Advertisement

ರಣಜಿ: ಸೌರಾಷ್ಟ್ರ ಮೇಲುಗೈ

12:11 AM Mar 12, 2020 | Sriram |

ರಾಜ್‌ಕೋಟ್‌: ಸೌರಾಷ್ಟ್ರ-ಬಂಗಾಲ ನಡುವಿನ ರಣಜಿ ಫೈನಲ್‌ ಪಂದ್ಯ ಮೊದಲ ಇನ್ನಿಂಗ್ಸ್‌ ಮುನ್ನಡೆಯ ಸ್ಪರ್ಧೆಗೆ ಸೀಮಿತಗೊಳ್ಳುವ ಸಾಧ್ಯತೆ ಗೋಚರಿಸಿದೆ. ಎರಡೂ ತಂಡಗಳ ನಿಧಾನ ಗತಿಯ ಆಟವೇ ಇದಕ್ಕೆ ಸಾಕ್ಷಿ. 3ನೇ ದಿನದ ಆಟದಲ್ಲಿ ಆತಿಥೇಯ ಸೌರಾಷ್ಟ್ರ ಮೊದಲ ಇನ್ನಿಂಗ್ಸ್‌ನಲ್ಲಿ 425 ರನ್‌ ಪೇರಿಸಿದ್ದು, ಬಂಗಾಲ 134 ರನ್ನಿಗೆ 3 ವಿಕೆಟ್‌ ಕಳೆದುಕೊಂಡಿದೆ. ಈವರೆಗೆ ಒಟ್ಟು 236.5 ಓವರ್‌ಗಳ ಆಟ ಸಾಗಿದೆ.

Advertisement

ಬುಧವಾರದ ಆಟದಲ್ಲಿ ಬಂಗಾಲದ ಸುದೀಪ್‌ ಚಟರ್ಜಿ (ಅಜೇಯ 47 ರನ್‌, 145 ಎಸೆತ, 5 ಬೌಂಡರಿ) ಹಾಗೂ ಮನೋಜ್‌ ತಿವಾರಿ (35 ರನ್‌, 116 ಎಸೆತ, 2 ಬೌಂಡರಿ) ಎಚ್ಚರಿಕೆಯ ಬ್ಯಾಟಿಂಗ್‌ ಪ್ರದರ್ಶಿಸಿದರು. ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ದಿನದ ಕೊನೆಯಲ್ಲಿ ಉತ್ತಮವಾಗಿ ಬ್ಯಾಟ್‌ ಬೀಸುತ್ತಿದ್ದ ತಿವಾರಿ ವಿಕೆಟ್‌ ಬಿದ್ದದ್ದು ಬಂಗಾಲಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಸುದೀಪ್‌ ಚಟರ್ಜಿ ಜತೆಗೆ ಅನುಭವಿ ವೃದ್ಧಿªಮಾನ್‌ ಸಾಹಾ (4) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಬಂಗಾಲ ಇನ್ನೂ 291 ರನ್‌ ಹಿನ್ನಡೆಯಲ್ಲಿದೆ.

ಬಂಗಾಲಕ್ಕೆ ಆರಂಭಿಕ ಆಘಾತ
ಬೃಹತ್‌ ಮೊತ್ತವನ್ನು ಬೆನ್ನಟ್ಟತೊಡಗಿದ ಬಂಗಾಲಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸುದೀಪ್‌ ಕುಮಾರ್‌ ಘರಮಿ (26) ಹಾಗೂ ಅಭಿಮನ್ಯು ಈಶ್ವರನ್‌ (9) ತಂಡದ ಮೊತ್ತ 35 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿ ಆಗಿತ್ತು. ಅನಂತರ ಸುದೀಪ್‌ ಚಟರ್ಜಿ, ಮನೋಜ್‌ ತಿವಾರಿ ರಕ್ಷಣೆ ನೀಡಿದರು. ಸುಮಾರು 37 ಓವರ್‌ ಜತೆಯಾಟ ನಿಭಾಯಿಸಿದ ಇವರು 3ನೇ ವಿಕೆಟಿಗೆ 89 ರನ್‌ ಪೇರಿಸಿ ಹೋರಾಟ ಜಾರಿಯಲ್ಲಿರಿಸಿದರು. ಸೌರಾಷ್ಟ್ರ ಪರ ಧರ್ಮೇಂದ್ರ ಸಿನ್ಹ ಜಡೇಜ, ಪ್ರೇರಕ್‌ ಮಂಕಡ್‌ ಹಾಗೂ ಚಿರಾಗ್‌ ಜಾನಿ ತಲಾ ಒಂದೊಂದು ವಿಕೆಟ್‌ ಕಿತ್ತರು.

425 ರನ್‌ ಪೇರಿಸಿದ ಸೌರಾಷ್ಟ್ರ
2ನೇ ದಿನದ ಅಂತ್ಯಕ್ಕೆ 8 ವಿಕೆಟಿಗೆ 384 ರನ್‌ ಒಟ್ಟುಗೂಡಿಸಿದ್ದ ಸೌರಾಷ್ಟ್ರ ಮತ್ತೆ 41 ರನ್‌ ಸೇರಿಸಿ ಆಲೌಟ್‌ ಆಯಿತು. ಧರ್ಮೇಂದ್ರ ಸಿನ್ಹ ಜಡೇಜ (ಅಜೇಯ 33) ಹಾಗೂ ಜೈದೇವ್‌ ಉನಾದ್ಕತ್‌ (20) ಅಂತಿಮ ವಿಕೆಟ್‌ಗೆ 38 ರನ್‌ ಪೇರಿಸಿದರು.

ಸಂಕ್ಷಿಪ್ತ ಸ್ಕೋರ್‌: ಸೌರಾಷ್ಟ್ರ-425 (ವಸವಾಡ 106, ಪೂಜಾರ 66, ಬರೋಟ್‌ 54, ವಿ. ಜಡೇಜ 54, ಡಿ. ಜಡೇಜ ಔಟಾಗದೆ 33, ಆಕಾಶ್‌ ದೀಪ್‌ 98ಕ್ಕೆ 4, ಶಾಬಾಜ್‌ 103ಕ್ಕೆ 3, ಮುಕೇಶ್‌ 103ಕ್ಕೆ 2). ಬಂಗಾಲ-3 ವಿಕೆಟಿಗೆ 134 (ಸುದೀಪ್‌ ಬ್ಯಾಟಿಂಗ್‌ 47, ತಿವಾರಿ 35, ಘರಮಿ 26).

Advertisement
Advertisement

Udayavani is now on Telegram. Click here to join our channel and stay updated with the latest news.

Next