ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮಂಜು ಅದಾಗಲೇ ಬೆಳ್ಳಿತೆರೆ ಎಂಟ್ರಿ ಕೊಟ್ಟಿರುವುದು ತಿಳಿದಿದೆ. ಇದೀಗ ಕೋವಿಡ್‌ನ ನಂತರ ತಮ್ಮ ಎರಡನೇ ಚಿತ್ರ “ರಾಣ’ ಮೂಲಕ ಮತ್ತೆ ತೆರೆ ಮೇಲೆ ಅಬ್ಬರಿಸಲು ತಯಾರಾಗಿದ್ದಾರೆ. “ಗುಜ್ಜಲ್ ಟಾಕೀಸ್’ ಬ್ಯಾನರ್ ಅಡಿಯಲ್ಲಿ ಗುಜ್ಜಲ್ ಪುರುಷೋತ್ತಮ ನಿರ್ಮಿಸಿರುವ ರಾಣ ಚಿತ್ರಕ್ಕೆ ನಿರ್ದೇಶಕ ನಂದ ಕಿಶೋರ್ ನಿರ್ದೇಶನವಿದೆ.
ಇತ್ತೀಚಿಗೆ ಚಿತ್ರದ ಮೂರನೇ ಹಾಡು “ಗಲ್ಲಿಬಾಯ್’ ವಿಡಿಯೋ ಸಾಂಗ್ ಬಿಡುಗಡೆಗೊಳಿಸಿದೆ ಚಿತ್ರತಂಡ. ನಿರ್ದೇಶಕ ಜೋಗಿ ಪ್ರೇಮ ಹಾಡು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು.
ನಿರ್ದೇಶಕ ನಂದಕಿಶೋರ್ ಮಾತನಾಡಿ, ರಾಣ ಚಿತ್ರ ತನ್ನ ಎಲ್ಲಾ ಕೆಲಸಗಳನ್ನು ಮುಗಿಸಿ ರಿಲೀಸ್‌ಗೆ ರೆಡಿಯಿದೆ. ಇನ್ನು ಕೆಲವೇ ದಿನಗಳಲ್ಲಿ ಸೆನ್ಸಾರ್ ಪ್ರಕ್ರಿಯೇ ಕೂಡ ಪೂರ್ಣಗೊಳ್ಳಲಿದೆ. ಚಿತ್ರ ಬಿಡುಗಡೆಯ ದಿನಾಂಕವನ್ನು ನಿಗದಿ ಪಡಿಸಿದ್ದೇವೆ ಇದೇ ನವೆಂಬರ್ 11 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು.
ನಿರ್ಮಾಪಕ ಗುಜ್ಜಲ್ ಪುರುಷೋತ್ತಮ ಮಾತನಾಡಿ, ಈ ಹಿಂದೆ ಟಗರು, ಆ ದೃಶ್ಯ ಸಿನಿಮಾಗಳಿಗೆ ಎಕ್ಸಿಕ್ಯೂಟಿವ್ ಪ್ರೊಡ್ನೂಸರ್ ಆಗಿದ್ದ ನಾನು ಈಗ ರಾಣ ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್ಮಾಪಕನಾಗಿ ಬರುತ್ತಿದ್ದೇನೆ. ಇದಕ್ಕೆ ಕಾರಣ ಕೆ.ಮಂಜು. ನನ್ನ ಮೊದಲ ಪ್ರಯತ್ನಕ್ಕೆ ಎಲ್ಲರ ಸಹಕಾರ ಬಯಸುತ್ತೇನೆ ಎಂದರು.
ನಿರ್ಮಾಪಕ ಕೆ.ಮಂಜು ಮಾತನಾಡಿ, ಪುರುಷೊತ್ತಮ ಬಂದು ಚಿತ್ರ ಮಾಡುತ್ತೇನೆ ಅಂದಾಗ, ಆಯ್ತು ನಾನು ಇರ್ತಿನಿ ಮಾಡು ಎಂದೆ. ಹೀರೋ ಯಾರಪ್ಪ ಎಂದು ಕೇಳಿದಾಗ ನಿಮ್ಮ ಮಗ ಎಂದ. ಇಂದು ಚಿತ್ರ ರೆಡಿಯಾಗಿದೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಓರ್ವ ಹಳ್ಳಿ ಹುಡುಗ ನಗರಕ್ಕೆ ಬಂದು ಇಲ್ಲಿ ಏನೆಲ್ಲಾ ಸಮಸ್ಯೆ ಎದುರಿಸುತ್ತಾನೆ ಅನ್ನುವುದನ್ನು ಆ್ಯಕ್ಷನ್, ಸೆಂಟಿಮೆಂಟ್, ಪ್ರೀತಿ, ಫ್ರೆಂಡ್‌ಶಿಪ್ ಎಲ್ಲದರ ಮೂಲಕ ತೋರಿಸಿದ್ದೇವೆ. ಗೆಳತನವೇ ಇಲ್ಲಿ ಹೈಲೆಟ್ ಎಂದರು.
ಚಿತ್ರ ಸಂಗೀತ ನಿರ್ದೇಶಕ,ಗಾಯಕರು, ಇತರ ಕಲಾವಿದರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಚಿತ್ರದಲ್ಲಿ ಶ್ರೇಯಸ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದು, ಅಶೋಕ, ಕೋಟೆ ಪ್ರಭಾಕರ್ ಮುಂತಾದವರು ನಟಿಸಿದ್ದಾರೆ.
ಶೇಖರ್ ಚಂದ್ರ ಛಾಯಾಗ್ರಹಣ, ಚಂದನ್ ಶೆಟ್ಟಿ ಸಂಗೀತ ಸಂಯೋಜನೆ, ಕೆ.ಎಂ ಪ್ರಕಾಶ್ ಸಂಕಲನ, ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಚಿತ್ರಕ್ಕಿದೆ.