Advertisement

ಕನ್ನಡ ರಾಜ್ಯೋತ್ಸವದಂದೇ ಕಣಕ್ಕಿಳಿಯಲಿದ್ದಾಳೆ ರಂಗನಾಯಕಿ!

10:09 AM Oct 11, 2019 | Team Udayavani |

ದಯಾಳ್ ಪದ್ಮನಾಭನ್ ನಿರ್ದೇಶನದ ರಂಗನಾಯಕಿ ಚಿತ್ರ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ತೆರೆಗಾಣಲು ಮುಹೂರ್ತ ನಿಗಧಿಯಾಗಿದೆ. ಈ ವಿಚಾರವನ್ನು ಜಾಹೀರು ಮಾಡುತ್ತಲೇ ದಯಾಳ ಮತ್ತೊಂದು ಖುಷಿಯ ಸಂಗತಿಯನ್ನೂ ಹೇಳಿಕೊಂಡಿದ್ದಾರೆ. ಈ ಚಿತ್ರ ಈ ವರ್ಷದ ಗೋವಾ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ಗೆ ಇಂಡಿಯನ್ ಪನೋರಮಾ ವಿಭಾಗದಲ್ಲಿ ಆಯ್ಕೆಯಾಗಿದೆ. ಅಂದಹಾಗೆ ಈ ವರ್ಷ ಈ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಏಕೈಕ ಕನ್ನಡದ ಚಿತ್ರವೆಂಬ ಹಗ್ಗಳಿಕೆಗೂ ರಂಗನಾಯಕಿ ಪಾತ್ರವಾಗಿದೆ.

Advertisement

ಅತ್ಯಂತ ಅಪರೂಪವೆನ್ನಿಸೋ ಕಥೆಗಳನ್ನೇ ದೃಷ್ಯವಾಗಿಸೋದರಲ್ಲಿ ದಯಾಳ್ ಪದ್ಮನಾಭನ್ ನಿಸ್ಸೀಮರು. ಈ ಮಾತಿಗೆ ಈವರೆಗಿನ ಅವರ ಸಿನಿಮಾ ಗ್ರಾಫ್ ಉದಾಹರಣೆಯಾಗಿ ನಿಲ್ಲುತ್ತದೆ. ಆದರೆ ಇದುವರೆಗಿನ ದಯಾಳ್ ಸಿನಿಮಾ ಯಾನದಲ್ಲಿ ರಂಗನಾಯಕಿ ವಿಶಿಷ್ಟವಾದ ಚಿತ್ರವಾಗೋ ಲಕ್ಷಣ ಆರಂಭದಲ್ಲಿಯೇ ಸಿಕ್ಕಿದೆ. ಗೋವಾ ಅಂತಾರಾಷ್ಟ್ರಯ ಚಲನಚಿತ್ರೋತ್ಸವಕ್ಕೆ ಸಿನಿಮಾವೊಂದು ಆಯ್ಕೆಯಾಗೋದು ಸುಮ್ಮನೆ ಮಾತಲ್ಲ. ಅಲ್ಲಿ ಅತ್ಯಂತ ಬಿರುಸಿನ ಸ್ಪರ್ಧೆಯಿರುತ್ತದೆ. ನಾನಾ ಭಾಷೆಗಳ ನಡುವೆ ಸ್ಪರ್ಧೆಯಲ್ಲಿ ಗೆಲ್ಲಬೇಕೆಂದರೆ ಗಟ್ಟಿ ಕಥೆಯೂ ಸೇರಿದಂತೆ ಎಲ್ಲದರಲ್ಲಿಯೂ ಗಟ್ಟಿತನ ಇರಬೇಕಾಗುತ್ತದೆ. ಅಂಥಾ ಸ್ಪರ್ಧೆಯನ್ನು ಜಯಿಸಿಕೊಂಡು ಈ ಚಲನ ಚಿತ್ರೋತ್ಸವದಲ್ಲಿ ಜಾಗ ಗಿಟ್ಟಿಸಿಕೊಂಡಿರೋದೇ ರಂಗನಾಯಕಿಯ ನಿಜವಾದ ತಾಕತ್ತೆಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಅತ್ಯಾಚಾರಕ್ಕೀಡಾದ ಹೆಣ್ಣುಮಗಳೊಬ್ಬಳ ಕಥಾನಕವನ್ನೊಳಗೊಂಡಿರೋ ರಂಗನಾಯಕಿ ಚಿತ್ರವನ್ನು ಎಸ್.ವಿ ನಾರಾಯಣ್ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಅಟೆಂಪ್ಟ್ ಟು ಮರ್ಡರ್ ಎಂಬ ಚಿತ್ರದ ಮೂಲಕ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದ್ದ ನಾರಾಯಣ್ ಭಿನ್ನ ಅಭಿರುಚಿಯ ನಿರ್ಮಾಪಕರು. ವಿಶೇಷವಾದ ಕಥೆ ಹೊಂದಿರೋ ಸಿನಿಮಾ ನಿರ್ಮಾಣ ಮಾಡಬೇಕೆಂಬ ತುಡಿತ ಹೊಂದಿರೋ ಅವರು ರಂಗನಾಯಕಿ ಚಿತ್ರವನ್ನು ಪ್ರೀತಿಯಿಂದ ನಿರ್ಮಾಣ ಮಾಡಿದ್ದಾರೆ. ಯಾವುದಕ್ಕೂ ಕೊರತೆಯಾಗದಂತೆ, ದಯಾಳ್ ಅವರ ಕನಸಿಗೆ ಮತ್ತಷ್ಟು ಮೆರುಗು ಬರುವಂತೆ ರೂಪಿಸಿದ್ದಾರೆ. ಇದೆಲ್ಲದರಿಂದಾಗಿ ಈ ಚಿತ್ರವೀಗ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗೋ ಮೂಲಕ ಕನ್ನಡದ ಘನತೆಯನ್ನು ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next