ಹೊಸದಿಲ್ಲಿ: ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ ಅವರು ಈ ಹಿಂದೆ ಪಾಕಿಸ್ಥಾನಿ ಚಿತ್ರಗಳಲ್ಲಿ ನಟಿಸುವ ಬಗ್ಗೆ ನೀಡಿದ ಹೇಳಿಕೆಯ ಕುರಿತು ಮತ್ತೆ ಸ್ಪಷ್ಟನೆ ನೀಡಿದ್ದಾರೆ.
ಕಳೆದ ವರ್ಷದ ಜೆಡ್ಡಾ ಫಿಲಂ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದ ವೇಳೆ ರಣಬೀರ್ ಕಪೂರ್ ಅವರಿಗೆ ಪಾಕಿಸ್ಥಾನಿ ಚಿತ್ರಗಳಲ್ಲಿ ನಟಿಸುತ್ತೀರಾ ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರ ನೀಡಿದ್ದ ರಣಬೀರ್, “ಖಂಡಿತ ಸರ್. ಕಲಾವಿದರಿಗೆ, ವಿಶೇಷವಾಗಿ ಕಲೆಗಳಿಗೆ ಯಾವುದೇ ಗಡಿಗಳಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದಿದ್ದರು.
ಅವರ ಹೇಳಿಕೆಯು ಸಾಕಷ್ಟು ಸಂಚಲನ ಮೂಡಿಸಿತ್ತು. ಇದೀಗ, ನಟ ರಣಬೀರ್ ಕಾರ್ಯಕ್ರಮವೊಂದರಲ್ಲಿ ಈ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
“ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಫಿಲಂ ಫೆಸ್ಟಿವಲ್ ಗೆ ಹೋಗಿದ್ದೆ. ಅಲ್ಲಿ ಬಹಳಷ್ಟು ಪಾಕಿಸ್ತಾನಿ ಚಿತ್ರ ನಿರ್ಮಾಪಕರು ನನಗೆ, ನಿಮಗೆ ಒಳ್ಳೆಯ ಸಬ್ಜೆಕ್ಟ್ ಸಿಕ್ಕಿದ್ದರೆ ನೀವು ಅದನ್ನು ಮಾಡುತ್ತೀರಾ ಎಂದು ಪ್ರಶ್ನೆಯನ್ನು ಕೇಳುತ್ತಿದ್ದರು, ಆದ್ದರಿಂದ, ಅದು ಯಾವುದೇ ರೀತಿಯಲ್ಲಿ ವಿವಾದವಾಗುವುದು ನನಗೆ ಇಷ್ಟವಿರಲಿಲ್ಲ” ಎಂದಿದ್ದಾರೆ.
“ನನಗೆ ಸಿನಿಮಾ ಎಂದರೆ ಸಿನಿಮಾ ಅಷ್ಟೇ. ಅದು ಕಲೆ. ನಾನು ಫವಾದ್ ಖಾನ್ ಜೊತೆ ಏ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ನನಗೆ ಪಾಕಿಸ್ತಾನದ ಸಾಕಷ್ಟು ಕಲಾವಿದರು ಗೊತ್ತು. ರಾಹತ್ ಫತೇಹ್ ಅಲಿ ಖಾನ್ ಮತ್ತು ಅತೀಫ್ ಅಸ್ಲಾಮ್ ಹಿಂದಿ ಚಿತ್ರರಂಗಕ್ಕೆ ಕೊಡುಗೆ ನೀಡಿದ ಅಂತಹ ಶ್ರೇಷ್ಠ ಗಾಯಕರು. ಹಾಗಾಗಿ ಸಿನಿಮಾವೇ ಸಿನಿಮಾ. ಸಿನಿಮಾ ಗಡಿಗಳನ್ನು ನೋಡುತ್ತದೆ ಎಂದು ನಾನು ಭಾವಿಸುವುದಿಲ್ಲ” ಎಂದು ರಣಬೀರ್ ಕಪೂರ್ ಹೇಳಿದ್ದಾರೆ.
ಆದರೆ ದೇಶದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಅವರು, “ಸಹಜವಾಗಿ ನಾವು ಕಲೆಯನ್ನು ಗೌರವಿಸಬೇಕು ಆದರೆ ಅದೇ ಸಮಯದಲ್ಲಿ ಕಲೆ ದೇಶಕ್ಕಿಂತ ದೊಡ್ಡದಲ್ಲ” ಎಂದಿದ್ದಾರೆ.