ಮಹಾನಗರ: ಕುದ್ಮಲ್ ಶ್ರೀ ರಂಗರಾವ್ ಸ್ಮಾರಕ ಸೇವಾ ಸಂಘ ಬಿಜೈ ಕಾಪಿಕಾಡ್ ಇದರ ವತಿಯಿಂದ ಕುದ್ಮಲ್ ರಂಗರಾವ್ ಅವರ 160ನೇ ಜನ್ಮ ದಿನಾಚರಣೆ ಮತ್ತು ಪುತ್ಥಳಿ ಅನಾವರಣದ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್ ನೆರವೇರಿಸಿದರು.
ಪೂಜ್ಯರು ದೀನ ದಲಿತರ ಏಳಿಗೆಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ್ದಾರೆ. ಹೀಗಾಗಿ ಮಹಾತ್ಮರನ್ನು ನೆನಪಿಸುವ ಇಂತಹ ಕಾರ್ಯಕ್ರಮವನ್ನು ಈ ಸಂಘವು ಆಯೋಜಿಸಿರುವುದು ಪ್ರಶಂಸನೀಯ. ಸಂಘಕ್ಕೆ ಅಗತ್ಯವಿರುವ ಸಲಕರಣೆಗಳನ್ನು ಒದಗಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡಲಾಗುವುದು ಎಂದರು.
ಸೀತಾರಾಮ್ ಕೋಡಿಕಲ್, ಉದಯ ಕುಮಾರ್ ಯು. ಜಂಟಿಯಾಗಿ ಪುತ್ಥಳಿ ಯನ್ನು ಅನಾವರಣ ಮಾಡಿದರು. ಪುತ್ಥಳಿಗೆ ದೇವೇಂದ್ರ ಕಾಪಿಕಾಡ್, ರಾಧಾ ಟೀಚರ್ ಮಾಲಾರ್ಪಣೆ ಮಾಡಿದರು. ಮಾಜಿ ಮೇಯರ್ ಎಂ. ಶಶಿಧರ ಹೆಗ್ಡೆ ಮಾತನಾಡಿ, ಕುದ್ಮಲ್ ರಂಗ ರಾಯರು ಬಡವರಿಗಾಗಿ ದುಡಿದ ಪುಣ್ಯ ಪುರುಷರ ಸ್ಮರಣಾರ್ಥವಾಗಿ ಅವರ ಪುತ್ಥಳಿ ಸ್ಥಾಪಿಸಿರುವ ಕಾರ್ಯ ಅಲ್ಲದೆ ಸ್ಥಳೀಯ ಗುರುಹಿರಿಯರನ್ನು ಸಮ್ಮಾನಿಸುವುದು, ಪರಿಸರದ ವ್ಯಕ್ತಿಗೆ ಆರ್ಥಿಕ ನೆರವು-ಆಶ್ರಮದ ಮಕ್ಕಳಿಗೆ ಉಡುಪು ವಿತರಿಸುತ್ತಿರುವುದು ಮಾದರಿ ಎಂದರು.
ಮಾಜಿ ಉಪಮೇಯರ್ ರಜನೀಶ್ ಕಾಪಿಕಾಡ್, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಸೀತಾರಾಮ ಎಸ್. ಕೋಡಿಕಲ್, ನಿವೃತ್ತ ಟ್ರಾಫಿಕ್ ಮೆನೇಜರ್ ಟಿ. ಹೊನ್ನಯ್ಯ, ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ರಾಜಶ್ರೀ ಕುದ್ಮಲ್ ರಂಗರಾಯರ ಬಗ್ಗೆ ಭಾಷಣ ಮಾಡಿದರು.
ಸಂಘದ ಅಧ್ಯಕ್ಷ ದೇವೇಂದ್ರ ಕಾಪಿಕಾಡ್ ಮಂಗಳೂರು ಪುರಭವನಕ್ಕೆ ಕುದ್ಮಲ್ ರಂಗರಾಯರ ಹೆಸರನ್ನು ಇಟ್ಟಿರುವುದು ಪ್ರಶಂಸನೀಯ. ರಂಗರಾಯರ ಪುತ್ಥಳಿಯನ್ನು ಅಲ್ಲಿ ಸ್ಥಾಪಿಸುವಂತೆ ಶಾಸಕರಿಗೆ ಮನವಿ ಮಾಡಿದರು. ಉದಯ್ ಕುಮಾರ್ ಯು., ಮಂಗಳಾ ಪ್ಯೂಯಲ್ಸ್ ಮುಕ್ಕ ಮತ್ತು ಅಖೀಲ ಭಾರತ ಮುಂಡಾಳ ಯುವ ವೇದಿಕೆ ಅಧ್ಯಕ್ಷ ರಘುರಾಜ್ ಕದ್ರಿ ಮತ್ತು ಶಿಕ್ಷಕಿ ಗುಲಾಬಿ, ಸುನಂದ ಕೊಟ್ಟಾರಕ್ರಾಸ್ ಅತಿಥಿಗಳಾಗಿದ್ದರು.
ಸಮ್ಮಾನ
ರಾಧಾ ಟೀಚರ್ ದಡ್ಡಲ್‌ಕಾಡ್, ಸೀತು, ರಾಧಾ, ರಾಜಮ್ಮ, ಸುಶೀಲಾ ಕಾಪಿಕಾಡ್ ಅವರನ್ನು ಸಮ್ಮಾನಿಸಲಾಯಿತು. ಪರಿಸರದ ಆಶ್ರಮದ 24 ಮಕ್ಕಳಿಗೆ ಉಡುಪುಗಳನ್ನು ವಿತರಿಸಲಾಯಿತು. ಆಸ್ಪತ್ರೆಯಲ್ಲಿರುವ ಸ್ಥಳೀಯ ನಾಗಪ್ಪ ಅವರ ಔಷಧದ ವೆಚ್ಚದ ಬಗ್ಗೆ ಆರ್ಥಿಕ ನೆರವು ನೀಡಲಾಯಿತು. ಸಂಘದ ಕಾರ್ಯದರ್ಶಿ ಬಿ. ತುಳಸಿದಾಸ್ ಸ್ವಾಗತಿಸಿ, ಕೋಶಾಧಿಕಾರಿ ಉಮೇಶ್‌ಕುಮಾರ್ ವಂದಿಸಿದರು. ರಘುವೀರ್ ಅತ್ತಾವರ ಬಾಬುಗುಡ್ಡೆ ನಿರೂಪಿಸಿದರು.
ಅವಿಸ್ಮರಣೀಯ
ಡಾ| ಎಂ.ಆರ್. ಕೇಶವ ಧರಣಿ ಮಾತನಾಡಿ, ಕುದ್ಮಲ್ ರಂಗರಾಯರು ದಲಿತ ವರ್ಗಕ್ಕೆ ಆಗುತ್ತಿದ್ದ ಶೋಷಣೆ ಬಗ್ಗೆ ತಿಳಿಸಿ ಅನ್ನಕ್ಕಾಗಿ ಹೋರಾಟ ಮಾಡಿ ಶಿಕ್ಷಣ ನೀಡಿದಲ್ಲದೆ, ಉಚಿತವಾಗಿ ಜಮೀನು ನೀಡಿ ನೆಮ್ಮದಿಯಿಂದ ಬಾಳುವಂತೆ ಮಾಡಿದ ಪುಣ್ಯ ಪುರುಷರು. ಅವರ ಪುತ್ಥಳಿಯನ್ನು ಈತನಕ ಯಾವುದೇ ಸಂಘ-ಸಂಸ್ಥೆಗಳು ಯಾವುದೇ ಸಭಾಭವನದಲ್ಲಿ ಸ್ಥಾಪನೆ ಮಾಡಿರುವುದಿಲ್ಲ. ಈಗ ಇಲ್ಲಿ ಸ್ಥಾಪನೆ ಮಾಡಿರುವುದು ಪ್ರಥಮವಾಗಿದ್ದು, ಅವಿಸ್ಮರಣೀಯ ಎಂದರು.