Advertisement

ಕರ್ನಾಟಕಕ್ಕೆ ಸೋಲಿನ ಕಂಟಕ

09:00 AM Dec 09, 2018 | |

ರಾಜ್‌ಕೋಟ್‌: ಪ್ರಸಕ್ತ ರಣಜಿ ಕೂಟದಲ್ಲಿ ಕರ್ನಾಟಕ ಆಘಾತಕಾರಿ ಸೋಲೊಂದನ್ನು ಅನುಭವಿಸಿದೆ. ಸೌರಾಷ್ಟ್ರ ವಿರುದ್ಧ ರಾಜ್‌ಕೋಟ್‌ನಲ್ಲಿ ಮೂರೇ ದಿನದಲ್ಲಿ ಮುಗಿದ ಪಂದ್ಯದಲ್ಲಿ 87 ರನ್ನುಗಳ ಆಘಾತಕ್ಕೆ ಸಿಲುಕಿತು. 179 ರನ್ನುಗಳ ಗುರಿ ಪಡೆದ ರಾಜ್ಯ ತಂಡ 91 ರನ್ನಿಗೆ ಕುಸಿದು ಸೋಲನ್ನು ಮೈಮೇಲೆ ಎಳೆದುಕೊಂಡಿತು. 

Advertisement

ಮೂರನೇ ದಿನದಾಟದಲ್ಲಿ ಬೌಲರ್‌ಗಳೇ ಸಂಪೂರ್ಣ ಮೇಲುಗೈ ಸಾಧಿಸಿ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಕಂಟಕವಾಗಿ ಪರಿಣಮಿಸಿದರು. ಒಂದೇ ದಿನದಾಟದಲ್ಲಿ 20 ವಿಕೆಟ್‌ ಉರುಳಿದ್ದೇ ಇದಕ್ಕೆ ಸಾಕ್ಷಿ. 99 ರನ್‌ ಮುನ್ನಡೆ ಬಳಿಕ ಶನಿವಾರ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಸೌರಾಷ್ಟ್ರ ಬರೀ 79 ರನ್ನಿಗೆ ಕುಸಿಯಿತು. ಕರ್ನಾಟಕ ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿ ಗುರಿ ತಲುಪಬಹುದೆಂಬ ನಿರೀಕ್ಷೆ ಇತ್ತು. ಆದರೆ ಬಳಿಕ ಸೌರಾಷ್ಟ್ರ ಕೂಡ ಘಾತಕ ದಾಳಿ ನಡೆಸಿ ಕರ್ನಾಟಕವನ್ನು ನಡುಗಿಸಿತು.

ಮತ್ತೆ ಮೆರೆದ ಜೂ. ಜಡೇಜ
ಮೊದಲ ಸರದಿಯಲ್ಲಿ 7 ವಿಕೆಟ್‌ ಉಡಾಯಿಸಿದ ಸ್ಪಿನ್ನರ್‌ ಧರ್ಮೇಂದ್ರ ಜಡೇಜ ಮತ್ತೆ ಕರ್ನಾಟಕವನ್ನು ಕಾಡಿ 44 ರನ್ನಿಗೆ 4 ವಿಕೆಟ್‌ ಕಿತ್ತರು. ಜಡೇಜ ಅವರನ್ನು ಮೀರಿಸಿದ ಕಮಲೇಶ್‌ ಮಕ್ವಾನಾ 28ಕ್ಕೆ 5 ವಿಕೆಟ್‌ ಉಡಾಯಿಸಿದರು. ಕರ್ನಾಟಕ ತಂಡದ ಪರ ಕರುಣ್‌ ನಾಯರ್‌ (30 ರನ್‌) ಹಾಗೂ ಶ್ರೇಯಸ್‌ ಗೋಪಾಲ್‌ (27 ರನ್‌) ಹೊರತುಪಡಿಸಿದರೆ ಉಳಿದವರ್ಯಾರೂ ಎರಡಂಕೆಯ ಗಡಿ ತಲುಪಲಿಲ್ಲ. ಇದು ಪ್ರಸಕ್ತ ರಣಜಿ ಋತುವಿನಲ್ಲಿ ಸೌರಾಷ್ಟ್ರಕ್ಕೆ ಒಲಿದ ಎರಡನೇ ಗೆಲುವು. ಇದಕ್ಕೂ ಮೊದಲು ರೈಲ್ವೇಸ್‌ ವಿರುದ್ಧ 3 ವಿಕೆಟ್‌ಗಳಿಂದ ಗೆದ್ದಿತ್ತು.

ಸೌರಾಷ್ಟ್ರ ಪತನ
ಸೌರಾಷ್ಟ್ರದ ದ್ವಿತೀಯ ಇನ್ನಿಂಗ್ಸ್‌ ಪತನದಲ್ಲಿ ಜಗದೀಶ್‌ ಸುಚಿತ್‌ (29ಕ್ಕೆ 3), ಪವನ್‌ ದೇಶಪಾಂಡೆ (5ಕ್ಕೆ 3) ಹಾಗೂ ಶ್ರೇಯಸ್‌ ಗೋಪಾಲ್‌ (10ಕ್ಕೆ 3) ಪ್ರಮುಖ ಪಾತ್ರ ವಹಿಸಿದರು. ಆದರೆ ಬ್ಯಾಟಿಂಗ್‌ ವೈಫ‌ಲ್ಯ ಕರ್ನಾಟಕಕ್ಕೆ ಕಂಟಕವಾಗಿ ಪರಿಣಮಿಸಿತು.

ಇದಕ್ಕೂ ಮೊದಲು ರಾಜ್ಯ ತಂಡ ವಿದರ್ಭ, ಮುಂಬಯಿ ವಿರುದ್ಧ ಡ್ರಾ ಸಾಧಿಸಿತ್ತು. ಎರಡೂ ಪಂದ್ಯಗಳಲ್ಲಿ ಇನ್ನಿಂಗ್ಸ್‌ ಮುನ್ನಡೆಯ ಅಂಕ ಸಂಪಾದಿಸಿತ್ತು. ಮೈಸೂರಿನಲ್ಲಿ ಮಹಾರಾಷ್ಟ್ರವನ್ನು ಮಣಿಸಿ ಗೆಲುವಿನ ಖಾತೆ ತೆರೆದಿತ್ತು.  ಕರ್ನಾಟಕ ಮುಂದಿನ ಪಂದ್ಯವನ್ನು ಗುಜರಾತ್‌ ವಿರುದ್ಧ ಆಡಲಿದೆ. ಡಿ. 14ರಿಂದ ಸೂರತ್‌ನಲ್ಲಿ ಈ ಪಂದ್ಯಆರಂಭವಾಗಲಿದೆ.

Advertisement

ಸಂಕ್ಷಿಪ್ತ ಸ್ಕೋರ್‌: ಸೌರಾಷ್ಟ್ರ-316 ಮತ್ತು 79. ಕರ್ನಾಟಕ-217 ಮತ್ತು 91. 
ಪಂದ್ಯಶ್ರೇಷ್ಠ: ಧರ್ಮೇಂದ್ರ ಜಡೇಜ.

Advertisement

Udayavani is now on Telegram. Click here to join our channel and stay updated with the latest news.

Next