Advertisement

ರಂಗೇನಹಳ್ಳಿ ರಸ್ತೆ ದುರವಸ್ಥೆ

01:13 PM Dec 13, 2019 | Suhan S |

ಹೊಳೆನರಸೀಪುರ: ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ರಂಗೇನಹಳ್ಳಿ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

Advertisement

ಗುಂಡಿ ಮಯವಾಗಿರುವ ರಸ್ತೆ: 1998ರಲ್ಲಿ ದೊಡ್ಡೇಗೌಡರು ಶಾಸಕರಾಗಿದ್ದ ಅವಧಿಯಲ್ಲಿ ನಿರ್ಮಾಣವಾಗಿದ್ದ ರಸ್ತೆ ಗುಂಡಿ ಮಯವಾಗಿದೆ. ಗ್ರಾಮಕ್ಕೆ ಉತ್ತಮ ರಸ್ತೆ ನಿರ್ಮಿಸುವಂತೆ ಶಾಸಕ ಎ.ಟಿ.ರಾಮಸ್ವಾಮಿ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಹೊಸದಾಗಿ ರಸ್ತೆ ನಿರ್ಮಿಸದೇ ಗುಂಡಿಗಳಿಗೆ ತೇಪೆ ಹಾಕಲು ಮುಂದಾಗಿದ್ದರು. ನಾವು ರಸ್ತೆಗೆ ತೇಪೆ ಹಾಕಲು ಬಂದವರನ್ನು ವಾಪಸ್‌ ಕಳುಹಿಸಿದ್ದೇವೆ ಎಂದು ಗ್ರಾಮದ ಮುಖಂಡರಾದ ರಾಜಯ್ಯ, ಸ್ವಾಮಿಗೌಡ ಹೇಳಿದರು.

ಈ ಹಿಂದೆ ಎರಡು ಬಾರಿ ಶಾಸಕರಾಗಿದ್ದ ಎ.ಮಂಜು ಅವರು ತಮ್ಮ ಅಧಿಕಾರಾವಧಿಯಲ್ಲಿ ರಸ್ತೆಗೆ ತೇಪೆ ಹಾಕಲು ಮುಂದಾಗಿದ್ದರು. ಆಗಲೂ ನಾವು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದೆವು ಎಂದು ಗ್ರಾಮಸ್ಥರು ಹೇಳುತ್ತಾರೆ. ದೇವಾಲಯಕ್ಕೆ ರಸ್ತೆಯಿಲ್ಲ: ಆಟೋ ಚಾಲಕ ದೇವರಾಜು ಮಾತನಾಡಿ, ರಂಗೇನಹಳ್ಳಿ ಗ್ರಾಮದ ಸಮೀಪ ಚನ್ನಾಗಳಮ್ಮ ಶಕ್ತಿ ದೇವತೆಯ ದೇವಾಲಯವಿದ್ದು, ಈ ದೇವಾಲಯಕ್ಕೆ ದೂರದೂರುಗಳಿಂದ ಸಾಕಷ್ಟು ಮಂದಿ ಬಂದು ತಮ್ಮ ಹರಕೆ ತೀರಿಸುತ್ತಾರೆ. ಆದರೆ, ಇಲ್ಲಿಗೆ ಬರಲು ಸರಿಯಾದ ರಸ್ತೆ ಇಲ್ಲದೇ ಆಟೋಗಳಲ್ಲಿ ಬಂದು ತಮ್ಮ ಹರಕೆ ತೀರಿಸಬೇಕಿದೆ ಎಂದರು.

ಗುಂಡಿ ಬಿದ್ದ ರಸ್ತೆಯಲ್ಲಿ ಆಟೋ ಮತ್ತು ದ್ವಿಚಕ್ರವಾಹದಲ್ಲಿ ಸಂಚರಿಸುವವರು ಬಿದ್ದು ಗಾಯಗೊಂಡಿದ್ದಾರೆ. ಗ್ರಾಮದ ಜನರು ರಸ್ತೆ ದುರವಸ್ಥೆಯಿಂದ ಪರಿತಪಿಸುತ್ತಿದ್ದರೂ ಜನ ಪ್ರತಿನಿಧಿಗಳು ಮಾತ್ರ ತಮಗೆ ಸಮಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆಂದು ಗ್ರಾಮಸ್ಥರು ಆಪಾದಿಸಿದ್ದಾರೆ.

ಚುನಾವಣೆ ನಂತರ ನಿರ್ಲಕ್ಷ್ಯ: ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ ಕೇಳಲು ಬಂದ ಅಭ್ಯರ್ಥಿಗಳಿಗೆ ಹೊಸ ರಸ್ತೆ ನಿರ್ಮಿಸುವುದಾದರೆ ಮಾತ್ರ ಮತ ಹಾಕುವುದಾಗಿ ತಿಳಿಸಿದ್ದೆವು. ಆದರೆ ಚುನಾವಣೆಯಲ್ಲಿ ಜಯಗಳಿಸಿದ ನಂತರ ಶಾಸಕ ಎ.ಟಿ.ರಾಮ ಸ್ವಾಮಿ ಇತ್ತಕಡೆ ಬಂದಿಲ್ಲ. ಅರಕಲಗೂಡು ಸುತ್ತಮುತ್ತ ಬಹುತೇಕ ಎಲ್ಲಾ ಗ್ರಾಮಗಳಿಗೂ ಉತ್ತಮವಾದ ರಸ್ತೆ ನಿರ್ಮಿಸಿದ್ದಾರೆ. ಅದರಂತೆ ನಮ್ಮ ಗ್ರಾಮದ ರಸ್ತೆಗೂ ಡಾಂಬರೀಕರಣ ಮಾಡಲಿ ಎಂದು ಆಗ್ರಹಿಸಿದರು.

Advertisement

ಮಾಜಿ ಸಚಿವ ರೇವಣ್ಣ ನಿರ್ಲಕ್ಷ್ಯ: 1998 ರ ನಂತರ ಶಾಸಕರಾದ ಎಚ್‌.ಡಿ.ರೇವಣ್ಣ ಅವರು ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಪಾದಿಸಿದರು.

 

-ಎನ್‌.ಎಸ್‌.ರಾಧಾಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next