ಬೆಂಗಳೂರು: ಬಡಜನತೆಗೆ ಉದ್ಯೋಗ ಕಲ್ಪಿಸಿಕೊಡುವ ಪ್ರಮುಖ ಉದ್ದೇಶದಿಂದ ಹೋಟೆಲ್ ಉದ್ಯಮ ಆರಂಭಿಸಿದ ನಮ್ಮ ತಂದೆ ದಿ.ರಂಗಪ್ಪ ಪಿ.ಕಾಮತ್ ಅವರು, ಉದ್ಯಮದಲ್ಲಿ ದೀರ್ಘಕಾಲದ ಛಾಪು ಮೂಡಿಸಿ, ಹೋಟೆಲ್ ವಹಿವಾಟವನ್ನು ಮಾದರಿಯನ್ನಾಗಿ ರೂಪಿಸಿದರು ಎಂದು ರಂಗಪ್ಪ ಕಾಮತ್ಸ್ ಗ್ರೂಪ್ ಆಫ್ ಹೋಟೆಲ್ಸ್ ಲಿ.,ನ ವ್ಯವಸ್ಥಾಪಕ ನಿರ್ದೇಶಕ ಎಲ್.ಆರ್. ಕಾಮತ್ ತಿಳಿಸಿದ್ದಾರೆ.
ನಗರದ ಒಪಿಎಚ್ ರಸ್ತೆಯ ಕಾಮತ್ಸ್ ಹೋಟೆಲ್ ಮಯೂರ ಕಾರ್ಪೋರೇಟ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಿವಂಗತ ಆರ್.ಪಿ.ಕಾಮತ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುರುಡೇಶ್ವರದ ಬೇಂಗ್ರೆ ಗ್ರಾಮದಲ್ಲಿ ರೈತನ ಮಗನಾಗಿ ಜನಿಸಿದ ನಮ್ಮ ತಂದೆಯವರು ತಮ್ಮ 18ನೇ ವಯಸ್ಸಿನಲ್ಲಿ ಹುಬ್ಬಳ್ಳಿಯ ಸ್ಟೇಷನ್ ರಸ್ತೆಯಲ್ಲಿ ‘ವಸಂತ ಭವನ’ ಎಂಬ ಹೆಸರಿನ ಪ್ರಥಮ ಹೋಟೆಲ್ನ್ನು ಆರಂಭಿಸಿದರು. ಅದಾದ ಒಂದು ದಶಕದ ನಂತರ ಇದೇ ನಗರದ ಬ್ರಾಡ್‌ವೇಯಲ್ಲಿ, ಕೇವಲ 8 ಸಾವಿರ ರೂ.ಬಂಡವಾಳದಲ್ಲಿ ‘ಕಾಮತ್ ರೆಸ್ಟೋರೆಂಟ್’ ಪ್ರಾರಂಭಿಸುವ ಮೂಲಕ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡರು. ಉಪಾಹಾರ ಗೃಹಗಳಿಗೆ ಹೊಸ ರೂಪ ಕೊಟ್ಟು ಶುಚಿ, ರುಚಿ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿದ್ದಲ್ಲದೆ, ಸಿಬ್ಬಂದಿಗೆ ಯೂನಿಫಾರಂ ಪರಿಚಯಿಸಿದ ಮೊಟ್ಟ ಮೊದಲ ಕನ್ನಡಿಗ ಉದ್ಯಮಿ ಎನಿಸಿದ್ದಾರೆ.
60ಕ್ಕೂ ಹೆಚ್ಚು ಶಾಖೆ: ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ಮತ್ತು ತಮಿಳುನಾಡಿನಲ್ಲಿ ದೇಶದ ಅತ್ಯಂತ ಜನಪ್ರಿಯ ರೆಸ್ಟೋರೆಂಟ್ ಸಮೂಹಗಳಲ್ಲೊಂದಾದ ಆರ್.ಪಿ.ಕಾಮತ್ ಹೋಟೆಲ್ ಸಮೂಹದಲ್ಲಿ 60ಕ್ಕೂ ಹೆಚ್ಚು ಶಾಖೆಗಳನ್ನು ಹುಟ್ಟುಹಾಕಿದ ಕೀರ್ತಿ ಕೂಡ ನಮ್ಮ ತಂದೆಯವರಿಗೆ ಸಲ್ಲುತ್ತದೆ. ಇಂದು ನಮ್ಮ ಸಮೂಹದ ಎಲ್ಲ ಶಾಖೆಗಳಲ್ಲಿ ಹಾಗೂ ನಮ್ಮ ಸಮೂಹದ ಕಾಮತ್ ಟೂರಿಸ್ಟ್ ಕಚೇರಿಗಳಲ್ಲಿ ಅದಮ್ಯ ಚೇತನಕ್ಕೆ ಗೌರವ ಸಲ್ಲಿಸುವ ಮೂಲಕ ಜನ್ಮಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಗೌತಮ್ ಲಕ್ಷ್ಮಣ್ ಕಾಮತ್, ಕಾಮತ್ ಟೂರಿಸ್ಟ್ ನಿರ್ದೇಶಕ ವಿಠ್ಠಲ್ ಶಾನ್‌ಬಾಗ್, ನಿರ್ದೇಶಕ ವ್ಯಾಸರಾವ್, ಹಿರಿಯ ಸಿಬ್ಬಂದಿ ಹಾಗೂ ಇತರರಿದ್ದರು.