Advertisement

ಅವಳಿ ನಗರ ಸ್ವಚ್ಛತಾ ಜಾಗೃತಿಗೆ ರಂಗೋಲಿ

01:13 PM Feb 07, 2020 | Team Udayavani |

ಗದಗ: ಮೂಲೆ ಮೂಲೆ ಬಿಸಾಡಿದ ತ್ಯಾಜ್ಯ ಸ್ವಚ್ಛಗೊಳಿಸುತ್ತಿರುವ ಜನ.. ರಂಗೋಲಿ ಬಿಡಿಸಿ, ಹೂವು ಕುಂಡಲಗಳನ್ನಿಟ್ಟು ಆವರಣ ಅಲಂಕರಿಸುತ್ತಿರುವ ಮಹಿಳೆಯರು.. ಇನ್ನು ಸುಂದರ ಚಿತ್ತಾಕರ್ಷಕ ರಂಗೋಲಿ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವ ಯುವಕರು..

Advertisement

ಇದೇನಪ್ಪ ಎಂದು ಆಶ್ಚರ್ಯ ಪಡಬೇಡಿ. ಅವಳಿ ನಗರವನ್ನು ಸ್ವಚ್ಛ, ಸುಂದರವನ್ನಾಗಿರಿಸಲು ಜನ ಜಾಗೃತಿಗಾಗಿ ಗದಗ-ಬೆಟಗೇರಿ ನಗರಸಭೆ ಸಿಬ್ಬಂದಿ ನಡೆಸುತ್ತಿರುವ ವಿನೂತನ ಪ್ರಯತ್ನವಿದು. ಗದಗ-ಬೆಟಗೇರಿ ಅವಳಿ ನಗರದಲ್ಲಿ ಸ್ವತ್ಛತೆ ಕಾಪಾಡುವಂತೆ ಜನರಲ್ಲಿ ಅರಿವು ಹೆಚ್ಚಿಸಲು ಈಗಾಗಲೇ ವಿವಿಧ ರೀತಿ ಪ್ರಯತ್ನ ಮುಂದುವರಿಸಿವೆ. ಆ ಪೈಕಿ ಮನೆಯಿಂದಲೇ ಹಸಿ-ಒಣ ಕಸ ಪ್ರತ್ಯೇಕಿಸಿ, ಸಂಗ್ರಹಿಸುವುದು, ಪ್ಲಾಸ್ಟಿಕ್‌ ಬಳಕೆ ನಿಷೇಧ ಸೇರಿದಂತೆ ಸ್ವಚ್ಛ ಪರಿಸರಕ್ಕಾಗಿ ಹಲವು ಉಪ ಕ್ರಮಗಳನ್ನು ಕೈಗೊಂಡಿದೆ. ಆದರೆ, ಕಸ ಸಂಗ್ರಹಿಸುವ ವಾಹನಗಳ ಕೊರತೆ ಮತ್ತಿತರೆ ಕಾರಣಗಳಿಂದಾಗಿ ಅದು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ.

ಹೀಗಾಗಿ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳ ಜನ ವಸತಿ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಮೂಲದಿಂದಲೇ ಕಸ ಸಂಗ್ರಹಿಸಲು ಪ್ರತ್ಯೇಕ ಸಮಯ ನಿಗದಿಪಡಿಸಿದೆ. ಆದರೂ, ಜನ ರಸ್ತೆಬದಿಗೆ, ಓಣಿಯ ಮೂಲೆ ಮತ್ತು ಖಾಲಿ ಜಾಗೆಯಲ್ಲಿ ಕಸ ಬಿಸಾಡುವ ಪರಿಪಾಠ ಮುಂದುವರಿಸಿದ್ದಾರೆ. ಹೀಗಾಗಿ ವಿವಿಧೆಡೆ ಕಸದ ರಾಶಿ ತಲೆ ಎತ್ತುತ್ತಿದ್ದು, ಹಂದಿ, ದನಗಳು ತ್ಯಾಜ್ಯ ಎಳೆದಾಡುವುದರಿಂದ ರಸ್ತೆ ತುಂಬೆಲ್ಲ ಹರಡುತ್ತಿದೆ. ಇದರಿಂದ ಅಲ್ಲಿನ ವಾತಾವರಣ ಕಲುಷಿತಗೊಳ್ಳುತ್ತಿದೆ. ಅದರ ಮೇಲೆ ಜನರ ಮಲ-ಮೂತ್ರ ಮಾಡುವುದರಿಂದ ಜನರು ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಅವಳಿ ನಗರದಲ್ಲಿ ನೈರ್ಮಲ್ಯ ಹರಡುತ್ತಿರುವುದು ನಗರಸಭೆ ಸ್ವಚ್ಛತಾ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ.

ತ್ಯಾಜ್ಯ ಸುರಿಯುವ ಸ್ಥಳದಲ್ಲಿ ರಂಗೋಲಿ!: ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಕಸ ಸುರಿಯುವ ಸುಮಾರು ನೂರಕ್ಕೂ ಹೆಚ್ಚು ಸ್ಥಳಗಳನ್ನು ನಗರಸಭೆ ಅಧಿಕಾರಿಗಳು ಗುರುತಿಸಿದ್ದಾರೆ. ಆಯಾ ಸ್ಥಳದಲ್ಲಿ ತ್ಯಾಜ್ಯ ಸುರಿಯುವುದನ್ನು ತಪ್ಪಿಸಿ, ನಗರಸಭೆ ವಾಹನಗಳಿಗೆ ಕಸ ನೀಡುವಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾ ರೆ. ಪ್ರತಿ ವಾರ್ಡ್‌ನಲ್ಲಿ ರಸ್ತೆ, ಚರಂಡಿ ಸ್ವಚ್ಛಗೊಳಿಸಿದ ಬಳಿಕ ನಗರಸಭೆ ಸಿಬ್ಬಂದಿ, ಆಯಾ ವಾರ್ಡ್‌ನಲ್ಲಿ ಬಿದ್ದಿರುವ ಕಸದ ರಾಶಿ ತೆರವುಗೊಳಿಸಿ, ನೀರಿನಿಂದ ಸ್ವಚ್ಛಗೊಳಿಸುತ್ತಾರೆ. ಬಳಿಕ ಅದೇ ಸ್ಥಳದಲ್ಲಿ ಚೆಂದದ ರಂಗೋಲಿ ಬಿಡಿಸಿ, ಹೂ ಕುಂಡಗಳನ್ನಿಟ್ಟು, ಆಕರ್ಷಿಸುವಂತೆ ಮಾಡುತ್ತಿದ್ದಾರೆ. ಈ ಮೂಲಕ ಜನರಲ್ಲಿ ಸ್ವತ್ಛತೆ ಅರಿವು ಮೂಡಿಸಲು ಶ್ರಮಿಸುತ್ತಿದ್ದಾರೆ.

ಕಳೆದೆರಡು ದಿನಗಳಿಂದ ಅವಳಿ ನಗರದ ಶಹಪುರ ಪೇಟೆ, ಭೀಷ್ಮಕೆರೆ, ಸಿಂಹದಕೆರೆ, ದತ್ತಾತ್ರೇಯ ದೇವಸ್ಥಾನ, ನಾಮಜೋಶಿ ರಸ್ತೆ, ಸಿದ್ಧಲಿಂಗರ, ಬೆಟಗೇರಿಯ ಮಾರುಕಟ್ಟೆ ಮುಂಭಾಗದಲ್ಲಿ ಸಂಗ್ರಹಗೊಂಡಿದ್ದ ರಾಶಿ ರಾಶಿ ತ್ಯಾಜ್ಯ ತೆರವುಗೊಳಿಸಿ, ಹೂವು ಕುಂಡಗಳಿನ್ನಿಟ್ಟು ಜನಾಕರ್ಷಣೆಯ ತಾಣವನ್ನಾಗಿಸಿದ್ದಾರೆ. ಜೊತೆಗೆ ಅದೇ ಸ್ಥಳದಲ್ಲಿ ಓರ್ವ ಪೌರ ಕಾರ್ಮಿಕ ದಿನವಿಡೀ ಸಂಜೆವರೆಗೆ ಕಾವಲಿದ್ದು, ಯಾರಾದರೂ ಕಸ ಸುರಿಯಲು ಬಂದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ನಗರಸಭೆ ಕಸದ ವಾಹನಗಳಿಗೇ ಕಸ ನೀಡಬೇಕು. ಬೇಕಾಬಿಟ್ಟಿಯಾಗಿ ಕಸ ಸುರಿದು ನೈರ್ಮಲ್ಯ ಹರಡಬಾರದು ಎಂದು ಮನವರಿಕೆ ಮಾಡಿಕೊಡುತ್ತಿದ್ದಾರೆ.  ನಗರಸಭೆ ಈ ಕ್ರಮಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ವಾಹನಗಳ ಕೊರತೆಯಿಂದ ಮನೆಯಿಂದಲೇ ಕಸ ಸಂಗ್ರಹಿಸುವಲ್ಲಿ ಕೊಂಚ ವಿಳಂಬವಾಗುತ್ತಿದೆ. ಆದರೆ, ವಾಹನಬರುವವರೆಗೆ ಕಸವನ್ನು ಮನೆಯಲ್ಲೇ ಇಟ್ಟುಕೊಂಡು, ಬಳಿಕ ವಾಹನಗಳಿಗೆ ನೀಡಬೇಕು. ಆದರೆ, ಜನರು ನಿರ್ಲಕ್ಷ್ಯದಿಂದ ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವುದು, ಸಮಸ್ಯೆಯಾಗುತ್ತಿದೆ. ಇದರಿಂದ ಜನರ ಆರೋಗ್ಯ ಮತ್ತು ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡಲು ಈ ರೀತಿಯ ಪ್ರಯತ್ನ ನಡೆಸಿದ್ದೇವೆ. ಸದ್ಯದಲ್ಲೇ 25 ವಾಹನಗಳು ನಗರಸಭೆಗೆ ಪೂರೈಕೆಯಾಗಲಿದ್ದು, ಎಲ್ಲ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲಿವರೆಗೆ ಜನರು ಸಹಕರಿಸಬೇಕು.  –ಮನ್ಸೂರ್‌ ಅಲಿ, ಪೌರಾಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next