ಕಲಬುರಗಿ: ಕೋವಿಡ್-19 ಸೋಂಕು ಪತ್ತೆಯಾದ ಕಂಟೈನ್ಮೆಂಟ್ ಝೋನ್ ಗಳಲ್ಲಿ ರಾಂಡಮ್ (random) ಟೆಸ್ಟಿಂಗ್ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೆ 81 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಸೋಂಕು ಹರಡುವಿಕೆ ನಿಯಂತ್ರಿಸಲು 21 ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ರಾಂಡಮ್ ಟೆಸ್ಟಿಂಗ್ ಮಾಡಲಾಗುವುದು ಎಂದರು.
ನಗರದ ಮೋಮಿನಪುರ ಬಡಾವಣೆ (ವಾರ್ಡ್ 23, 24, 25) ಯಲ್ಲಿ ಅತ್ಯಧಿಕ ಕೋವಿಡ್-19 ಪ್ರಕರಣಗಳು ಪತ್ತೆಯಗಿದ್ದು, ಗುರುವಾರದಿಂದಲೇ ಅಲ್ಲಿ ಟೆಸ್ಟಿಂಗ್ ಪ್ರಾರಂಭವಾಗಲಿದೆ. ಈ ಪ್ರದೇಶದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಟೆಸ್ಟ್ ಗಳು ಆಗುವ ಸಾಧ್ಯತೆ ಇದೆ ಎಂದರು.
ಅಲ್ಲದೇ, ಈಗಾಗಲೇ ಮನೆ-ಮನೆ ಸಮೀಕ್ಷೆ ನಡೆಸಲಾಗಿದ್ದು, ಮತ್ತೊಮ್ಮೆ ಮನೆ-ಮನೆ ವೈದ್ಯಕೀಯ ಸಮೀಕ್ಷೆ ನಡೆಸಲಾಗುವುದು. ಇದಕ್ಕಾಗಿ ವೈದ್ಯರು, ಆರೋಗ್ಯ ಸಹಾಯಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಒಳಗೊಂಡ 50 ತಂಡಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು.
296 ಕ್ವಾರಂಟೈನ್ ಕೇಂದ್ರಗಳು: ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಮಾಡಲು 296 ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದೆ. ಲಾಕ್ ಡೌನ್ ಸಡಲಿಕೆ ನಂತರ ಬುಧವಾರ ಸಂಜೆಯವರೆಗೆ ಒಟ್ಟು 12 ಸಾವಿರ ಜನ ವಲಸಿಗರು ಬಂದಿದ್ದಾರೆ. ಅವರನ್ನೆಲ್ಲ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.