾದ ಸೌಲಭ್ಯ ಹಾಗೂ ಆಗಬೇಕಾಗಿರುವ ಕಾರ್ಯಗಳ ಮತ್ತು ಬೇಕಾದ ಅನುದಾನ ಕುರಿತ ಮಾಹಿತಿ ನೀಡಿ. ಕ್ರಿಯಾಯೋಜನೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದ ಮಾಹಿತಿ ನೀಡಬೇಕು. ಬೇಜವಾಬ್ದಾರಿ ಕಂಡು ಬಂದಲ್ಲಿ ಸಹಿಸಲಾಗದು.
•
ಆರ್. ಶಂಕರ್,
ಪೌರಾಡಳಿತ ಸಚಿವರು