ಚೆನ್ನೈ : ಸೂಪರ್ ಸ್ಟಾರ್ ರಜಿನಿಕಾಂತ್ ‘ಜೈಲರ್’ ಸಿನಿಮಾ ಕಾಲಿವುಡ್ ಸಿನಿಮಾರಂಗದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಸಿನಿಮಾವಾಗಿ ಹೊರಹೊಮ್ಮಿದೆ.
‘ಜೈಲರ್’ ಸಿನಿಮಾದ ಬಳಿಕ ರಜಿನಿಕಾಂತ್ ಅವರ ಮುಂದಿನ ಸಿನಿಮಾ ಅಂದರೆ ‘ತಲೈವರ್ 170’ ಬಗ್ಗೆ ಚರ್ಚೆ ಆರಂಭಗೊಂಡಿದೆ. ಈ ಸಿನಿಮಾವನ್ನು ‘ಜೈ ಭೀಮ್’ ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶನ ಮಾಡಲಿದ್ದಾರೆ.
ಇದೇ ವರ್ಷದ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸಿನಿಮಾ ಸೆಟ್ಟೇರಲಿದ್ದು, ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಸಿನಿಮಾ ತೆರೆಗೆ ಬರಲಿದೆ.
ಈ ಸಿನಿಮಾದಲ್ಲಿ ದೊಡ್ಡ ತಾರಾಗಣವಿರಲಿದೆ. ಫಾಹದ್ ಫಾಸಿಲ್, ಅಮಿತಾಭ್ ಬಚ್ಚನ್ ಸಿನಿಮಾದಲ್ಲಿ ಇರಲಿದ್ದು, ಇದೀಗ ಮತ್ತಿಬ್ಬರು ಖ್ಯಾತ ಕಲಾವಿದರು ಸಿನಿಮಾದ ಭಾಗವಾಗಲಿದ್ದಾರೆ ಎಂದು ‘ಪಿಂಕ್ ವಿಲ್ಲಾ’ ವರದಿ ಮಾಡಿದೆ.
“ಟಿಜೆ ಜ್ಞಾನವೇಲ್ ಅವರು ‘ತಲೈವರ್ 170’ ಸಿನಿಮಾಕ್ಕಾಗಿ ಇಂಡಸ್ಟ್ರಿಯ ಕೆಲ ಖ್ಯಾತ ಕಲಾವಿದರನ್ನು ಆಯ್ದುಕೊಳ್ಳಲಿದ್ದಾರೆ. ಇದು ವಿಶೇಷ ಸಿನಿಮಾವಾಗಿರಲಿದೆ. ಬಾಲಿವುಡ್ ನಿಂದ ಅಮಿತಾಭ್ ಕಾಣಿಸಿಕೊಳ್ಳಲಿದ್ದಾರೆ. ಮಲಯಾಳಂ ಸಿನಿಮಾರಂಗದಿಂದ ಫಾಹದ್ ಫಾಸಿಲ್ ಅವರು ಕಾಣಿಸೊಕೊಳ್ಳಲಿದ್ದು, ಟಾಲಿವುಡ್ ರಂಗದಿಂದ ರಾಣಾ ದಗ್ಗುಬಾಟಿ ಹಾಗೂ ಮಾಲಿವುಡ್ ನಟಿ ಮಂಜು ವಾರಿಯರ್ ಕೂಡ ಸಿನಿಮಾದ ಭಾಗವಾಗಲಿದ್ದಾರೆ” ಎಂದು ಮೂಲವೊಂದು ತಿಳಿಸಿರುವುದಾಗಿ ‘ಪಿಂಕ್ ವಿಲ್ಲಾ’ ವರದಿ ಮಾಡಿದೆ.
ಇನ್ನು ರಜಿನಿಕಾಂತ್ ಲೋಕೇಶ್ ಕನಕರಾಜ್ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾ ಮುಂದಿನ ವರ್ಷ ಮಾರ್ಚ್ ನಲ್ಲಿ ಆರಂಭವಾಗಲಿದೆ. ಲೋಕೇಶ್ ಸಿನಿಮಾದ ಪ್ರೀ ಪ್ರೊಡಕ್ಷನ್ ವರ್ಕ್ ಶುರು ಮಾಡಿದ್ದಾರೆ ಎನ್ನಲಾಗಿದೆ.
ರಜಿನಿಕಾಂತ್ ಅವರ ‘ತಲೈವರ್170’ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಲಿದೆ. ಆ ಮೂಲಕ ʼ2.0ʼ ಬಳಿಕ ಮತ್ತೆ ರಜಿನಿಕಾಂತ್ ಸಿನಿಮಾಕ್ಕೆ ಲೈಕಾ ಬಂಡವಾಳ ಹಾಕಲಿದೆ. ಇದಲ್ಲದೆ ರಜಿನಿಕಾಂತ್ ತಮ್ಮ ಮಗಳು ಐಶ್ವರ್ಯ ಅವರ ‘ಲಾಲ್ ಸಲಾಂ’ ಸಿನಿಮಾದಲ್ಲೂ ನಟಿಸಿದ್ದಾರೆ.