ಹುಬ್ಬಳ್ಳಿ: ಸಾವಿನ ಮನೆಯಲ್ಲಿ ಚುನಾವಣಾ ರಾಜಕಾರಣ ಸರಿಯಲ್ಲ. ಅಂತಹ ಮನೆ ಹೊರತುಪಡಿಸಿ ಬೇರೆಡೆ ಎಲ್ಲಾದರೂ ನೀವು ರಾಜಕಾರಣ ಮಾಡಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೆವಾಲಾ ಹರಿಹಾಯ್ದರು.
ಮೃತ ನೇಹಾಳ ನಿವಾಸಕ್ಕೆ ಬುಧವಾರ ಭೇಟಿಕೊಟ್ಟ, ತಂದೆ-ತಾಯಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಇವತ್ತು ನಮ್ಮ ಮಗಳು ನೇಹಾ ನಿವಾಸಕ್ಕೆ ಬಂದಿದ್ದೇವೆ. ನೇಹಾ ಕೇವಲ ನಿರಂಜನ ಹಿರೇಮಠರ ಪುತ್ರಿ ಅಲ್ಲ. ಇಡೀ ಕರ್ನಾಟಕದ ಪುತ್ರಿ. ನಿರಂಜನ ನಮ್ಮ ಕುಟುಂಬದ ಸದಸ್ಯರು. ಈ ಘಟನೆ ಬಗ್ಗೆ ಅತ್ಯಂತ ದುಃಖವಿದೆ. ನಾವೆಲ್ಲ ಅವರ ಜೊತೆ ಇರುತ್ತೇವೆ ಎಂದರು.
ನೇಹಾಳ ಕುಟುಂಬಕ್ಕೆ ಸಂಪೂರ್ಣ ನ್ಯಾಯ ಕೊಡಿಸುವುದು ಸರ್ಕಾರದ ಕರ್ತವ್ಯ. ಈ ಪ್ರಕರಣದಲ್ಲಿ ತ್ವರಿತಗತಿಯಲ್ಲಿ ನ್ಯಾಯದಾನ ಆಗಬೇಕೆಂದು ಈಗಾಗಲೇ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ. 90 ದಿನಗಳಲ್ಲಿ ನ್ಯಾಯ ಸಿಗಲಿದೆ ಅನ್ನುವ ವಿಶ್ವಾಸವಿದೆ ಎಂದರು.
ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು. ಆಕೆಯ ಸಾವಿಗೆ ನ್ಯಾಯ ಸಿಗಬೇಕು. ವಿಶೇಷ ಕೋರ್ಟ್ ಖಂಡಿತ ತ್ವರಿತ ನ್ಯಾಯ ನೀಡಲಿದೆ. ಗಲ್ಲಿಗಿಂತ ಕಡಿಮೆ ಶಿಕ್ಷೆ ಸಿಗಲ್ಲ. ನಮ್ಮ ಮಗಳು ಸಾವನ್ನಪ್ಪಿರುವಾಗ ರಾಜಕಾರಣ ಮಾಡಬೇಡಿ. ಚುನಾವಣೆ ವೇಳೆ ರಾಜಕೀಕರಣ ಬೇಡ ಎಂದರು.
ಬಿಜೆಪಿಯಿಂದ ಸಿಬಿಐ ತನಿಖೆಗೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಸಿಐಡಿ ಮೇಲೆ ನಮಗೆ ನಂಬಿಕೆ ಇದೆ. ರಾಜ್ಯ ಪೊಲೀಸರ ಮೇಲೆ ವಿಶ್ವಾಸವಿದೆ. 90 ದಿನಗಳಲ್ಲಿ ಖಂಡಿತ ನ್ಯಾಯ ಸಿಗಲಿದೆ ಅನ್ನುವ ಖಾತ್ರಿಯಿದೆ ಎಂದರು.
ಇದನ್ನೂ ಓದಿ: LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ