ರಾಮನಗರ: ಕಳೆದ ಎರಡು ವರ್ಷಗಳು ಕೋವಿಡ್ ಕರ್ಫ್ಯೂ ಜಾರಿಯಲ್ಲಿದ್ದ ಕಾರಣ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಸಿಕ್ಕಿರಲಿಲ್ಲ. ಮುಸಲ್ಮಾನರು ರಂಜಾನ್ ಹಬ್ಬವನ್ನು ತಮ್ಮ ಮನೆಗಳಲ್ಲೇ ಸರಳವಾಗಿ ಆಚರಿಸಿಕೊಂಡಿದ್ದರು. ಈ ಬಾರಿ ಕೋವಿಡ್ ಮಾರ್ಗಸೂಚಿಗಳು ಸಡಿಲಗೊಂಡಿರುವುದರಿಂದ ಜಿಲ್ಲೆಯಲ್ಲಿ ಮುಸಲ್ಮಾನರು ಈದ್ಗ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ನಡೆಸಿದರು.
ರಂಜಾನ್ ಹಬ್ಬದ ದಿನದಂದು ಮುಸಲ್ಮಾನರು ತಂಡೋಪ ತಂಡವಾಗಿ ಆಗಮಿಸಿ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ಈದ್ ಖುತಾº ಆಲಿಸುವುದು, ಪರಸ್ಪರ ಆಲಂಗಿಸಿ, ಯೋಗಕ್ಷೇಮ ವಿಚಾರಿಸುವುದು, ಮಾತು ಬಿಟ್ಟವರನ್ನು ಹುಡುಕಿಕೊಂಡು ಹೋಗಿ ಮಾತನಾಡಿಸುವುದು, ಖಬರಸ್ತಾನಗೆ ಭೇಟಿ ನೀಡುವುದು, ಸಾಮೂಹಿಕ ಝಿಯಾರತ್ ಮಾಡುವುದು, ನೆರೆಮನೆ ಮತ್ತು ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುವುದು, ಸಿಹಿ ತಿಂಡಿ ಹಂಚುವುದು, ಈದ್ ಹಣ ವಿತರಿಸುವುದು, ಸದಕಾ ನೀಡುವುದು, ವಿಶೇಷ ಅಡುಗೆ ತಯಾರಿಸಿ ರುಚಿ ಸವಿಯುವುದು ಇತ್ಯಾದಿ ಈ ಹಬ್ಬದ ವಿಶೇಷತೆ.
ಎರಡು ವರ್ಷಗಳ ನಂತರ ಕೋವಿಡ್ ಮಾರ್ಗಸೂಚಿಗಳಿಂದ ಮುಕ್ತವಾಗಿದ್ದು, ಮುಸಲ್ಮಾನರು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಜಿಲ್ಲೆಯಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ ಅನ್ಯಧರ್ಮಿ ಯರು ತಮ್ಮ ಮುಸಲ್ಮಾನ ಸ್ನೇಹಿತರಿಗೆ ಶುಭಾಷಯ ಕೋರಿದ್ದು ಸಾಮಾನ್ಯವಾಗಿತ್ತು.
ಸಾಮೂಹಿಕ ಪ್ರಾರ್ಥನೆ: ರಾಮನಗರದಲ್ಲಿ ತಾಲೂಕು ಆಡಳಿತ ಸೌಧದ (ಮಿನಿ ವಿಧಾನಸೌಧ) ಎದುರು ಈದ್ಗ ಮೈದಾನದಲ್ಲಿ ಸಾವಿರಾರು ಮಂದಿ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಪ್ರಾರ್ಥನೆಯ ನೇತೃತ್ವವನ್ನು ನಗರದ ಜಾಮಿಯ ಮಸೀದಿಯ ಧರ್ಮಗುರುಗಳಾದ ಮೌಲಾನ ಅಜ್ಗರ್ ಆಲಿ ಸಾಹೇಬ್ ನಡೆಸಿಕೊಟ್ಟರು. ಈದ್ಗ ಮೈದಾನದಲ್ಲಿ ಸ್ಥಳ ಸಾಲದಿದ್ದರಿಂದ ಮುಂದೆ ಇರುವ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಪ್ರಾರ್ಥನೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎಂದಿನಂತೆ ಅನುವು ಮಾಡಿಕೊಟ್ಟಿತ್ತು. ಪ್ರಾರ್ಥನೆ ವೇಳೆ ತಮ್ಮ ಹಿರಿಯರೊಡನೆ ಹಾಜರಿದ್ದ ಚಿಣ್ಣರು ತಮ್ಮ ಹಿರಿಯರನ್ನು ಅನುಕರಿಸಿ ಪ್ರಾರ್ಥನೆ ನಡೆಸಿದರು.
ಪ್ರಾರ್ಥನೆಯ ನಂತರ ಹಿರಿಯರು ಪರಸ್ಪರ ಆಲಂಗಿಸಿಕೊಂಡು ಶುಭಾಶಯ ಕೋರಿದ್ದನ್ನು ಕಂಡ ಚಿಣ್ಣರು ಸಹ ಅನುಕರಿಸಿದರು.
ತಾಲೂಕಿನ ಬಿಡದಿಯ ಈದ್ಗ ಮೈದಾನದಲ್ಲೂ ಸಾವಿರಾರು ಮುಸ್ಲಿಂಮರು ಸಾಮೂಹಿಕ ಪ್ರಾರ್ಥನೆ ನಡೆಸಿದರು. ವೃದ್ಧರು, ತಮ್ಮ ಸಮೀಪದ ಮಸೀದಿಗಳಲ್ಲಿ ಪ್ರಾರ್ಥನೆ ನಡೆಸಿದರು. ಸಾಮೂಹಿಕ ಪ್ರಾರ್ಥನೆಗೆ ಮುನ್ನ ಅನೇಕರು ಬಡವರಿಗೆ ದಾನ ನೀಡಿದರು.