Advertisement

ಮತದಾನದ ನಂತರ ಆರ್‌.ಆರ್‌.ನಗರದಲ್ಲಿ ‌ರ‍್ಯಾಂಡಮ್‌ ಟೆಸ್ಟ್ ?

12:02 PM Nov 02, 2020 | Suhan S |

ಬೆಂಗಳೂರು: ಉಪ ಚುನಾವಣೆ ಸಂದರ್ಭದಲ್ಲಿ ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ಸೋಂಕು ಹರಡಿರುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಆ ಕ್ಷೇತ್ರದಲ್ಲಿ ಮತದಾನದ ನಂತರ

Advertisement

” ರ್‍ಯಾಂಡಮ್‌ ಪರೀಕ್ಷೆ’ ನಡೆಸಲು ಪಾಲಿಕೆ ಉದ್ದೇಶಿಸಿದೆ. ಹಲವು ವಾರಗಳಿಂದ ಆರ್‌.ಆರ್‌.ನಗರದಲ್ಲಿ ವಿವಿಧ ಪಕ್ಷಗಳಿಂದ ನಿರಂತರವಾಗಿ ಸಭೆಗಳು, ಪ್ರಚಾರ ರ್ಯಾಲಿಗಳು ನಡೆಯುತ್ತಿವೆ. ಅವುಗಳಲ್ಲಿ ಸಿಎಂ, ಸಚಿವರು ಸೇರಿ ರಾಜಕೀಯ ನಾಯಕರು, ಸಿನಿಮಾ ತಾರೆಯರು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಸಾವಿರಾರು ಜನ ಒಂದೆಡೆ ಸೇರಿದ್ದಾರೆ. ಬಹುತೇಕ ಕಡೆ ಸಾಮಾಜಿಕ ಅಂತರ ಮಾಯವಾಗಿದ್ದು, ಮುಖಗವಸು ಹಾಕಿದ್ದು ಕೂಡ ತುಂಬಾ ಕಡಿಮೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಿವೆ ಎಂದು ಅಂದಾಜಿಸಲಾಗಿದೆ.

ನ.3ರಂದು ಆ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಇದಾಗಿ 2-3ದಿನಗಳ ಅಂತರದಲ್ಲಿ ಹೆಚ್ಚು ಸಭೆ-ಸಮಾರಂಭ ನಡೆದ ಸ್ಥಳಗಳನ್ನು ಗುರುತಿಸಿ, ಅಂತಹ ಕಡೆಗಳಲ್ಲಿ ರ್‍ಯಾಂಡಮ್‌ ಪರೀಕ್ಷೆ ನಡೆಸಲು ಚಿಂತನೆ ನಡೆದಿದೆ. ಇದಕ್ಕೂ ಮುನ್ನ ಉದ್ದೇಶಿತ ವಿಧಾನಸಭಾ ಕ್ಷೇತ್ರದಲ್ಲಿ ಪರೀಕ್ಷೆಗಳ ಪ್ರಮಾಣ ಹೆಚ್ಚಿಸಿ, ಫ‌ಲಿತಾಂಶ ಪರಿಶೀಲಿಸಲಾಗು ವುದು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ರ್‍ಯಾಂಡಮ್‌ ಪರೀಕ್ಷೆ ಈಗಲೇ ನಡೆಸಬಹುದು. ಆದರೆ, ಅದು ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳೂ ಇವೆ. ಹೀಗಾಗಿ ಈ ಪ್ರಕ್ರಿಯೆ ಮುಗಿದ ನಂತರ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟಾರೆ ಒಂಬತ್ತು ವಾರ್ಡ್‌ಗಳಿದ್ದು, ಕಳೆದ 10 ದಿನಗಳಲ್ಲಿ ಇಡೀ ನಗರದಲ್ಲಿ ದಾಖಲಾಗುವ ಸೋಂಕು ಪ್ರಕರಣಗಳ ಪೈಕಿ ಶೇ.10ರಷ್ಟು ಆರ್‌.ಆರ್‌.ನಗರದಲ್ಲಿ ಪತ್ತೆ ಆಗುತ್ತಿವೆ. ನಿತ್ಯ ಸರಾಸರಿ 7-8 ಸಾವಿರ ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ.

ಮತದಾನದ ನಂತರ ಈ ಸಂಖ್ಯೆಯನ್ನು 8-10 ಸಾವಿರಕ್ಕೆ ಹೆಚ್ಚಿಸುವ ಗುರಿ ಇದೆ. ಇದಕ್ಕಾಗಿ ಪರೀಕ್ಷಾ ಕೇಂದ್ರ ಹೆಚ್ಚಿಸಲಾಗುವುದು. ಸದ್ಯ ಪ್ರತಿ ವಾರ್ಡ್ ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಾಗೂ ಮೊಬೈಲ್‌ ಪರೀಕ್ಷಾ ಕೇಂದ್ರ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Advertisement

ಏಕೆ ರ್‍ಯಾಂಡಮ್‌ ಪರೀಕ್ಷೆ?: ಹತ್ತಾರು ಸಭೆಗಳಲ್ಲಿ ಸಾವಿರಾರು ಜನ ಭಾಗವಹಿಸಿದ್ದಾರೆ. ಸೋಂಕಿಗೆ ಕಡಿವಾಣ ಹಾಕಲು ರ್‍ಯಾಂಡಮ್‌ ಪರೀಕ್ಷೆ ನಡೆಸುವ ಅಗತ್ಯವಿದೆ. ಪಾಸಿಟಿವ್‌ ಪ್ರಕರಣ ಹೆಚ್ಚು ಕಂಡು ಬಂದರೆ, ಆರಂಭದಲ್ಲೇ ಅಂತಹವರನ್ನು ಕ್ವಾರಂಟೈನ್‌ ಮಾಡಬಹುದು. ಇದರಿಂದ ಸೋಂಕಿನ ಸರಪಳಿ ಕಡಿತಗೊಳ್ಳುತ್ತದೆ. ಆ ಮೂಲಕ ನಿಯಂತ್ರಣವೂ ಆಗಲಿದೆ ಎಂದು ವಿಶೇಷ ಆಯುಕ್ತ (ಆಡಳಿತ) ಜೆ. ಮಂಜುನಾಥ್‌ ತಿಳಿಸುತ್ತಾರೆ.

ಮತಗಟ್ಟೆ ಆಸುಪಾಸು ಪರೀಕ್ಷೆ? :  ಒಂದೇ ಕಡೆ ಹೆಚ್ಚು ಮತಗಟ್ಟೆ ಇರುವ ಪ್ರದೇಶಗಳ ಆಸುಪಾಸು ಕೋವಿಡ್‌-19 ಪರೀಕ್ಷಾ ಕೇಂದ್ರ ತೆರೆಯುವ ಚಿಂತನೆಯೂ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಆರ್‌.ಆರ್‌.ನಗರ

ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 678 ಬೂತ್‌ ತೆರೆಯಲಾಗುತ್ತಿದೆ. ಈ ಪೈಕಿ 8 -10 ಮತಗಟ್ಟೆ ಒಂದೇ ಕಡೆ ಇದ್ದರೆ, ಅಲ್ಲಿಂದ ನೂರು ಮೀಟರ್‌ ಪರೀಕ್ಷಾ ಕೇಂದ್ರ ತೆರೆಯಬಹುದು. ಮತ ಚಲಾಯಿಸಲು ಬಂದವರು, ಹಾಗೇ ಪರೀಕ್ಷೆಗೊಳಗಾಗಿ ಹಿಂತಿರುಗಬಹುದು ಎಂಬ ಲೆಕ್ಕಾಚಾರವೂ ಇದೆ. ಆದರೆ, ಈ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎನ್ನಲಾಗಿದೆ.

ಶಿರಾದಲ್ಲೂ ರ್‍ಯಾಂಡಮ್‌ ಪರೀಕ್ಷೆ? :  ತುಮಕೂರಿನ ಶಿರಾದಲ್ಲೂ ಉಪಚುನಾವಣೆ ನಡೆಯುತ್ತಿದ್ದು, ನಿರಂತರವಾಗಿ ಸಭೆ, ರ್ಯಾಲಿಗಳು ನಡೆದಿವೆ. ಹೀಗಾಗಿ ಅಲ್ಲಿಯೂ ಸೋಂಕು ಹರಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ಮುಗಿದ ನಂತರ ರ್‍ಯಾಂಡಮ್‌ ಪರೀಕ್ಷೆ ನಡೆಸಬೇಕು ಎಂಬ ಒತ್ತಾಯವೂ ತಜ್ಞರಿಂದ ಕೇಳಿಬರುತ್ತಿದೆ.

ಪಾದರಾಯನಪುರ ಪ್ರಯೋಗ ಯಶಸ್ವಿ :  ನಗರದ ಪಾದರಾಯನಪುರದಲ್ಲಿ ಈ ಹಿಂದೆ ರ್‍ಯಾಂಡಮ್‌ ಪರೀಕ್ಷೆ ಪ್ರಯೋಗ ಯಶಸ್ವಿಯಾಗಿದೆ. ಆರಂಭದಲ್ಲಿ ಅಲ್ಲಿ ಸೋಂಕು ಪ್ರಕರಣ ಹೆಚ್ಚಾಗಿ ಕಂಡುಬಂದವು. ತದನಂತರ ಕೈಗೊಂಡ ಕ್ರಮಗಳಿಂದ ನಿಯಂತ್ರಣಕ್ಕೂ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

 

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next