ರಾಣಿಬೆನ್ನೂರ: ತುಂಗಭದ್ರ, ಕುಮದ್ವತಿ ನದಿಯ ಪ್ರವಾಹದ ಭೀತಿಯಿಂದಾಗಿ ಜನರು ಆತಂಕಕ್ಕೀಡಾಗಿದ್ದು, ರೈತರಂತೂ ಮತ್ತೆ ಸಾಲಬಾಧೆ ಹಾಗೂ ಬೆಳೆ ಹಾನಿಯಿಂದ ದಿಕ್ಕುತೋಚದಂತಾಗಿ ಸಂಕಷ್ಟ ಎದುರಿಸುವಂತಾಗಿದೆ.ರವಿವಾರ ಸ್ವಲ್ಪ ಮಟ್ಟಿಗೆ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೂ ಜಲಾಶಯಗಳು ಭರ್ತಿಯಾಗಿದ್ದರಿಂದ ನೀರಿನ ಹೊರಹರಿವು ಹೆಚ್ಚಾಗುತ್ತಲೇ ಇದೆ. ಪರಿಣಾಮ ತುಂಗಭದ್ರ ಹಾಗೂ ಕುಮದ್ವತಿ ನದಿಗಳು ತುಂಬಿ ಹರಿಯುತ್ತಿವೆ.
Advertisement
ಸಂಪರ್ಕ ರಸ್ತೆಗಳು ಕಡಿತ: ತಾಲೂಕಿನ ಹಲಗೇರಿ ತುಮ್ಮಿನಕಟ್ಟಿ ಮಾರ್ಗವಾಗಿ ಹೊನ್ನಾಳಿಗೆ ಹೋಗುವ ರಸ್ತೆಯ ಕುಪ್ಪೇಲೂರು ಹತ್ತಿರ ಕುಮದ್ವತಿ ನದಿ ಸೇತುವೆ ಮೇಲೆ ನೀರು ಹರಿದು ಸಂಪರ್ಕ ಕಡಿತವಾಗಿದೆ.
Related Articles
Advertisement
ಜಲಾವೃತಗೊಂಡ ಜಮೀನು: ಕುಮದ್ವತಿ ಹಾಗೂ ತುಂಗಭದ್ರ ನದಿ ತೀರದ ಗ್ರಾಮಗಳಾದ ತಾಲೂಕಿನ ಮುದೇನೂರ, ಮಾಕನೂರು, ನಾಗೇನಹಳ್ಳಿ, ಕವಲೆತ್ತು, ನದಿಹರಳಳ್ಳಿ, ಕೊಡಿಯಾಲ ಹೊಸಪೇಟೆ, ಚೌಡಯ್ಯದಾನಪುರ, ಚಂದಾಪುರ, ಚಿಕ್ಕಕುರುವತ್ತಿ, ಹರನಗಿರಿ, ಮೇಡ್ಲೇರಿ, ಊದಗಟ್ಟಿ, ಬೇಲೂರು, ಹೀಲದಹಳ್ಳಿ, ಕುಪ್ಪೇಲೂರ, ಮುಷ್ಟೂರು, ಹಿರೇಬಿದರಿ, ಐರಣಿ, ಕೋಣನತಂಬಗಿ, ಬೇಲೂರು ಸೇರಿದಂತೆ ಮತ್ತಿತರ ನದಿ ತೀರದ ಗ್ರಾಮದ ಒಟ್ಟು 4800 ಹೆಕ್ಟೇರ್ ಜಮೀನು ಜಲಾವೃತಗೊಂಡಿದೆ.
ಈಗಾಗಲೇ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹತ್ತಿ, ಮೆಕ್ಕೆಜೋಳ ಹಾಗೂ ತರಕಾರಿ ಬೆಳೆದ ನದಿ ತೀರದ ಜನರು ಹಾನಿಗೊಳಗಾಗಿದ್ದು, ಇದರ ಜತೆಗೆ 5 ದಿನಗಳಿಂದ ನದಿಯ ನೀರಿನ ಪ್ರಮಾಣ ಅಧಿಕವಾಗಿದ್ದು, ನದಿ ತೀರದ ಗ್ರಾಮಗಳ ರೈತರ ಬೆಳೆಗಳಾದ ಮೆಕ್ಕೆಜೋಳ, ಹತ್ತಿ, ಕಬ್ಬು, ಭತ್ತ, ಈರುಳ್ಳಿ, ಬೆಳ್ಳುಳ್ಳಿ, ಗೋವಿನಜೋಳ ಹಾಗೂ ವಿವಿಧ ತರಕಾರಿ ಬೆಳೆಗಳು ಜಲಾವೃತಗೊಂಡಿವೆ. ಇದರಿಂದ ಅನ್ನದಾತರು ಸಂಪೂರ್ಣ ಸಂಕಷ್ಟ ಎದುರಿಸುವಂತಾಗಿದೆ.