ಮೈಸೂರು: ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಸಮ್ಮುಖದಲ್ಲೆ 2006ರಲ್ಲಿ ಬಿಡುಗಡೆಗೊಂಡ ಪುಸ್ತಕದಲ್ಲೇ ಟಿಪ್ಪು ಕೊಂದ ಉರಿಗೌಡ ಮತ್ತು ನಂಜೇಗೌಡರ ಹೆಸರು ಉಲ್ಲೇಖವಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದರು.
ಭಾನುವಾರ ರಂಗಾಯಣದ ಭೂಮಿಗೀತದಲ್ಲಿ ಆಯೋಜಿಸಿದ್ದ “ಟಿಪ್ಪು ನಿಜ ಕನಸುಗಳು’ ಸತ್ಯದ ಅನಾವರಣದ ಸುವರ್ಣ ಪ್ರದರ್ಶನ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ಇದರ ಬಗ್ಗೆ ಅಂದು ಏನೂ ಮಾತನಾಡದ ಕುಮಾರಸ್ವಾಮಿ ಇಂದು ಏಕೆ ಇದು ಸುಳ್ಳು ಇತಿಹಾಸ ಎಂದು ಹೇಳುತ್ತಿದ್ದಾರೆ. ಒಕ್ಕಲಿಗರನ್ನು ಗುತ್ತಿಗೆ ಪಡೆದಿರುವಂತೆ ಮಾತನಾಡುತ್ತಿರುವವರು ತಾವು ಜಾತ್ಯತೀತರು ಎಂದು ಹೇಳಿಕೊಳ್ಳುತ್ತಾರೆ. ಇತಿಹಾಸದ ಪುಟದಲ್ಲಿ ದೈತ್ಯಾಕಾರ ಪ್ರಾಣಿ ಹುಲಿಯನ್ನು ಕೊಲ್ಲುತ್ತಿರುವ ಬಗ್ಗೆ ಹೇಳಿದ್ದಾರೆ. ಯಾರಾದರೂ ಹುಲಿ ಕೊಲ್ಲಲು ಸಾಧ್ಯವೇ ಎಂದು ಪ್ರಶ್ನಿಸಿದರು.
25 ವರ್ಷಗಳ ಹಿಂದೆ ಗಿರೀಶ್ ಕಾರ್ನಾಡ್ ಅವರು “ಟಿಪ್ಪು ಕನಸುಗಳು’ ನಾಟಕ ಮಾಡಿದಾಗ ಸಂಭ್ರಮಿಸಿದರು. ಭಯ ಭಕ್ತಿಯಿಂದ ಪುಣ್ಯಕಾರ್ಯ ಎಂಬಂತೆ ಸ್ವೀಕರಿಸಿದರು. ಅದೇ ಜನ ನಾನು ಸತ್ಯದ ಅನಾವರಣ ಎಂದಾಗ ಬೇಡ ಎಂದರು. ಇವೆಂತಹ ಮನಸ್ಸುಗಳು ಎಂದು ಅಡ್ಡಂಡ ಸಿ. ಕಾರ್ಯಪ್ಪ ಕಿಡಿಕಾರಿದರು.
ಪೊಲೀಸ್ ಬಂದೋಬಸ್ತ್ ನಲ್ಲಿ ಹಾಗೂ ಪ್ರೇಕ್ಷಕರಿಗಿಂತ ಹೆಚ್ಚು ಪೊಲೀಸರ ಸರ್ಪಗಾವಲಿನಲ್ಲಿ ಒಂದು ನಾಟಕ ನಡೆಯಬೇಕಾದ ಅನಿವಾರ್ಯತೆೆ ಏನಿತ್ತೋ ನನಗೂ ಗೊತ್ತಿಲ್ಲ. ಅನಿವಾರ್ಯತೆಯನ್ನು ಸೃಷ್ಟಿಸಿದವರು ಯಾರು ಎಂದು ಪ್ರಶ್ನಿಸಿದರು.
ಸುಮಾರು 20 ಜಿಲ್ಲೆಗಳಲ್ಲಿ ನಾಟಕ ಪ್ರದರ್ಶನ ಕಂಡಿದೆ. ಒಂದು ನಾಟಕವನ್ನು ಇಷ್ಟೊಂದು ಪೊಲೀಸ್ ಬಂದೋಬಸ್ತ್ ಮೂಲಕ ಆಯೋಜನೆ ಮಾಡಬೇಕಾದ ಪರಿಸ್ಥಿತಿ ಹೇರಿದ್ದು ಇದೇ ಮೊದಲು. ಕಲಾಸಕ್ತರಿಗಿಂತ ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಹೇಳಿದರು.