Advertisement

ದೇವರಗುಡ್ಡ ದನದ ಜಾತ್ರೆ ಕರಿನೆರಳು

04:09 PM Oct 17, 2019 | Naveen |

„ಮಂಜುನಾಥ ಕುಂಬಳೂರ
ರಾಣಿಬೆನ್ನೂರ: ಈ ಬಾರಿ ನಿರಂತರ ಸುರಿದ ಮಳೆಯಿಂದ ರಾಜ್ಯದಲ್ಲೇ ಹೆಸರುವಾಸಿಯಾದ ತಾಲೂಕಿನ ಸುಕ್ಷೇತ್ರ ದೇವರಗುಡ್ಡದ ದನಗಳ ಜಾತ್ರೆಯಿಂದ ದನಗಳ ಮಾಲೀಕರು ದೂರ ಉಳಿದಿದ್ದಾರೆ.

Advertisement

ಮಾಲತೇಶ ದೇವಸ್ಥಾನ ಕೆಳಭಾಗದಲ್ಲಿನ ಶ್ರೀ ರಣದಮ್ಮ ದೇವಸ್ಥಾನ ಸುತ್ತಲೂ 1 ಕಿ.ಮೀ.ನಷ್ಟು ಜಾಗದಲ್ಲಿರುವ ಜಾನುವಾರು ಜಾತ್ರೆಗೆ ಈ ಬಾರಿ ಕಳೆದ ವರ್ಷಕ್ಕಿಂತ ಕಾಲು ಭಾಗದಷ್ಟು ದನಗಳು ಆಗಮಿಸಿಲ್ಲ.

ಎತ್ತುಗಳ ಮಾಲಕರು ಗುಡ್ಡದಲ್ಲಿಯೇ ಎತ್ತುಗಳನ್ನು ಕಟ್ಟಿಕೊಂಡು, ತಾತ್ಕಾಲಿಕ ಟೆಂಟ್‌ ಹಾಕಿಕೊಂಡಿದ್ದಾರೆ. ಕೆಲವರು ದೂರದ ಊರಿನಿಂದ ಇಲ್ಲಿಗೆ ಬರಲು ಹಿಂದೇಟು ಹಾಕಿದ್ದಾರೆ.

ಈ ವರ್ಷ ಸದ್ಯ ಸುಮಾರು 1000ಕ್ಕೂ ಅಧಿಕ ದನಗಳು ಆಗಮಿಸಿದ್ದು, ಇದರಿಂದ ರೈತರು, ದನಗಳ ಮಾಲಕರು, ಖರೀದಿದಾರರು, ಮಧ್ಯವರ್ತಿಗಳು, ಮೇವು ಮಾರಾಟಗಾರರು ಬಹಳಷ್ಟು ನೋವು ಅನುಭವಿಸುವಂತಾಗಿದೆ. ಗ್ರಾಪಂನವರು ದನಗಳ ಜಾತ್ರೆ ಸುಸೂತ್ರವಾಗಿ ನಡೆಯಲು ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ.

ನೂರಾರು ವರ್ಷಗಳ ಇತಿಹಾಸವಿರುವ ಈ ಜಾತ್ರೆ ಒಂದಿಲ್ಲೊಂದು ಕಾರಣಗಳಿಂದ ಸೊರಗುತ್ತಿದೆ. ಉತ್ತರ ಕರ್ನಾಟಕ ಮತ್ತಿತರ ಭಾಗಗಳಲ್ಲಿ ಉಂಟಾದ ಜಲಪ್ರಳಯದಿಂದ ಜಾನುವಾರು ಜಾತ್ರೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರಿಂದ ದನಗಳು ಹೆಚ್ಚಿನ ಪ್ರಮಾಣದಲ್ಲಿ ಬಾರದಿರುವುದು ನೋವು ತಂದಿದೆ ಎಂದು ಗ್ರಾಪಂ ಅಧ್ಯಕ್ಷೆ ಗದಿಗೆವ್ವ ಚಲವಾದಿ, ಉಪಾಧ್ಯಕ್ಷ ಚಂದ್ರಪ್ಪ ಉರ್ಮಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಮೂಡಲು ಕರು, ಕಸಿ, ಕಿಲಾರಿ, ಜವಾರಿ, ಕರಮಲಗಿ ಸೇರಿದಂತೆ ವಿವಿಧ ತಳಿಯ ಎತ್ತುಗಳು ಹಾಗೂ ಕರುಗಳು ಕಡಿಮೆ ಪ್ರಮಾಣದಲ್ಲಿ ಆಗಮಿಸಿವೆ. ಗೋಕಾಕ, ಮೀರಜ್‌, ವಿಜಾಪುರ, ಬೆಳಗಾವಿ, ಮಂಡ್ಯ, ಮೈಸೂರು, ಹಾಸನ, ಚಿತ್ರದುರ್ಗ, ಬಳ್ಳಾರಿ, ಜಮಖಂಡಿ, ಮಂಡ್ಯ, ಪಾಂಡವಪುರ, ಶಿವಮೊಗ್ಗ ಮುಂತಾದ ಕಡೆಗಳಿಂದ ಈ ಭಾರಿ ಹೆಚ್ಚಿನ ಪ್ರಮಾಣದ ದನಗಳು ಬರಲಿಲ್ಲವೆಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷೆ ರೇಣುಕವ್ವ ಹೊಂಜೋಗಿ, ಮೈಲಪ್ಪ ಗುಡಗೂರ, ನಾಗರಾಜ ಹಾಡೋರ, ಚಂದ್ರಪ್ಪ ಜಾಡರ, ಹೆಗ್ಗಪ್ಪ ಸಂಶಿ, ಬಸವರಾಜ ಮುಂಡವಾಡ, ಜಗದೀಶ ಹೆಗ್ಗೇರಿ ನೋವಿನಿಂದಲೇ ಹೇಳುತ್ತಾರೆ.

ದೇವರಗುಡ್ಡದಲ್ಲಿ ಎಲ್ಲಿ ನೋಡಿದರಲ್ಲಿ ಎತ್ತುಗಳು ಕಾಣ ಸಿಗುತ್ತಿದ್ದವು. ಆಗ ಸಂತಸವಾಗುತ್ತಿತ್ತು. ಆದರೆ ಈ ಭಾರಿ ಉಂಟಾದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ತಮ್ಮ ಎತ್ತುಗಳನ್ನು ಮಾರಲು ಬರಲಿಲ್ಲ, ಖರೀದಿದಾರರೂ ಹೆಚ್ಚಾಗಿ ಬಂದಿಲ್ಲ ಎಂದು ರೈತರನೇಕರು ನೋವು ಹಂಚಿಕೊಂಡರು. ಪ್ರತಿ ಜೋಡಿಗೆ 60 ಸಾವಿರದಿಂದ 2.50 ಲಕ್ಷ ರೂ.ವರೆಗೆ 100 ಜೋಡಿ ಎತ್ತುಗಳು ಮಾರಾಟವಾಗಿವೆ. ಈ ವರ್ಷ ಅತೀ ಹೆಚ್ಚು ಎಂದರೆ ಪಾಂಡವಪುರದ ಜೋಡೆತ್ತು 2.50 ಲಕ್ಷ ರೂ.ಗೆ ಮಾರಾಟವಾಗಿದ್ದು ವಿಶೇಷ ಎನ್ನುತ್ತಾರೆ ರೈತರು ಹಾಗೂ ಖರೀದಿದಾರರು.

Advertisement

Udayavani is now on Telegram. Click here to join our channel and stay updated with the latest news.

Next