ಮುಂಬಯಿ, ಎ. 25: ಶನಿವಾರದಿಂದ ಪವಿತ್ರ ರಮ್ಜಾನ್ ತಿಂಗಳು ಪ್ರಾರಂಭವಾಗಿದ್ದು, ಈ ಹಿನ್ನೆಲೆ ಜನರು ಗುಂಪು ಸೇರುವುದು, ಸಾಮಾಜಿಕ ಅಂತರ ನಿಯಮಗಳನ್ನು ಮುರಿಯುವುದನ್ನು ತಡೆಯಲು ಮುಂಬಯಿ ಪೊಲೀಸರು ಜನರ ಮೇಲೆ ನಿಗಾ ಇಡಲು ಡ್ರೋನ್‌ಗಳನ್ನು ನಿಯೋಜಿಸಲು ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭ ಮುಂಬಯಿ ಪೊಲೀಸ್ ವಕ್ತಾರ ಪ್ರಣಯ್ ಅಶೋಕ್ ಅವರು ಮಾತನಾಡಿ, ಮುಸ್ಲಿಮರಿಗೆ ಸೆಹ್ರಿ ಅಥವಾ ಇಫ್ತಾರ್ ಖರೀದಿಗಳನ್ನು ಮಾಡಲು ಯಾವುದೇ ರೀತಿಯ ವಿಶೇಷ ವಿನಾಯಿತಿಗಳನ್ನು ನೀಡಿಲ್ಲ ಎಂದು ಖಚಿತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ನಗರ ಪೊಲೀಸರು ಘೋಷಣೆಗಳನ್ನು ಮಾಡುತ್ತಿರುವ ವೀಡಿಯೋಗಳಿಗೆ ಪ್ರತಿಕ್ರಿಯಿಸಿದ ಅಶೋಕ್ ಅವರು, ಲಾಕ್‌ಡೌನ್ ದೃಷ್ಟಿಯಿಂದ ಅಂತಹ ಯಾವುದೇ ಸಡಿಲಿಕೆಗೆ ಅನುಮತಿಸಲಾಗಿಲ್ಲ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್‌ಗೆ ತಿಳಿಸಿದ್ದಾರೆ.
ಇದರ ಜತೆ ವಲಯ 1ರ ಉಪ ಪೊಲೀಸ್ ಆಯುಕ್ತ ಸಂಗ್ರಾಮ್ ಸಿಂಗ್ ನಿಶಾಂದರ್ ಅವರು, ರಮ್ಜಾನ್ ಸಮಯದಲ್ಲಿ ಭದ್ರತಾ ವ್ಯವಸ್ಥೆಗಾಗಿ ಮುಂಬಯಿ ಪೊಲೀಸರು ಸಂಪೂರ್ಣ ಸಜ್ಜಾಗಿದ್ದಾರೆ ಎಂದು ಮಾಹಿತಿ ನೀಡಿದರು. ನಮ್ಮ ಮುಸ್ಲಿಂ ಸಹೋದರರು ಎಲ್ಲ ರೀತಿಯ ಸಾಮಾಜಿಕ ಅಂತರ ನಿಯಮಗಳನ್ನು ಅನುಸರಿಸಬೇಕು. ಯಾವುದೇ ಮಸೀದಿ, ಕಟ್ಟಡ ಅಥವಾ ಟೆರೇಸ್‌ಗಳಲ್ಲಿ ಜನಸಂದಣಿ ಸೇರಬಾರದು. ಈ ಕುರಿತಂತೆ ಡ್ರೋನ್ ಗಳು ಅವರ ಚಟುವಟಿಕೆಗಳ ಮೇಲೆ ನಿಗಾ ಇಡಲಿವೆ ಮತ್ತು ಯಾವುದೇ ಉಲ್ಲಂಘನೆಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.
ಎಲ್ಲ ಮುಸ್ಲಿಂ ಪ್ರದೇಶಗಳಲ್ಲಿ ನಿರಂತರವಾಗಿ ಅಗತ್ಯ ವಸ್ತುಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮುಂಬಯಿ ಪೊಲೀಸರು ಸ್ವಯಂಸೇವಕ ಗುಂಪುಗಳು ಮತ್ತು ಸಂಸ್ಥೆಗಳೊಂದಿಗೆ ಸೇರಿ ವ್ಯವಸ್ಥೆ ಮಾಡಲಿದ್ದಾರೆ ಎಂದವರು ಭರವಸೆ ನೀಡಿದರು.
ಕಂಟೈನ್‌ಮೆಂಟ್ ವಲಯಗಳಲ್ಲಿ ಯಾರಿಗೂ ಮನೆಯಿಂದ ಹೊರ ಬರಲು ಅನುಮತಿ ಇಲ್ಲದಿರುವುದರಿಂದ, ಸೆಹರಿ ಮತ್ತು ಇಫ್ತಾರ್‌ಗೆ ಅವರ ಅಗತ್ಯತೆಗಳನ್ನು ಪೂರೈಸಲು ನಾವು ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮನೆಮೆನೆಗೆ ಹಂಚಿಕೆ ಮಾಡುತ್ತಿದ್ದೇವೆ ಎಂದು ನಿಶಾಂದರ್ ಹೇಳಿದರು. ಮಸೀದಿಗಳಿಗೆ ‘ಆಜಾನ್’ ಘೋಷಿಸಲು ಅವಕಾಶ ನೀಡಲಾಗುವುದು, ಆದರೆ ಲಾಕ್ ಡೌನ್ ಸಮಯದಲ್ಲಿ ನಮಾಜ್ ಅಥವಾ ಇತರ ಸಮಾರಂಭಗಳಿಗೆ ಯಾವುದೇ ಕೂಟಗಳನ್ನು ಅನುಮತಿಸಲಾಗುವುದಿಲ್ಲ ಎಂದರು.