Advertisement

ರಾಂಚಿ: ರೋಹಿತ್‌ ಮಿಂಚಿನ ಶತಕ : ಸರಣಿಯಲ್ಲಿ ರೋಹಿತ್‌ 3ನೇ ಸೆಂಚುರಿ

11:23 AM Oct 21, 2019 | Team Udayavani |

ರಾಂಚಿ: ರೋಹಿತ್‌ ಶರ್ಮ ಮತ್ತೆ ದಕ್ಷಿಣ ಆಫ್ರಿಕಾ ಮೇಲೆ “ಶತಕ ಸವಾರಿ’ ಮಾಡಿದ್ದಾರೆ. ರಾಂಚಿ ಟೆಸ್ಟ್‌ ಪಂದ್ಯದ ಮೊದಲ ದಿನ ಅಜೇಯ 117 ರನ್‌ ಬಾರಿಸಿ ಭಾರತವನ್ನು ದೊಡ್ಡ ಕುಸಿತದಿಂದ ಪಾರು ಮಾಡಿದ್ದಾರೆ. ಇವರಿಗೆ ಅಜಿಂಕ್ಯ ರಹಾನೆ ಅಮೋಘ ಬೆಂಬಲ ನೀಡಿದ್ದು, ಮಳೆಯಿಂದಾಗಿ ದಿನದಾಟ 32 ಓವರ್‌ಗಳಷ್ಟು ಬೇಗ ಕೊನೆಗೊಂಡಾಗ ಭಾರತ 3 ವಿಕೆಟಿಗೆ 224 ರನ್‌ ಗಳಿಸಿ ಸುಸ್ಥಿತಿಯಲ್ಲಿತ್ತು.

Advertisement

ಭಾರತದ ಈ 3 ವಿಕೆಟ್‌ಗಳು 16 ಓವರ್‌ ಆಗುವಷ್ಟರಲ್ಲಿ, 39 ರನ್ನಿಗೆ ಉದುರಿ ಹೋಗಿದ್ದವು. ಇಲ್ಲಿಂದ ಜತೆಗೂಡಿದ ರೋಹಿತ್‌-ರಹಾನೆ ಪ್ರವಾಸಿಗರ ಮೇಲುಗೈಗೆ ಸಂಪೂರ್ಣ ಬ್ರೇಕ್‌ ಹಾಕಿದರು. 256 ಎಸೆತಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಈ ಜೋಡಿ ಮುರಿಯದ 4ನೇ ವಿಕೆಟಿಗೆ 185 ರನ್‌ ಪೇರಿಸಿದೆ. ರಹಾನೆ 11ನೇ ಶತಕದತ್ತ ಹೆಜ್ಜೆ ಹಾಕುತ್ತಿದ್ದು, 83 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಇದು ದಕ್ಷಿಣ ಆಫ್ರಿಕಾ ವಿರುದ್ಧ 4ನೇ ವಿಕೆಟಿಗೆ ಭಾರತ ದಾಖಲಿಸಿದ ಅತ್ಯಧಿಕ ಮೊತ್ತ. ಕಳೆದ ಪುಣೆ ಪಂದ್ಯದಲ್ಲಷ್ಟೇ ಕೊಹ್ಲಿ-ರಹಾನೆ 178 ರನ್‌ ಒಟ್ಟುಗೂಡಿಸಿದ ದಾಖಲೆ ಪತನಗೊಂಡಿತು.

ರೋಹಿತ್‌ ಸೆಂಚುರಿ ನಂಬರ್‌ 6
ವಿಶಾಖಪಟ್ಟಣದಲ್ಲಿ ಮೊದಲ ಸಲ ಟೆಸ್ಟ್‌ ಆರಂಭಿಕ ಜವಾಬ್ದಾರಿ ಹೊತ್ತ ರೋಹಿತ್‌ ಶರ್ಮ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸುವ ಮೂಲಕ ಇದನ್ನು ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸಿದ್ದರು (176 ಮತ್ತು 127). ಬಳಿಕ ಪುಣೆಯಲ್ಲಿ ಆಡಿದ ಏಕೈಕ ಇನ್ನಿಂಗ್ಸ್‌ನಲ್ಲಿ 14 ರನ್ನಿಗೆ ಔಟಾಗಿದ್ದರು. ಈಗ ರಾಂಚಿಯಲ್ಲಿ ಮತ್ತೆ ಮಿಂಚಿನಾಟವಾಡಿದ್ದಾರೆ.

ರೋಹಿತ್‌ ಶರ್ಮ ಅವರ ಈ 6ನೇ ಶತಕ 130 ಎಸೆತಗಳಲ್ಲಿ ದಾಖಲಾಯಿತು. 117 ರನ್ನಿಗೆ 164 ಎಸೆತ ಎದುರಿಸಿದ್ದು, 14 ಬೌಂಡರಿ ಮತ್ತು 4 ಸಿಕ್ಸರ್‌ ಬಾರಿಸಿ ರಂಜಿಸಿದರು. ಡೇನ್‌ ಪೀಟ್‌ ಎಸೆತವೊಂದನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ರೋಹಿತ್‌ ಶತಕ ಸಂಭ್ರಮ ಆಚರಿಸಿದರು.

Advertisement

ಸರದಿಯ ಕೊನೆಯ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ ಆಗಿದ್ದ ಅಜಿಂಕ್ಯ ರಹಾನೆ ಅತ್ಯಂತ ಜವಾಬ್ದಾರಿ ಯುತವಾಗಿ ಆಡಿ ತಂಡದ ನೆರವಿಗೆ ನಿಂತರು. ರೋಹಿತ್‌ ಜತೆಗೂಡಿ ಭಾರತದ ಸರದಿಯನ್ನು ಬೆಳೆಸುತ್ತ ಸಾಗಿದರು. ಇವರಿಬ್ಬರು ಕ್ರೀಸಿನಲ್ಲಿ ಗಟ್ಟಿಗೊಳ್ಳುವುದರೊಂದಿಗೆ ಆಫ್ರಿಕಾದ ಬೌಲಿಂಗ್‌ ನಿಧಾನವಾಗಿ ಲಯ ಕಳೆದುಕೊಳ್ಳತೊಡಗಿತು. ರಹಾನೆ ಅವರ 83 ರನ್‌ 135 ಎಸೆತಗಳಿಂದ ದಾಖಲಾಗಿದ್ದು, 11 ಬೌಂಡರಿ ಜತೆಗೆ ಒಂದು ಸಿಕ್ಸರ್‌ ಬಾರಿಸಿದ್ದಾರೆ.

ಭೀತಿ ಹುಟ್ಟಿಸಿದ ರಬಾಡ
ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತದ ಆರಂಭ ಆಘಾತಕಾರಿಯಾಗಿತ್ತು. ವೇಗಿ ರಬಾಡ ಬಡಬಡನೆ 2 ವಿಕೆಟ್‌ ಉಡಾಯಿಸಿದರು. ಅಗರ್ವಾಲ್‌ 10 ರನ್‌ ಮಾಡಿ ಎಲ್ಗರ್‌ಗೆ ಕ್ಯಾಚ್‌ ನೀಡಿದರೆ, ಪೂಜಾರ ಖಾತೆ ತೆರೆಯುವ ಮುನ್ನವೇ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು. ಪುಣೆಯಲ್ಲಿ ದ್ವಿಶತಕ ಬಾರಿಸಿದ್ದ ಕೊಹ್ಲಿ ಗಳಿಸಿದ್ದು ಕೇವಲ 12 ರನ್‌. ಭಾರತೀಯ ಕಪ್ತಾನನ ವಿಕೆಟ್‌ ನೋರ್ಜೆ ಪಾಲಾಯಿತು.

ಶಾಬಾಜ್‌ ನದೀಂ: ದಿಢೀರ್‌ ಒಲಿದ ಅದೃಷ್ಟ!
ಅದೃಷ್ಟವೆಂದರೆ ಶಾಬಾಜ್‌ ನದೀಂ ಅವರದು. ಅದೆಷ್ಟೋ ಕ್ರಿಕೆಟಿಗರು ದೇಶದ ಪರ ಆಡಬೇಕೆಂದು ಕನಸು ಕಾಣುತ್ತಲೇ ಇರುತ್ತಾರೆ. ಆದರೆ ಆ ಗಳಿಗೆ ಕೂಡಿಬರುವುದೇ ಇಲ್ಲ. ಆದರೆ ಜಾರ್ಖಂಡ್‌ನ‌ ಎಡಗೈ ಸ್ಪಿನ್ನರ್‌ ಶಾಬಾಜ್‌ ನದೀಂ ಅವರದು ಸಂಪೂರ್ಣ ಭಿನ್ನ ಕತೆ. ಶುಕ್ರವಾರ ಸಂಜೆ ತನಕ ಇವರು ಆಲೂರಿನಲ್ಲಿ ವಿಜಯ್‌ ಹಜಾರೆ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಲೇ ಇದ್ದರು. ಶನಿವಾರ ಟೆಸ್ಟ್‌ ಕ್ಯಾಪ್‌ ಧರಿಸಿ ರಾಂಚಿ ಪಂದ್ಯ ಆಡಲಿಳಿದಿದ್ದರು!

ರಾಂಚಿ ಪಿಚ್‌ ಸ್ಪಿನ್ನಿಗೆ ನೆರವಾಗುವ ಸಾಧ್ಯತೆ ಇದ್ದುದರಿಂದ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳುವುದು ಭಾರತದ ಉದ್ದೇಶವಾಗಿತ್ತು. ಆದರೆ ಅವರು ಭುಜದ ನೋವಿಗೆ ಸಿಲುಕಿ ಹೊರಗುಳಿಯಬೇಕಾಯಿತು. ಕೂಡಲೇ ಈ ಸ್ಥಾನಕ್ಕೆ ಶಾಬಾಜ್‌ ನದೀಂ ಅವರನ್ನು ಹೆಸರಿಸಲಾಯಿತು. ಆಗ ಸಂಜೆ 7 ಗಂಟೆ. ವಿಷಯ ತಿಳಿದೊಡನೆ ನೇರವಾಗಿ ಕೋಲ್ಕತಾಕ್ಕೆ ವಿಮಾನ ಏರಿದ ನದೀಂ ಅಲ್ಲಿಂದ ರಾಂಚಿಗೆ ಬಂದಿಳಿದರು!

ಭಾರತ ತಂಡದಲ್ಲಿ 3ನೇ ಸ್ಪೆಷಲಿಸ್ಟ್‌ ಸ್ಪಿನ್ನರ್‌ ಇಲ್ಲವಾದ್ದರಿಂದ ನದೀಂ ಅವರನ್ನು ಹನ್ನೊಂದರ ಬಳಗಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಯಿತು. ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ “ಟೆಸ್ಟ್‌ ಕ್ಯಾಪ್‌’ ನೀಡಿ ನದೀಂ ಅವರನ್ನು ಬರಮಾಡಿಕೊಂಡರು. ತವರಿನಂಗಳದಲ್ಲೇ ಚೊಚ್ಚಲ ಟೆಸ್ಟ್‌ ಆಡುವ ಯೋಗ ನದೀಂ ಅವರದಾಗಿತ್ತು. ನದೀಂ ಅವರ 15 ವರ್ಷಗಳ ಕಾಯುವಿಕೆ ಕೇವಲ 14 ಗಂಟೆಗಳ ನಾಟಕೀಯ ಬೆಳವಣಿಗೆಯ ಮೂಲಕ ಸಾಕಾರಗೊಂಡಿತ್ತು. ಇವರಿಗಾಗಿ ಇಶಾಂತ್‌ ಶರ್ಮ ಹೊರಗುಳಿದರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿರುವ ಶಾಬಾಜ್‌ ನದೀಂ, 110 ಪಂದ್ಯಗಳಿಂದ 424 ವಿಕೆಟ್‌ ಉರುಳಿಸಿದ್ದಾರೆ. 2015-17ರ ರಣಜಿ ಋತುಗಳ ಅವಧಿಯಲ್ಲಿ 107 ವಿಕೆಟ್‌ (51 ಪ್ಲಸ್‌ 56) ಕಿತ್ತಾಗಲೇ ರಾಷ್ಟ್ರೀಯ ತಂಡದ ಬಾಗಿಲು ಬಡಿಯಲಾರಂಭಿಸಿದ್ದರು. ಭಾರತ “ಎ’, ಐಪಿಎಲ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಕಳೆದ ವರ್ಷ ವೆಸ್ಟ್‌ ಇಂಡೀಸ್‌ ಎದುರಿನ ತವರಿನ ಟಿ20 ಸರಣಿಗಾಗಿ ಭಾರತ ತಂಡಕ್ಕೆ ಕರೆ ಪಡೆದಿದ್ದರೂ ಆಡುವ ಅವಕಾಶ ಲಭಿಸಿರಲಿಲ್ಲ.

ಆಫ್ರಿಕಾ ತಂಡದಲ್ಲಿ 5 ಬದಲಾವಣೆ!
ದಕ್ಷಿಣ ಆಫ್ರಿಕಾ ರಾಂಚಿ ಟೆಸ್ಟ್‌ ಪಂದ್ಯಕ್ಕಾಗಿ ಬರೋಬ್ಬರಿ 5 ಬದಲಾವಣೆ ಮಾಡಿಕೊಂಡಿತು. ಗಾಯಾಳು ಐಡನ್‌ ಮಾರ್ಕ್‌ರಮ್‌, ಕೇಶವ್‌ ಮಹಾರಾಜ್‌ ಮೊದಲೇ ಹೊರಗುಳಿದಿದ್ದರು. ಇವರೊಂದಿಗೆ ವೆರ್ನನ್‌ ಫಿಲಾಂಡರ್‌, ಥಿಯುನಿಸ್‌ ಡಿ ಬ್ರುಯಿನ್‌, ಸೇನುರಣ್‌ ಮುತ್ತುಸ್ವಾಮಿ ಅವರನ್ನೂ ಕೈಬಿಡಲಾಯಿತು.

ತಂಡವನ್ನು ಸೇರಿಕೊಂಡವರೆಂದರೆ ಜಾರ್ಜ್‌ ಲಿಂಡೆ, ಲುಂಗಿ ಎನ್‌ಗಿಡಿ, ಜುಬೇರ್‌ ಹಮ್ಜಾ, ಹೆನ್ರಿಚ್‌ ಕ್ಲಾಸೆನ್‌ ಮತ್ತು ಡೇನ್‌ ಪೀಟ್‌. ಇವರಲ್ಲಿ ಸ್ಪಿನ್ನರ್‌ ಲಿಂಡೆ ಅವರಿಗೆ ಇದು ಮೊದಲ ಟೆಸ್ಟ್‌ ಆಗಿತ್ತು.

ರೋಹಿತ್‌ ಸಿಕ್ಸರ್‌ ವಿಶ್ವದಾಖಲೆ
ರಾಂಚಿ ಟೆಸ್ಟ್‌ ಪಂದ್ಯದಲ್ಲಿ ಸಿಡಿದು ನಿಂತ ಆರಂಭಕಾರ ರೋಹಿತ್‌ ಶರ್ಮ, ಟೆಸ್ಟ್‌ ಸರಣಿಯೊಂದರಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ ವಿಶ್ವದಾಖಲೆ ಬರೆದಿದ್ದಾರೆ. ಈ ಸಂದರ್ಭದಲ್ಲಿ ಅವರು ವೆಸ್ಟ್‌ ಇಂಡೀಸಿನ ಶಿಮ್ರನ್‌ ಹೆಟ್‌ಮೈರ್‌ ದಾಖಲೆಯನ್ನು ಮುರಿದರು. ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಸರಣಿಯಲ್ಲಿ ಹೆಟ್‌ಮೈರ್‌ 15 ಸಿಕ್ಸರ್‌ ಬಾರಿಸಿದ್ದರು. ಮೊದಲ ದಿನದಾಟದಲ್ಲಿ ರೋಹಿತ್‌ 4 ಸಿಕ್ಸರ್‌ ಹೊಡೆದಿದ್ದು, ಈ ಸರಣಿಯಲ್ಲಿ ಅವರು ಬಾರಿಸಿದ ಸಿಕ್ಸರ್‌ಗಳ ಸಂಖ್ಯೆ 17ಕ್ಕೆ ಏರಿದೆ. ಈ 17ರಲ್ಲಿ 11 ಸಿಕ್ಸರ್‌ಗಳು ಸ್ಪಿನ್ನರ್‌ ಡೇನ್‌ ಪೀಟ್‌ ಎಸೆತಗಳಲ್ಲಿ ದಾಖಲಾಗಿವೆ.

ಹರ್ಭಜನ್‌ ದಾಖಲೆ ಪತನ
ಈ ವರೆಗಿನ ಭಾರತೀಯ ದಾಖಲೆ ಹರ್ಭಜನ್‌ ಸಿಂಗ್‌ ಹೆಸರಲ್ಲಿತ್ತು ಎಂಬುದು ಅಚ್ಚರಿಯ ಸಂಗತಿ. ಅವರು 2010ರ ನ್ಯೂಜಿಲ್ಯಾಂಡ್‌ ಎದುರಿನ 3 ಪಂದ್ಯಗಳ ಸರಣಿಯಲ್ಲಿ 14 ಸಿಕ್ಸರ್‌ ಬಾರಿಸಿದ್ದರು. ಈ ಮುಖಾಮುಖೀ ವೇಳೆ 2 ಶತಕ ಹೊಡೆದ ಹರ್ಭಜನ್‌ ಸರಣಿಶ್ರೇಷ್ಠ ಗೌರವಕ್ಕೂ ಪಾತ್ರರಾಗಿದ್ದರು.

ಗಾವಸ್ಕರ್‌ ಬಳಿಕ ರೋಹಿತ್‌
ರೋಹಿತ್‌ ಶರ್ಮ 6ನೇ ಟೆಸ್ಟ್‌ ಶತಕ ಬಾರಿಸಿದರು. ಈ ಸರಣಿಯಲ್ಲಿ ಅವರು ದಾಖಲಿಸಿದ 3ನೇ ಶತಕ ಇದಾಗಿದೆ. ಇದರೊಂದಿಗೆ ಸರಣಿಯಲ್ಲಿ ಅತ್ಯಧಿಕ ಸೆಂಚುರಿ ಹೊಡೆದ ಭಾರತದ 2ನೇ ಆರಂಭಕಾರನಾಗಿ ಮೂಡಿಬಂದರು. ಸುನೀಲ್‌ ಗಾವಸ್ಕರ್‌ 2 ಸಲ ಸರಣಿಯೊಂದರಲ್ಲಿ 4 ಶತಕ ಸಿಡಿಸಿದ್ದರು, ಒಮ್ಮೆ 3 ಶತಕ ಹೊಡೆದಿದ್ದರು. ವೆಸ್ಟ್‌ ಇಂಡೀಸ್‌ ಮತ್ತು ಆಸ್ಟ್ರೇಲಿಯ ವಿರುದ್ಧ ಗಾವಸ್ಕರ್‌ ಈ ಸಾಧನೆಗೈದಿದ್ದರು.

ಈ ಸಾಧನೆಯ ವೇಳೆ ರೋಹಿತ್‌ ಶರ್ಮ ಟೆಸ್ಟ್‌ನಲ್ಲಿ 2 ಸಾವಿರ ರನ್‌ ಪೂರ್ತಿಗೊಳಿಸಿದರು. ಇದು ಅವರ 30ನೇ ಟೆಸ್ಟ್‌ ಪಂದ್ಯ.

ಸರಣಿಯಲ್ಲಿ ಅತ್ಯಧಿಕ ರನ್‌
ರೋಹಿತ್‌ ಶರ್ಮ ಈ ಸರಣಿಯಲ್ಲಿ 434 ರನ್‌ ಹೊಡೆದರು. ಇದು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತದ ಆಟಗಾರನೊಬ್ಬ ದಾಖಲಿಸಿದ ಅತ್ಯಧಿಕ ಮೊತ್ತ. 1996-97ರ ಸರಣಿಯಲ್ಲಿ ಅಜರುದ್ದೀನ್‌ 388 ರನ್‌ ಹೊಡೆದ ದಾಖಲೆ ಪತನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next