ಗದಗ: ಕೊರೊನಾ ನಿಯಂತ್ರಣಕ್ಕಾಗಿ ಸರಕಾರ ಕರ್ಫ್ಯೂ ಜಾರಿಗೊಳಿಸಿದ್ದರಿಂದ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಮುಸ್ಲಿಂ ಬಾಂಧವರು ಮನೆಯಲ್ಲೇ ಸರಳ ಮತ್ತು ಸಂಭ್ರಮದಿಂದ ರಂಜಾನ್ ಹಬ್ಬ ಆಚರಿಸಿದರು.
ರಂಜಾನ್ ಮಾಸಾದ್ಯಂತ ಉಪವಾಸ ವ್ರತ ಕೈಗೊಂಡಿದ್ದ ಮುಸ್ಲಿಂ ಬಾಂಧವರು ಶುಕ್ರವಾರ ಮನೆಯಲ್ಲೇ ಕುಟುಂಬ ಸಮೇತರಾಗಿ ಶ್ರದ್ಧಾ-ಭಕ್ತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಳೆದೊಂದು ವರ್ಷದಿಂದ ದೇಶಾದ್ಯಂತ ಕೊರೊನಾ ಪಿಡುಗು ಆವರಿಸಿದ್ದು, ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾ ಆಪತ್ತು ನಿವಾರಿಸಿ, ಸಕಲ ಜೀವ ರಾಶಿಗಳಿಗೂ ಲೇಸು ಮಾಡಲಿ ಎಂದು ಅಲ್ಲಾಹನಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ನೆರೆಹೊರೆಯರು ಹಾಗೂ ಸ್ನೇಹಿತರನ್ನು ಭೇಟಿ ಮಾಡಿ ಹಬ್ಬದ ಶುಭ ಕೋರಿದರು.
ಸಾಮಾನ್ಯವಾಗಿ ಹಬ್ಬದ ಶುಭ ಕೋರಲು ಪರಸ್ಪರ ಆಲಂಗಿಸಿಕೊಳ್ಳುವ ಬದಲಾಗಿ, ದೂರದಿಂದಲೇ “ಅಸಲಾಂ ವಾಲೇಖುಂ- ವಾಲೇಖುಂ ಸಲಾಂ, ಈದ್ ಮುಬಾರಕ್’ ಎನ್ನುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿತ್ತು. ಮನೆ ಮಂದಿಯಲ್ಲಿ ಒಟ್ಟುಗೆ ಕುಳಿತು, ಹಬ್ಬಕ್ಕೆ ತಯಾರಿಸಿದ ಸುರುಕುಂಬ, ಬಿರಿಯಾನಿ ಹಾಗೂ ಮಾಂಸದೂಟ ಸವಿದರು.
ಹಬ್ಬದ ನಿಮಿತ್ತ ಮುಸ್ಲಿಂ ಸಮಾಜದ ಕೆಲ ನಾಯಕರು ಹಬ್ಬದ ಖರ್ಚು- ವೆಚ್ಚಗಳಿಗಾಗಿ ಕೂಡಿಟ್ಟಿದ್ದ ಹಣದಲ್ಲಿ ಬಡವರಿಗೆ ಆಹಾರ ಸಾಮಗ್ರಿ ಹಾಗೂ ವೈದ್ಯಕೀಯ ಚಿಕಿತ್ಸೆಗಾಗಿ ಹಣಕಾಸಿನ ನೆರವು ನೀಡಿ, ಮಾನವೀಯತೆ ಸಾರಿದರು. ರಂಜಾನ್ ಹಬ್ಬದ ನಿಮಿತ್ತ ಪ್ರತೀ ವರ್ಷ ನಗರದ ವಿವಿಧ ಈದ್ಗಾ ಮೈದಾನಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ಲಾಕ್‌ಡೌನ್ ಜಾರಿಗಿದ್ದರಿಂದ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲದಂತಾಯಿತು.
ಈದ್ಗಾ ಮೈದಾನಗಳಲ್ಲಿ ವಿಶೇಷ ಪ್ರಾರ್ಥನೆ ನಿರ್ಬಂಧಿ ಸಿದ್ದರಿಂದ ಇಲ್ಲಿನ ಡಂಬಳ ನಾಕಾ, ಮುಳಗುಂದ ನಾಕಾ ಸಮೀಪದ ಶಾಹಿ ಈದ್ಗಾ ಮೈದಾನ, ಬೆಟಗೇರಿಯ ರೈಲ್ವೆ ನಿಲ್ದಾಣ ಸಮೀಪದ ಈದ್ಗಾ ಮೈದಾನಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ರಂಜಾನ್ ಹಬ್ಬದ ವಿಶೇಷವಾಗಿ ತರಹೇವಾರಿ ಮಾಂಸ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಹೀಗಾಗಿ, ಇಲ್ಲಿನ ಜವಳಿ ಗಲ್ಲಿ, ಮಾಬುಸೂಬಾನ್ ಕಟ್ಟಿ, ಬೆಟಗೇರಿ ಭಾಗದ ಮಾಂಸ ಮಾರಾಟ ಅಂಗಡಿಗಳಲ್ಲಿ ಮಾಂಸ ಮಾರಾಟ ಜೋರಾಗಿತ್ತು.