ಚೆನ್ನೈ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇತ್ತೀಚೆಗಷ್ಟೇ ಘೋಷಣೆಯಾಗಿದೆ. ಹಿಂದಿ, ಕನ್ನಡ, ತೆಲುಗು, ತಮಿಳು ಸೇರಿದಂತೆ ಪ್ರಾದೇಶಿಕ ಭಾಷೆಗಳ ಸಿನಿಮಾಗಳಿಗೆ ಹಲವು ಪ್ರಶಸಿಗಳು ಅನೌನ್ಸ್ ಆಗಿದೆ. ಈ ನಡುವೆ ಕೆಲ ಸಿನಿಮಾಗಳಿಗೆ ಯಾವ ಪ್ರಶಸ್ತಿಯೂ ಸಿಗದೆ ಇರುವ ವಿಚಾರ, ಕೆಲ ಕಲಾವಿದರ ಮನಸ್ಸಿಗೆ ಬೇಸರ ಉಂಟು ಮಾಡಿದೆ.
ಮುಖ್ಯವಾಗಿ ಸೂರ್ಯ ಅಭಿನಯದ ʼಜೈ ಭೀಮ್ʼ ಸಿನಿಮಾಕ್ಕೆ ಒಂದೇ ಒಂದು ಪ್ರಶಸ್ತಿಯೂ ಸಿಗದೆ ಇರುವುದು ಅನೇಕರಿಗೆ ಬೇಸರವನ್ನುಂಟು ಮಾಡಿದೆ. ನಟ ನಾನಿ, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ʼಜೈ ಭೀಮ್ʼ ನಂತಹ ಸಿನಿಮಾಕ್ಕೆ ಪ್ರಶಸ್ತಿ ಸಿಗದೆ ಇರುವುದಕ್ಕೆ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಲ್ಲು ಅರ್ಜುನ್ ಅವರು ʼಪುಷ್ಪʼ ಸಿನಿಮಾದಲ್ಲಿನ ನಟನೆಗಾಗಿ ನ್ಯಾಷನಲ್ ಅವಾರ್ಡ್ ಪಡೆದುಕೊಂಡಿದ್ದಾರೆ. ಆದರೆ ಸಾಮಾಜಿಕವಾಗಿ ಸದ್ದು ಮಾಡಿದ ʼಜೈ ಭೀಮ್ʼ ಸಿನಿಮಾಕ್ಕೆ ಯಾವ ಪ್ರಶಸ್ತಿಯೂ ಸಿಗದೆ ಇರುವುದು ಅನೇಕರಿಗೆ ನಿರಾಶೆಯನ್ನುಂಟು ಮಾಡಿದ ವಿಚಾರವಾಗಿದೆ. ಈ ಬಗ್ಗೆ ನೆಟ್ಟಿಗರು ಕೂಡ ಹಲವು ಟ್ವೀಟ್ ಮಾಡಿ, ನ್ಯಾಷನಲ್ ಅವಾರ್ಡ್ ಬಗ್ಗೆ ಕಿಡಿಕಾಡಿದ್ದರು.
ಇದನ್ನೂ ಓದಿ: Shivaganga giri: ಮದುವೆ ವಿಡಿಯೋದಲ್ಲಿ ಸೆರೆಯಾಯಿತು ಚಿರತೆಗಳು; ವಿಡಿಯೋ ನೋಡಿ
ಇದೀಗ ಬಹುಭಾಷಾ ನಟ ರಾಣಾ ದಗ್ಗುಬಾಟಿ ಈ ವಿವಾದದ ಬಗ್ಗೆ ಮಾತನಾಡಿದ್ದಾರೆ. ʼಸೈಮಾʼ ಅವಾರ್ಡ್ ಸಂಬಂಧಿತ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, “ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಕ್ಕೆ ಅರ್ಹರು, ನಾನು ಒಂದು ಚಲನಚಿತ್ರವನ್ನು ಇಷ್ಟಪಡಬಹುದು, ನೀವು ಇನ್ನೊಂದು ಚಲನಚಿತ್ರವನ್ನು ಇಷ್ಟಪಡಬಹುದು. ಇದು ಕಲಾವಿದರಲ್ಲೂ ಒಂದೇ ಆಗಿರುತ್ತದೆ. ಇದು ವ್ಯಕ್ತಿಯ ಬಗ್ಗೆ ಅಲ್ಲ, ಆ ಕಥೆಗೆ (ಜೈ ಭೀಮ್) ಹೆಚ್ಚು ಪ್ರಶಸ್ತಿಗಳು ಬರಬೇಕಿತ್ತು ಎಂದು ಅನೇಕರು ಅಂದುಕೊಂಡಿದ್ದರು ಆದರೆ ಅದು ಆಗಲಿಲ್ಲ. ಇತರರು ಯಾಕೆ ಪ್ರಶಸ್ತಿ ಗೆದ್ದರು ಎನ್ನುವುದರ ಬಗ್ಗೆ ಈ ವಿಚಾರವಲ್ಲ. ಇದು ಯಾವತ್ತೂ ವಿವಾದವಾಗುವುದಿಲ್ಲ. ಯಾವುದೇ ಒಬ್ಬ ಕಲಾವಿದ ಟ್ವೀಟ್ ಮಾಡಬಹುದು. ನೀವೇನು ಮಾಡುತ್ತಿದ್ದೀರಿ ಅದು ವಿವಾದ. ನನ್ನಂತೆಯೇ ಮೂಲ ಧ್ವನಿಯೊಂದಿಗೆ ಲೇಖನಗಳು, ವೀಡಿಯೊಗಳು ಮತ್ತು ಯೂಟ್ಯೂಬ್ ಲಿಂಕ್‌ಗಳನ್ನು ಹಂಚುವುದು ಹಾಗೂ ಅದನ್ನು ವೈರಲ್ ಮಾಡಿದರೆ ಅದು ವಿವಾದವಾಗುತ್ತದೆ. ಅದು ಬಿಟ್ಟರೆ ನಮ್ಮ ನಡುವೆ ಬೇರೇನು ವಿವಾದವಿಲ್ಲ” ನಟ ಹೇಳಿದರು.
ನಾನಿ ಅವರು ʼಜೈ ಭೀಮ್ʼ ಬಗ್ಗೆ ಮಾಡಿದ ಟ್ವೀಟ್ ಕುರಿತು ಪ್ರಶ್ನೆ ಕೇಳಿದಾಗ “ನಾನಿ ಏನು ಮಾಡಿದ್ದಾರೆ? ಅದು ಯಾಕೆ ವಿವಾದವಾಗಬೇಕು? ಇದು ನಿಮ್ಮೆಲ್ಲರ ಊಹೆ ಅಷ್ಟೇ. ನಾನು ಅನೇಕ ವಿಷಯಗಳನ್ನು ಇಷ್ಟಪಡಬಹುದು, ನೀವು ಅನೇಕ ವಿಷಯಗಳನ್ನು ಇಷ್ಟಪಡಬಹುದು. ಎಲ್ಲರೂ ಅರ್ಹತೆಯನ್ನು ಪಡೆಯಲು ಸಾಧ್ಯವಿಲ್ಲ. ಇದೆಲ್ಲವೂ ಅಭಿಪ್ರಾಯಗಳ ವಿಚಾರವಾಗಿದೆ” ಎಂದು ನಟ ಹೇಳಿದರು.