Advertisement

ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕೊಟ್ಟ ರಣಹೇಡಿ!

09:55 AM Nov 26, 2019 | Naveen |

ಗ್ರಾಮೀಣ ಸೊಗಡಿನ ಕಥೆಯ ಕಾರಣದಿಂದಲೇ ಎಲ್ಲ ವರ್ಗದ ಪ್ರೇಕ್ಷಕರ ಗಮನ ಸೆಳೆದುಕೊಂಡಿರೋ ಚಿತ್ರ ರಣಹೇಡಿ. ಮನು ಕೆ ಶೆಟ್ಟಿಹಳ್ಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಇದೇ ತಿಂಗಳ 29ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಮೂಲಕ ಕನ್ನಡದ ಅದೆಷ್ಟೋ ಪ್ರೇಕ್ಷಕರ ಬಹು ಕಾಲದ ಕನಸೊಂದು ನನಸಾದಂತಾಗಿದೆ. ಈ ನೆಲದ ರೈತರ ಜೀವನದ ಮೇಲೆ ಬೆಳಕು ಚೆಲ್ಲುವಂಥಾ ಸಿನಿಮಾಗಳು ತಯಾರಾಗಬೇಕೆಂಬುದು ಹಲವರ ಇಂಗಿತ. ಆದರೆ ಇತ್ತೀಚಿನ ದಿನಗಳಲ್ಲಿ ಆ ಸಂಖ್ಯೆ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆಯಾಗಿ ಬಿಟ್ಟಿದೆ. ಇದೀಗ ರಣಹೇಡಿ ಚಿತ್ರದ ಮೂಲಕ ಅದು ಸಾಕಾರಗೊಂಡಿದೆ.

Advertisement

ಸುರೇಶ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಪ್ರತೀ ಫ್ರೇಮಿನಲ್ಲಿಯೂ ರೈತ ಸಂಕುಲವೇ ಹೀರೋಗಳಂತೆ ಕಾಣುವಂತೆ ನಿರ್ದೇಶಕರು ದೃಶ್ಯ ಕಟ್ಟಿದ್ದಾರಂತೆ. ಸಿನಿಮಾ ಅಂದಮೇಲೆ ಅದಕ್ಕೊಂದಷ್ಟು ಸೂತ್ರಗಳಿರುತ್ತವೆ. ಅದೆಲ್ಲವನ್ನು ಮೀರಿಕೊಂಡು ಇಂಥಾ ಕಥೆಗಳನ್ನು ಕಮರ್ಶಿಯಲ್ ಜಾಡಿಗೂ ಒಗ್ಗಿಸಿಕೊಳ್ಳುವುದು ನಿಜಕ್ಕೂ ಸವಾಲಿನ ಸಂಗತಿ. ಮನು ಕೆ ಶೆಟ್ಟಿಹಳ್ಳಿ ಅದನ್ನು ಸಾಧ್ಯವಾಗಿಸಿದ್ದಾರೆ. ನೋಡುಗರಿಗೆ ತಮ್ಮ ನಡುವಿನ, ತಾವು ಕಡೆಗಣಿಸಿರುವ ತಮ್ಮದೇ ಬದುಕಿನ ಚಿತ್ರಗಳು ಕದಲುತ್ತಿವೆಯೇನೋ ಎಂಬಂತೆ ಭಾಸವಾಗುವ ರೀತಿಯಲ್ಲಿ ರಣಹೇಡಿ ಮೂಡಿ ಬಂದಿದೆಯಂತೆ.

ಇಲ್ಲಿರೋ ಪಾತ್ರಗಳು, ಸನ್ನಿವೇಶಗಳೆಲ್ಲವೂ ಗ್ರಾಮೀಣ ಸೊಗಡಿನವುಗಳು. ಒಂದು ಹಳ್ಳಿಯೇ ಎದ್ದು ಪರದೆ ಮೇಲೆ ಮೂಡಿಕೊಂಡಂತೆ ಈ ಸಿನಿಮಾವನ್ನು ರೂಪಿಸಬೇಕೆಂಬುದು ಮನು ಅವರ ಮಹಾ ಕನಸಾಗಿತ್ತು. ಪಳಗಿಕೊಂಡ ನಟರೊಂದಿಗೆ ಹಳ್ಳಿಗಾಡಿನ ಜನರೇ ಒಂದಷ್ಟು ಮಂದಿ ತೆರೆ ಮೇಲೆ ಕಾಣಿಸಿಕೊಂಡರೆ ಮತ್ತಷ್ಟು ಸಹಜವಾಗಿರುತ್ತೆ ಅನ್ನಿಸಿದ್ದೇ ಇಪ್ಪತೈದಕ್ಕೂ ಹೆಚ್ಚು ಮಂದಿ ಹಳ್ಳಿ ಹುಡುಗರಿಗೆ ಅವರು ನಟಿಸೋ ಅವಕಾಶ ಕೊಟ್ಟಿದ್ದಾರೆ. ಅವರೆಲ್ಲರೂ ಅತ್ಯಂತ ಸಹಜವಾಗಿ ನಟಿಸಿದ್ದಾರಂತೆ. ಇದುವೇ ರಣಹೇಡಿಯನ್ನು ಮತ್ತಷ್ಟು ನೈಜವಾಗಿ ಮೂಡಿ ಬರುವಂತೆ ಮಾಡಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next