Advertisement

ಕರ್ನಾಟಕಕ್ಕೆ ಚಿಗುರಿದ ಕ್ವಾರ್ಟರ್‌ಫೈನಲ್‌ ಕನಸು

10:16 AM Feb 14, 2020 | sudhir |

ಬೆಂಗಳೂರು: ರಣಜಿ ಕ್ರಿಕೆಟ್‌ ಎಲೈಟ್‌ “ಎ’ ಮತ್ತು “ಬಿ’ ಗುಂಪಿನ ಬರೋಡ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಮೊದಲ ದಿನವೇ ಕ್ವಾರ್ಟರ್‌ಫೈನಲ್‌ಗೇರುವ ಸ್ಪಷ್ಟ ಕನಸೊಂದನ್ನು ಕಂಡಿದೆ.

Advertisement

ಅಭಿಮನ್ಯು ಮಿಥುನ್‌ (26ಕ್ಕೆ 3), ಕೆ. ಗೌತಮ್‌ (25ಕ್ಕೆ 3), ಪ್ರಸಿದ್ಧ್ ಕೃಷ್ಣ (7ಕ್ಕೆ 2) ಹಾಗೂ ಶ್ರೇಯಸ್‌ ಗೋಪಾಲ್‌ (4ಕ್ಕೆ 1)ಅವರ ಮಾರಕ ಬೌಲಿಂಗ್‌ ದಾಳಿಗೆ ನಡುಗಿದ ಬರೋಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 85 ರನ್ನಿಗೆ ಆಲೌಟಾಗಿದೆ.

ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಕರ್ನಾಟಕ ತಂಡ ದಿನದಾಟದ ಅಂತ್ಯಕ್ಕೆ 7 ವಿಕೆಟಿಗೆ 165 ರನ್‌ ಗಳಿಸಿದೆ. ಒಟ್ಟಾರೆ 80 ರನ್‌ ಮುನ್ನಡೆ ಪಡೆದುಕೊಂಡಿದೆ. ಎಸ್‌. ಶರತ್‌ (ಬ್ಯಾಟಿಂಗ್‌ 19) ಹಾಗೂ ಅಭಿಮನ್ಯು ಮಿಥುನ್‌ (ಬ್ಯಾಟಿಂಗ್‌ 9) ಗುರುವಾರಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಸದ್ಯ ಕರ್ನಾಟಕ ಹಿನ್ನಡೆಯಿಂದ ಪಾರಾಗಿದೆ. ಇದೀಗ ಡ್ರಾಗೊಂಡರೂ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಕ್ವಾರ್ಟರ್‌ಫೈನಲ್‌ಗೇರುವ ಸಾಧ್ಯತೆ ಹೆಚ್ಚಿಸಿಕೊಂಡಿದೆ. ಆದರೆ ಮೊದಲ ದಿನದ ಆಟದಲ್ಲಿ ಉಭಯ ತಂಡಗಳಿಂದ ಒಟ್ಟಾರೆ 17 ವಿಕೆಟ್‌ ಉರುಳಿವೆ. ಪಿಚ್‌ ವರ್ತನೆ, ಬ್ಯಾಟಿಂಗ್‌ಗೆ ಅನುಕೂಲವಾಗಿರದ ಪರಿಸ್ಥಿತಿ, ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಪಂದ್ಯವು ಪೂರ್ಣ ಫ‌ಲಿತಾಂಶ ಕಾಣುವ ಸಾಧ್ಯತೆ ಹೆಚ್ಚಿದೆ.

ಕರ್ನಾಟಕಕ್ಕೂ ಅಪ್ಪಳಿಸಿದ ಆಘಾತ
ಬರೋಡ ಇನ್ನಿಂಗ್ಸ್‌ ಕೇವಲ 85 ರನ್ನಿಗೆ ಪತನಗೊಂಡ ಬಳಿಕ ಇನ್ನಿಂಗ್ಸ್‌ ಆರಂಭಿಸಿದ ರಾಜ್ಯ ತಂಡಕ್ಕೆ ಆರಂಭದಲ್ಲೇ ಭಾರೀ ಆಘಾತ ಎದುರಾಯಿತು. ಸೋಯೆಬ್‌ ಸೊಪಾರಿಯಾ (40ಕ್ಕೆ 3), ಅಭಿಮನ್ಯು ರಜಪೂತ್‌ (17ಕ್ಕೆ 2), ಭಾರ್ಗವ್‌ ಭಟ್‌ (67ಕ್ಕೆ 2) ಬಿಗು ದಾಳಿಗೆ ಸಿಲುಕಿದ ಕರ್ನಾಟಕದ ಬ್ಯಾಟಿಂಗ್‌ ಬಲಕ್ಕೆ ಪೆಟ್ಟು ಬಿದ್ದಿತ್ತು. ತಂಡದ ಒಟ್ಟು ಮೊತ್ತ 27 ರನ್‌ ತಲುಪುವಷ್ಟರಲ್ಲಿ ಆರಂಭಿಕರಾದ ಆರ್‌.ಸಮರ್ಥ್ (11 ರನ್‌) ಹಾಗೂ ದೇವದತ್ತ ಪಡಿಕ್ಕಲ್‌ (6 ರನ್‌) ವಿಕೆಟ್‌ ಕಳೆದುಕೊಂಡಿದ್ದರು. ಇಬ್ಬರನ್ನೂ ಅಭಿಮನ್ಯು ರಜಪೂತ್‌ ಪೆವಿಲಿಯನ್‌ಗೆ ಅಟ್ಟಿದರು. ಈ ವಿಕೆಟ್‌ ಉರುಳಿದ ಬಳಿಕ ಕೆ.ಸಿದ್ಧಾರ್ಥ್ (29 ರನ್‌) ಹಾಗೂ ಕರುಣ್‌ ನಾಯರ್‌ (47 ರನ್‌) ಒಟ್ಟು 88 ರನ್‌ ತನಕ ತಂಡದ ಮೊತ್ತವನ್ನು ಏರಿಸಿದರು. ತಂಡಕ್ಕೆ 3 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ತಂದುಕೊಟ್ಟರು. ಉತ್ತಮವಾಗಿ ಆಡುತ್ತಿದ್ದ ಸಿದ್ಧಾರ್ಥ್ ಎಡವಿ ಭಾರ್ಗವ್‌ ಎಸೆತದಲ್ಲಿ ಪರ್ಥ್ಗೆ ಕ್ಯಾಚ್‌ ನೀಡಿ ಔಟಾದರು. ತಂಡದ ಮೊತ್ತ 102 ರನ್‌ ಆಗುತ್ತಿದ್ದಂತೆ ಅರ್ಧಶತಕ ಸನಿಹ ಬಂದಿದ್ದ ಕರುಣ್‌ ನಾಯರ್‌ ಕೂಡ ಔಟಾದರು. ರಾಜ್ಯದ ಪರ ಕರುಣ್‌ ಅತ್ಯಧಿಕ ಸ್ಕೋರರ್‌ ಎನ್ನುವುದು ವಿಶೇಷ.

ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್‌ ನಡೆಸಿದ ಪವನ್‌ ದೇಶಪಾಂಡೆ (15 ರನ್‌), ಶ್ರೇಯಸ್‌ ಗೋಪಾಲ್‌ (0) ಹಾಗೂ ಕೆ.ಗೌತಮ್‌ (27 ರನ್‌) ಬೇಗನೇ ವಿಕೆಟ್‌ ಕೈಚೆಲ್ಲಿದರು. ಗುರುವಾರ ಮತ್ತಷ್ಟು ರನ್‌ ಕೂಡಿ ಹಾಕಿ ಬರೋಡವನ್ನು ಇಕ್ಕಟ್ಟಿಗೆ ಸಿಲುಕಿಸುವ ಯೋಜನೆಯನ್ನು ಕರ್ನಾಟಕ ತಂಡ ಹಾಕಿಕೊಂಡಿದೆ.

Advertisement

ಕುಸಿದ ಬರೋಡ
ಮೊದಲು ಬ್ಯಾಟಿಂಗ್‌ ಮಾಡಿದ ಬರೋಡ ಒಟ್ಟಾರೆ ತಂಡವಾಗಿ ಬ್ಯಾಟಿಂಗ್‌ ಮಾಡುವುದರಲ್ಲಿ ಎಡವಿತು, ಕರ್ನಾಟಕ ಬೌಲರ್‌ಗಳ ಮಿಂಚಿನ ಎಸೆತವನ್ನು ಎದುರಿಸಲಾಗದೆ ಕಂಗಾಲಾದರು, ನಿರಂತರ ವಿಕೆಟ್‌ ಕಳೆದುಕೊಳ್ಳುತ್ತ ಸಾಗಿದರು. ಬರೋಡ ಪರ ಆರಂಭಿಕ ಬ್ಯಾಟ್ಸ್‌ಮನ್‌ ಅಹ್ಮದೂ°ರ್‌ ಪಠಾಣ್‌ (45 ರನ್‌) ಹಾಗೂ ದೀಪಕ್‌ ಹೂಡಾ (20 ರನ್‌) ಎರಡಂಕೆ ದಾಟಿದ್ದು ಬಿಟ್ಟರೆ ಕೆಲವರು ಸಿಂಗಲ್‌ ನಂಬರ್‌, ಮತ್ತೆ ಕೆಲವರು ಖಾತೆ ತೆರೆಯದೆ ಪೆವಿಲಿಯನ್‌ ಕಡೆಗೆ ನಡೆದರು.

Advertisement

Udayavani is now on Telegram. Click here to join our channel and stay updated with the latest news.

Next