Advertisement

ರಂಗೇರಿದ ಚುನಾವಣ ಕಣ; ಕೊನೆ ಹಂತದ ಕಸರತ್ತಿನಲ್ಲಿ ಅಭ್ಯರ್ಥಿಗಳು

11:36 PM Nov 08, 2019 | mahesh |

ಮಹಾನಗರ: ಮಹಾನಗರ ಪಾಲಿಕೆಯ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇನ್ನು ಕೇವಲ ಒಂದು ದಿನವಷ್ಟೇ ಬಾಕಿಯಿರಬೇಕಾದರೆ ಪ್ರತಿಯೊಂದು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳ ಮತ ಬೇಟೆಯೂ ಬಿರುಸಿನಿಂದ ಸಾಗಿದೆ.

Advertisement

ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತ ಹಾಕುವಂತೆ ಕೊನೆಯ ಕಸರತ್ತು ನಡೆಸುತ್ತಿರುವ ಸನ್ನಿವೇಶ ಬಹುತೇಕ ವಾರ್ಡ್‌ಗಳಲ್ಲಿ ಈಗ ಸಾಮಾನ್ಯವಾಗಿದೆ. ಕೆಲವು ಕಡೆಗಳಲ್ಲಿ ರೋಡ್‌ ಶೋ ಮುಖೇನ ಮತದಾರರನ್ನು ಸೆಳೆಯುತ್ತಿದ್ದಾರೆ. ಕೆಲವೊಂದು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಮೊದಲನೇ ಹಂತದ ಪ್ರಚಾರ ಮುಗಿಸಿ ಎರಡನೇ ಹಂತದ ಪ್ರಚಾರದಲ್ಲಿ ತೊಡಗಿದ್ದಾರೆ.

“ಸುದಿನ’ ತಂಡವು ಶುಕ್ರವಾರ ವಾರ್ಡ್‌ ಸಂಚಾರ ನಡೆಸಬೇಕಾದರೆ, ಮಹಾನಗರ ಪಾಲಿಕೆಯ ಪ್ರಮುಖ ವಾರ್ಡ್‌ಗಳ ಪೈಕಿ ದೇರೆಬೈಲ್‌ ದಕ್ಷಿಣ ವಾರ್ಡ್‌ನಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುತ್ತಿರುವುದು ಕಾಣಿಸಿತು. ಈ ವಾರ್ಡ್‌ನ ಲ್ಯಾಂಡ್‌ ಲಿಂಕ್ಸ್‌ ಜನವಸತಿ ಪ್ರದೇಶದಲ್ಲಿ ಈಗಾಗಲೇ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಒಂದು ಬಾರಿ ಮತ ಯಾಚನೆಗೆ ಮನೆಗೆ ಬಂದು ಹೋಗಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಹೇಳಿದರು.

ಅಭ್ಯರ್ಥಿಗಳು ಹೆಚ್ಚಾಗಿ ಸಂಜೆ ಸಮಯವನ್ನು ತಮ್ಮ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮಧ್ಯಾಹ್ನ ವೇಳೆ ಒಂದೆಡೆ ಬಿಸಿಲಿನ ಪೆಟ್ಟು ನೆತ್ತಿ ಮೇಲಿದ್ದರೆ, ನಗರದ ಹೆಚ್ಚಿನ ಮನೆಗಳ ಮಂದಿ ಕೆಲಸಗಳಿಗೆ ತೆರಳಿರುವುದರಿಂದ ಮನೆಗೆ ಬೀಗ ಹಾಕಿರುತ್ತದೆ. ಇದನ್ನು ಗಮನಿಸಿದ ಬೆಳಗ್ಗೆ ಮತ್ತು ಸಂಜೆ ವೇಳೆ ಪ್ರಚಾರಕ್ಕೆ ಆದ್ಯತೆ ನೀಡುತ್ತೇವೆ ಎನ್ನುತ್ತಾರೆ ಕೊಡಿಯಾಲಬೈಲ್‌ ವಾರ್ಡ್‌ನ ಪ್ರಮುಖ ಪಕ್ಷದ ಅಭ್ಯರ್ಥಿ.

ಮನೆ ಮನೆಗೆ ತೆರಳಿ ಮತಬೇಟೆ
ಜೆಡಿಎಸ್‌ ಪಕ್ಷದ ಪ್ರಮುಖರು ಮಹಾನಗರ ಪಾಲಿಕೆ ಚುನಾವಣೆಯ ಬಂದರು ವಾರ್ಡ್‌ಗಳಲ್ಲಿ ಪ್ರಚಾರದಲ್ಲಿ ತೊಡಗಿರುವುದು ಕಂಡು ಬಂತು. ಯುವ ಘಟಕದ ಅಧ್ಯಕ್ಷ ಅಕ್ಷಿತ್‌ ಸುವರ್ಣ, ಮಂಗಳೂರು ದಕ್ಷಿಣ ಅಧ್ಯಕ್ಷ ವಸಂತ ಪೂಜಾರಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಬೇಟೆ ನಡೆಸುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ರೋಡ್‌ ಶೋ ಮುಖೇನ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಕೇಳುತ್ತಿದ್ದಾರೆ.
ನಗರದ ಹಂಪನಕಟ್ಟೆ ಬಳಿ ಬಸ್‌ ನಿಲ್ದಾಣದಲ್ಲಿ ಬಸ್ಸಿಗೆ ಕಾಯುತ್ತಿದ್ದ ಶೇಖರ ಎನ್ನುವವರನ್ನು “ಸುದಿನ’ ಮಾತನಾಡಿಸಿದಾಗ “ಓಟ್‌ಡ್‌ ಏರ್‌ ಗೆಂದ್‌ ಬತ್ತ್ಂಡಲಾ ಆತೆ. ನಮ್ಮ ಬಂಜಿಗ್‌ ನಮನೇ ಬೆನೊಡು. ಇತ್ತೆ ಮಾತ ಪಕ್ಷದಕುಲು ಇಲ್ಲಡೆ ಇಲ್ಲಡೆ ಬರೆ³ರ್‌. ಓಟ್‌ ಆಯೆನೆಡ್‌ ಬೊಕ್ಕ ನಮನ್‌ ನೆಂಪಾಪುಜಿ’ (ಮತದಾನದಲ್ಲಿ ಯಾರು ಗೆದ್ದರೂ ಅಷ್ಟೆ. ನಮ್ಮ ಹೊಟ್ಟೆ ತುಂಬಲು ನಾವು ಕೆಲಸ ಮಾಡಬೇಕು. ಈಗ ಎಲ್ಲ ಪಕ್ಷದವರು ಮನೆ ಮನೆಗೆ ಬರುತ್ತಾರೆ. ಮತದಾನ ಮುಗಿದ ಬಳಿಕ ನಮ್ಮ ನೆನಪಾಗುವುದಿಲ್ಲ) ಎನ್ನುತ್ತಾರೆ.

Advertisement

ಮತ್ತೂಂದೆಡೆ ಬೆಂಗರೆ ಪ್ರದೇಶದಲ್ಲಿ ಎಸ್‌ಡಿಪಿಐ ಕೂಡ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು ಮತ ಪ್ರಚಾರ ಜೋರಾಗಿ ನಡೆಸುತ್ತಿರುವುದು ಅಲ್ಲಿಗೆ ಭೇಟಿ ನೀಡಿದಾಗ ಕಾಣಿಸಿತು. ಶುಕ್ರವಾರ ಬೆಂಗರೆ ಪ್ರದೇಶದಲ್ಲಿ ಎಸ್‌ಡಿಪಿಐ ಮುಖಂಡರು ಪ್ರಚಾರದಲ್ಲಿ ನಿರತರಾಗಿದ್ದರು. ಈ ಪ್ರದೇಶದಲ್ಲಿ ಕಾರ್ಯಕರ್ತರು ಮನೆ ಮನೆಗೂ ತೆರಳಿ ಮತ ಯಾಚನೆ ಮಾಡುತ್ತಿದ್ದರು.

“ಸ್ಮಾರ್ಟ್‌ ಸಿಟಿಯಾಗಿ ಮಂಗಳೂರು ಆಯ್ಕೆಗೊಂಡಿದೆ. ನಗರ ಮತ್ತಷ್ಟು ಅಭಿವೃದ್ಧಿ ಕಾಣಬೇಕಿದೆ. ಅಭ್ಯರ್ಥಿಗಳು ಮನೆ ಮನೆಗೆ ಪ್ರಚಾರಕ್ಕೆ ಬರುತ್ತಿದ್ದಾರೆ. ಎಲ್ಲ ಪಕ್ಷದ ಅಭ್ಯರ್ಥಿಗಳಲ್ಲಿ ನಮ್ಮ ಸಮಸ್ಯೆಗಳ ಬಗ್ಗೆ ಹೇಳುತ್ತಿದ್ದೇವೆ. ಆರಿಸಿ ಬಂದರೆ ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಿದ್ದಾರೆ. ಯಾರು ಉತ್ತಮ ಕೆಲಸ ನಿರ್ವಹಿಸುತ್ತಾರೋ ಅವರಿಗೆ ನಮ್ಮ ಮತ’ ಎನ್ನುತ್ತಾರೆ ದೇರೆಬೈಲ್‌ ಜಂಕ್ಷನ್‌ ಬಳಿ ಇದ್ದ ರಿಕ್ಷಾ ಚಾಲಕ ಹೇಮಂತ್‌.

ಮತದಾರರನ್ನು ಕರೆಸಲು ಕಸರತ್ತು
ಕೆಲವೊಂದು ವಾರ್ಡ್‌ಗಳಲ್ಲಿ ಹೆಚ್ಚಿನ ಮತದಾರರು ಬೆಂಗಳೂರು, ಮೈಸೂರು ಸಹಿತ ದೂರದ ಊರುಗಳಲ್ಲಿ ಪಕ್ಕದ ರಾಜ್ಯಕ್ಕೆ ಕೆಲಸಕ್ಕಾಗಿ ತೆರಳಿದ್ದಾರೆ. ಅದೇ ಕಾರಣಕ್ಕೆ ಕಳೆದ ಬಾರಿಯ ಚುನಾವಣೆಯಲ್ಲಿ ನಗರದ ಕೆಲವೊಂದು ವಾರ್ಡ್‌ಗಳಲ್ಲಿ ಶೇ.50ಕ್ಕಿಂತಲೂ ಕಡಿಮೆ ಮತದಾನವಾಗಿತ್ತು. ಇದೀಗ ಬೇರೆ ಜಿಲ್ಲೆ, ರಾಜ್ಯದಲ್ಲಿರುವ ಮಂಗಳೂರಿನ ಮತದಾರರನ್ನು ಚುನಾವಣೆಗೆ ಕರೆಸಲು ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ. ಮನೆ ಮಂದಿಗೆ ಚುನಾವಣೆಯ ಮಹತ್ವವನ್ನು ಸಾರುತ್ತಿದ್ದಾರೆ.

- ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next