ಕೊಪ್ಪಳ: ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಎಲ್ಲೆಡೆ ಪಸರಿಸಿತ್ತು. ವಿವಿಧ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ದೇವರಲ್ಲಿ ಸಕಲ ಚರಾಚರ ಜೀವಿಗೂ ಒಳ್ಳೆಯದಾಗಲಿ, ಮಳೆ, ಬೆಳೆ ಚೆನ್ನಾಗಿ ಆಗಲಿ. ಮನುಕುಲ ಸಮೃದ್ಧಿಯಿಂದ ಜೀವನ ಸಾಗಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಂ ಸಮುದಾಯದವರು ರಂಜಾನ್ ಮಾಸದಲ್ಲಿ ಉಪವಾಸ ವ್ರತ ಆಚರಣೆ ಮಾಡಿದ್ದರು. ಬುಧವಾರ ರಂಜಾನ್ ಕೊನೆಯ ದಿನದಂದು ಮನೆಯಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹೊಸ ಬಟ್ಟೆ ತೊಟ್ಟು, ಗಂಧ ಹಚ್ಚಿಕೊಂಡು ಸಂಭ್ರಮದಿಂದ ಹಬ್ಬ ಆಚರಿಸಿದರು.
ಬೆಳಗ್ಗೆ ಯುವಕರು, ಪಾಲಕರು, ಹಿರಿಯರು ಸೇರಿ ಸಾಮೂಹಿಕವಾಗಿ ಮಕ್ಕಳೊಂದಿಗೆ ಈದ್ಗಾ ಮೈದಾನಗಳಿಗೆ ತೆರಳಿ ದೇವರಲ್ಲಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಮೈದಾನದಲ್ಲಿ ಮುಸ್ಲಿಂ ಸಮುದಾಯದ ಧರ್ಮ ಗುರುಗಳು, ಖಾಜಿಗಳು, ಮೌಲ್ವಿಗಳು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ದೇವರಲ್ಲಿ ಸಕಲವನ್ನೂ ಹರಕೆಯನ್ನಿತ್ತು, ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೊಂಡರು. ಪ್ರಾರ್ಥನೆ ಬಳಿಕ ಮನೆಯಲ್ಲಿ ಸಿಹಿ ಪಾಯಸ ಮಾಡಿ ಕುಟುಂಬ ಸಮೇತ ಸವಿದರು. ಜೊತೆಗೆ ಆಪ್ತರು, ಸಂಬಂಧಿಕರು, ಸ್ನೇಹಿತರು ಸೇರಿದಂತೆ ಪರಿಚಯಸ್ಥರಿಗೆ ಸಿಹಿ ಪಾಯಿಸ ನೀಡಿ ರಂಜಾನ್ ಹಬ್ಬ ಆಚರಣೆ ಮಾಡಿದರು.
ಕೊಪ್ಪಳ ನಗರದ ಹೆದ್ದಾರಿ ಪಕ್ಕದ ಈದ್ಗಾ ಮೈದಾನದಲ್ಲೂ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಮುಸ್ಲಿಂ ಸಮುದಾಯವರಿಗೆ ಹಿಂದೂಗಳು ಹಬ್ಬದ ಶುಭಾಶಯ ಕೋರಿದರು. ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.