ಮುಂಬಯಿ: ನಿತೇಶ್ ತಿವಾರಿ ಅವರ ʼರಾಮಾಯಣʼ ಭಾರತ ಸಿನಿರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಸಿನಿಮಾ ಅನೌನ್ಸ್ ಆದ ದಿನದಿಂದ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ. ಆದರೆ ಇದೀಗ ಸಿನಿಮಾ ಮತ್ತೊಂದು ವಿಚಾರದಲ್ಲಿ ಸುದ್ದಿಯಾಗಿದೆ.
ರಣಬೀರ್ ಕಪೂರ್ ʼರಾಮʼನಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ತಯಾರಿ ನಡೆಸಿಕೊಂಡಿದ್ದಾರೆ. ಬಾಲಿವುಡ್ ಮಾತ್ರವಲ್ಲದೆ, ದಕ್ಷಿಣದ ಖ್ಯಾತ ಕಲಾವಿದರು ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾದ ಚಿತ್ರೀಕರಣ ಇದೇ ಏಪ್ರಿಲ್ ನಲ್ಲಿ ಆರಂಭವಾಗುವ ಸಾಧ್ಯತೆಯಿದೆ. ಆದರೆ ಸಿನಿಮಾ ಸಟ್ಟೇರುವ ಮುನ್ನವೇ ಚಿತ್ರತಂಡಕ್ಕೆ ಸಂಕಷ್ಟವೊಂದು ಎದುರಾಗಿದೆ. ಸಿನಿಮಾಕ್ಕೆ ಅಲ್ಲು ಅರವಿಂದ್ ಮತ್ತು ಮಧು ಮಂಟೇನಾ ಸಹ ನಿರ್ಮಾಪಕರಾಗಿದ್ದರು. ಆದರೆ ಇದೀಗ ಮಧು ಮಂಟೇನಾ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ ಎಂದು ʼ ಸಿಯಾಸತ್ʼ ವರದಿ ಮಾಡಿದೆ.
ಸದ್ಯ ಮಧು ಅವರು ನಿರ್ಮಾಣದಿಂದ ಹಿಂದೆ ಸರಿದಿರುವ ಹಿಂದಿನ ಕಾರಣಗಳು ಇನ್ನು ಕೂಡ ಸ್ಪಷ್ಟವಾಗಿಲ್ಲ. ಇನ್ನೊಂದೆಡೆ ಈ ಬಗ್ಗೆ ಚಿತ್ರತಂಡ ಕೂಡ ಅಧಿಕೃತವಾಗಿ ಎಲ್ಲೂ ಕೂಡ ಹೇಳಿಲ್ಲ.
ಮತ್ತೊಂದೆಡೆ, ಆಸ್ಕರ್ ವಿಜೇತ ವಿಎಫ್‌ಎಕ್ಸ್ ಕಂಪನಿ ಡಿಎನ್‌ಇಜಿಯ ಸಿಇಒ ನಮಿತ್ ಮಲ್ಹೋತ್ರಾ ಈಗ ರಾಮಾಯಣದ ನಿರ್ಮಾಣದ ಭಾಗವಾಗಲಿದ್ದಾರೆ. ಈ ವಿಎಫ್ ಎಕ್ಸ್ ಕಂಪನಿಯು ಓಪನ್‌ಹೈಮರ್, ಇ ಮಚಿನಾ, ಇಂಟರ್‌ಸ್ಟೆಲ್ಲಾರ್, ಡ್ಯೂನ್ ಮತ್ತು ಫಸ್ಟ್ ಮ್ಯಾನ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದೆ.
ಸಿನಿಮಾದಲ್ಲಿ ರಾಮನಾಗಿ ರಣ್ಬೀರ್, ಸೀತೆಯಾಗಿ ಸಾಯಿಪಲ್ಲವಿ, ರಾವಣನಾಗಿ ನಟ ಯಶ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹನುಮಾನ್ ಪಾತ್ರದಲ್ಲಿ ಸನ್ನಿ ಡಿಯೋಲ್ , ಬಾಬಿ ಡಿಯೋಲ್ ಕುಂಭಕರ್ಣನಾಗಿ, ವಿಭೂಷಣನಾಗಿ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇನ್ನು ರಾಜ ದಶರಥನ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ ಆದರೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬಿದ್ದಿಲ್ಲ.