ರಾಣಿಬೆನ್ನೂರ: ಜಿಲ್ಲೆಯಲ್ಲಿ ಹರಿಯುವ ತುಂಗಭದ್ರ ನದಿಯ ಕೆಲ ಗ್ರಾಮಗಳಲ್ಲಿ ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಿಸುವುದು ಬಹಳ ಅವಶ್ಯವಾಗಿದೆ. ಇಲ್ಲವಾದಲ್ಲಿ ಪ್ರತಿ ಬೇಸಿಗೆಯಲ್ಲಿ
ಪ್ರಾಣಿ ಪಕ್ಷಿಗಳು, ಜನ ಜಾನುವಾರಗಳು ನೀರಿಗಾಗಿ ಪರದಾಡಬೇಕಾಗುವುದು ಎಂದು ಲಿಂಗನಾಯಕನಹಳ್ಳಿಯ ಚನ್ನವೀರ ಶಿವಯೋಗಿ ಸ್ವಾಮೀಜಿ ಹೇಳಿದರು.
ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಹರಿದು ಬಂದ ಕಾರಣ ಶನಿವಾರ ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದಲ್ಲಿ ರೈತ ಸಂಘಟನೆ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ತಾಲೂಕು ದಂಡಾಧಿಕಾರಿಗಳ ವತಿಯಿಂದ ನದಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ನೀರಿಲ್ಲದೆ ಯಾವ ಜೀವಿಯೂ ಬದುಕಲು ಅಸಾಧ್ಯ. ಈ ನಿಟ್ಟಿನಲ್ಲಿ ಸರ್ವರೂ ನೀರನ್ನು ಸಂರಕ್ಷಿಸುವ ಮಹತ್ತರವಾದ ಕಾರ್ಯ ಮಾಡಬೇಕು ಎಂದರು.
ಬೇಸಿಗೆ ಅವಧಿಯಲ್ಲಿ ಅದೆಷ್ಟೋ ರೈತರು ನೀರಿಲ್ಲದೆ ತಮ್ಮ ಬೆಳೆಗಳನ್ನು ಹಾನಿ ಮಾಡಿಕೊಂಡು ಸಂಕಷ್ಟಕ್ಕೀಡಾಗುತ್ತಾರೆ. ಅಷ್ಟೇ ಏಕೆ ಜಾನುವಾರಗಳು ಮತ್ತು ಪಕ್ಷಿಗಳು ಸಹ ನೀರಿಲ್ಲದೆ ಅಳಿವಿನಂಚಿನಲ್ಲಿ ಸಾಗುತ್ತಿರುತ್ತವೆ. ಇದಕ್ಕೆ ಶಾಶ್ವತ ಪರಿಹಾರವಾಗಿ ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಿಸಿ ಮಾನವ ಹಾಗೂ ಪ್ರಾಣಿ ಪಕ್ಷಿಗಳ ಸಂಕುಲಕ್ಕೆ ಸರ್ಕಾರ ಹಾಗೂ ಜನಪ್ರತಿನಿಧಿ ಗಳು ನೆರವಾಗಬೇಕೆಂದು ಶ್ರೀಗಳು ಹೇಳಿದರು.
ಗ್ರೇಡ್-2 ತಹಶೀಲ್ದಾರ್ ಡಿ.ಜಿ. ಹೆಗಡೆ ಮಾತನಾಡಿ, ಸರ್ವರೂ ನೀರನ್ನು ಮಿತವ್ಯಯವಾಗಿ ಬಳಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನೀರು ಸತತವಾಗಿ ಹರಿಯದೆ ಆ ನೀರನ್ನು ರಕ್ಷಿಸಲು ಮುಂದಾಗಬೇಕು. ನದಿಗಳಲ್ಲಿ ತಡೆಗೋಡೆಯಂತಹ ಕಾರ್ಯ ಮಾಡಲು ಮೇಲಧಿ ಕಾರಿಗಳಿಗೆ ತಿಳಿಸಲಾಗುವುದು. ರೈತರು ಮತ್ತು ನದಿಯ ನೀರನ್ನು ಅವಲಂಬಿಸುವ ಜನರು ಧೃತಿಗೆಡದೆ ಬೇಸಿಗೆಯ ಸಮಯದಲ್ಲಿ ಜಾಗೂರಕತೆಯಿಂದ ಇರಬೇಕು ಮತ್ತು ಕೃಷಿಗೆ ನೀರು ಬಳಸದೆ ಕುಡಿಯಲು ಮಾತ್ರ ಉಪಯೋಗಿಸಬೇಕು ಎಂದರು.
ರೈತ ಮುಖಂಡರಾದ ರವೀಂದ್ರಗೌಡ ಪಾಟೀಲ, ಶಿವನಗೌಡ ಚನ್ನಗೌಡ್ರ, ಸಿ.ಸಿ.ಸಣ್ಣಗೌಡ್ರ, ದಿಳ್ಳೆಪ್ಪ ಸತ್ತೆಪ್ಪನವರ, ಬಸವರಾಜ ಕೊಂಗಿ, ಹರಿಹರಗೌಡ ಪಾಟೀಲ, ರಮೇಶ ಕಾಟೇನಹಳ್ಳಿ, ವೀರಣ್ಣ ಜಂಬಗಿ, ರವಿ ಪಾಟೀಲ. ಗ್ರಾಮಲೆಕ್ಕಾಧಿಕಾರಿ ಚೇತನಕುಮಾರಿ, ಶರಣಗೌಡ ಕೆಂಪಗೌಡ್ರ, ದಿಳ್ಳೆಪ್ಪ ಅಂಕಸಾಪುರ, ಬಸನಗೌಡ ಚನ್ನಗೌಡ್ರ, ರವಿ ಚನ್ನಗೌಡ್ರ, ಹನುಮಂತಪ್ಪ ಅಕ್ಕಿ, ಆರ್ .ಬಿ.ದೊಡ್ಡಗೌಡ್ರ, ನಾಗಪ್ಪ ಮಾಸಣಗಿ, ವೇದಯ್ಯ
ಹಿರೇಮಠ, ಬಸನಗೌಡ ಸಂಕನಗೌಡ್ರ ಸೇರಿದಂತೆ ಮತ್ತಿತರರು ಇದ್ದರು.