ಮಂಡ್ಯ: ಕೇಂದ್ರ ಸರ್ಕಾರ ಜಾರಿಗೆ ತಂದ ಎಪಿಎಂಸಿ ತಿದ್ದುಪಡಿ ಕಾಯ್ದೆಗಳಿಂದ ಕೃಷಿ ಸಂಪೂರ್ಣ ನಾಶವಾಗಲಿದೆ. ಮುಂದಿನ ದಿನಗಳಲ್ಲಿ ಅನ್ನದಾತ ಸಂಕಷ್ಟಕ್ಕೆ ಸಿಲುಕಲಿದ್ದಾನೆ. ಆದ್ದರಿಂದ ರೈತರು ದಂಗೆ ಏಳಬೇಕು. ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಹೇಳಿದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮಸೂದೆಗಳು ಕರಾಳ ಕಪ್ಪು ಕಾಯ್ದೆಗಳು ಎಂದರು.
ರೈತರು, ಕಾರ್ಮಿಕರು, ಶ್ರಮಿಕರು, ಬಡವರ ಜೀವನ ಹಾಗೂ ಜೀವನೋಪಾಯದ ಮೇಲೆ ಮರಣ ಶಾಸನ ಬರೆಯಲು ಮುಂದಾಗಿದ್ದಾರೆ. ರೈತರ ಸಮಾಧಿ ಮಾಡುವ ಕೆಲಸ ಮಾಡುತ್ತಿದ್ದಾರೆ. 2013ರ ಕಾಂಗ್ರೆಸ್ ಸರ್ಕಾರದಲ್ಲಿ ರೈತರ ಭೂಸ್ವಾಧೀನವಾದರೆ ಅಥವಾ ಖರೀದಿಸಿದರೆ ರೈತರಿಗೆ ನ್ಯಾಯಯುತ, ಪರಿಹಾರ, ಪುನರ್ ವಸತಿ ಕಲ್ಪಿಸುವ ಪರ್ಯಾಯ ವ್ಯವಸ್ಥೆ ತಂದಿತ್ತು. ಆದರೆ ಇಂದು ಬಿಜೆಪಿ ಅದನ್ನು ದುರ್ಬಲ ಮಾಡಲು ಹೊರಟಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರು ಬೀದಿ ಪಾಲಾಗಲಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಟನ್ ಕಬ್ಬಿನ ಇಳುವರಿ ಆಧಾರದ ಮೇಲೆ 170 ರಿಂದ 220 ರೂ.ವರೆಗೆ ಏರಿಸಿತ್ತು. ಆದರೆ ಬಿಜೆಪಿ ಸರ್ಕಾರದಲ್ಲಿ ಕೇವಲ 10 ರೂ. ಮಾತ್ರ. ತಿದ್ದುಪಡಿ ಕಾಯ್ದೆಗಳಿಂದ ರೈತರ ಕೃಷಿ ಉತ್ಪನ್ನಗಳಿಗೆ ಕಾನೂನು ರಕ್ಷಣೆ ಇಲ್ಲದಂತಾಗುತ್ತದೆ. ಭ್ರಷ್ಟಾಚಾರಿಗಳು, ಬಂಡವಾಳಶಾಹಿಗಳು, ಉದ್ಯಮಿಗಳ ಕಪ್ಪು ಹಣವನ್ನು ಬಿಳಿ ಮಾಡಿಕೊಡಲು ಸರ್ಕಾರ ಮುಂದಾಗಿದೆ. ರೈತರ ಜಮೀನು ಮತ್ತು ಬೆಳೆಗಳನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಅಗ್ಗದ ದರದಲ್ಲಿ ಕೊಟ್ಟು ರೈತರನ್ನ ದಿವಾಳಿ ಮಾಡುವ ಷಡ್ಯಂತ್ರ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.