Advertisement

ಅಕ್ರಮವನ್ನೇ ಮಾಡಿರೋ ರಾಮುಲುಗೆ ಸೆಕ್ಷನ್‌ 420 ಬಗ್ಗೆ ಮಾತ್ರ ಗೊತ್ತು

06:00 AM Oct 24, 2018 | |

ಸಂಡೂರು/ಹಂಪಿ: ಉಪಚುನಾವಣೆಯ ಹೈವೋಲ್ಟೆಜ್‌ ಕ್ಷೇತ್ರ ಬಳ್ಳಾರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ಬಿ.ಶ್ರೀರಾಮುಲು ಅವರ ವಾಕ್ಸಮರ ಮತ್ತಷ್ಟು ಜೋರಾಗಿದೆ. ತಮ್ಮ ಪಕ್ಷದ ಅಭ್ಯರ್ಥಿ ಪರ ಮಂಗಳವಾರ ಪ್ರಚಾರ ನಡೆಸಿದ
ಇಬ್ಬರೂ ಪರಸ್ಪರ ವಾಗ್ಧಾಳಿ ಮುಂದುವರಿಸಿದರು. ಸಂಡೂರಿನಲ್ಲಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಮುಲು, ರೆಡ್ಡಿ ಅವರಿಗೆ 371(ಜೆ) ಬಗ್ಗೆ ಗೊತ್ತಿಲ್ಲ, ಗೊತ್ತಿದ್ದರೆ ನನ್ನೊಂದಿಗೆ ಚರ್ಚೆಗೆ ಬರಲಿ. ಕೇವಲ ಅಕ್ರಮಗಳನ್ನೇ ಮಾಡಿರುವ ರೆಡ್ಡಿ ಹಾಗೂ ರಾಮುಲುಗೆ ಸೆಕ್ಷನ್‌ 420 ಬಗ್ಗೆ ಚೆನ್ನಾಗಿ ಗೊತ್ತಿದೆ ಎಂದು ವ್ಯಂಗ್ಯವಾಡಿದರು. 

Advertisement

ರಿಪಬ್ಲಿಕ್‌ ಆಫ್‌ ಬಳ್ಳಾರಿ ಆಗಲು ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಕಾರಣ. ಅಕ್ರಮ ಗಣಿಗಾರಿಕೆಯ ತನಿಖೆ ನಡೆಸಿ ವರದಿ ನೀಡಿದ್ದ ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆಯವರೇ ಈ ಬಗ್ಗೆ ಉಲ್ಲೇಖೀಸಿದ್ದರು. ಒಂದು ಕಾಲದಲ್ಲಿ ಇಡೀ ಜಿಲ್ಲೆಯನ್ನು ರೆಡ್ಡಿ ಟೀಂ ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡಿತ್ತು. ಮೊದಲು ಇಡೀ ಬಳ್ಳಾರಿಯಲ್ಲಿ ಭಯದ ವಾತಾವರಣ ಇತ್ತು. ರೆಡ್ಡಿ ಬ್ರದರ್ಸ್‌ ಎಲ್ಲ ಕಡೆ ಗೂಂಡಾಗಳನ್ನು ಬಿಟ್ಟಿದ್ದರು. ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಇಲ್ಲಿಗೆ ಬರದಂತೆ ನನಗೇ ಬೇಲಿ ಹಾಕಿ ರಸ್ತೆ ತಡೆದಿದ್ದರು. ಬಳ್ಳಾರಿಗೆ ಬಂದಾಗ ಜಾಗ ಕೂಡ ಸಿಗದಂತೆ ಮಾಡಿದ್ದರು. ಮಾಜಿ ಸಚಿವ ಜನಾರ್ದನ ರೆಡ್ಡಿ ನಿರ್ಮಿಸಿಕೊಂಡಿರುವ ಮನೆಯ ಬಳಿ ಎಷ್ಟು ಅಮಾಯಕರ ಮನೆಗಳು ಬಲಿಯಾಗಿವೆಯೋ? ರೆಡ್ಡಿ ಬ್ರದರ್ಸ್‌ ಹಾಗೂ ರಾಮುಲು ಇಡೀ ಜಿಲ್ಲೆಯಲ್ಲಿ ಸರ್ವಾಧಿಕಾರಿಗಳಂತೆ
ವರ್ತಿಸುತ್ತಿದ್ದರು ಎಂದು ಜರಿದರು. ರಾಮುಲು ಸಂಸತ್‌ನಲ್ಲಿ ಒಮ್ಮೆಯೂ ಬಾಯಿ ಬಿಟ್ಟಿಲ್ಲ ಎಂದು ಹೇಳಿದ್ದೆ. ಆದರೆ, ನಾನು ಇಂತಿಷ್ಟು ಬಾರಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಅವರು ಎಲ್ಲಿ ಬಾಯಿ ಬಿಟ್ಟಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಪುನರುತ್ಛರಿಸಿದರು.

ಜಾತಿ ಬಣ್ಣ ಹಚ್ಚಬೇಡಿ, ಮಿಸ್ಟರ್‌ ರಾಮುಲು: ನಾನು ಟೀಕೆ ಮಾಡಿದರೆ ಇಡೀ ಕುರುಬರೆಲ್ಲರೂ ಟೀಕೆ ಮಾಡಿದಂತಾಗುತ್ತಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರಾಜಕೀಯದ ಟೀಕೆಗೆ ಜಾತಿಯ ಬಣ್ಣ ಹಚ್ಚಬಾರದು. ಜಾತಿ ಬಗ್ಗೆ ಮಾತನಾಡುವ ರಾಮುಲು ವಾಲ್ಮೀಕಿ
ಸಮುದಾಯಕ್ಕೆ ಕೊಟ್ಟ ಕೊಡುಗೆ ಏನು ಎಂಬುದನ್ನು ಹೇಳಲಿ. ಶಾಸಕರ ಭವನದ ಎದುರು ವಾಲ್ಮೀಕಿ ಪ್ರತಿಮೆಯನ್ನು ರಾಮುಲು ಸ್ಥಾಪನೆ ಮಾಡಿದ್ದಾರಾ? ಬರೀ ಜಾತಿ ಹೆಸರು ಹೇಳಿಕೊಂಡು ರಾಜಕೀಯ ಮಾಡೋದು ಬಿಡು ಮಿಸ್ಟರ್‌ ರಾಮುಲು ಎಂದು ಕಿಡಿಕಾರಿದರು.

ಜನರಿಂದ ಕೇಳಿ ತಿಳಿದುಕೊಳ್ಳಿ: ಶ್ರೀರಾಮುಲು ಹಂಪಿ: 371(ಜೆ) ಬಗ್ಗೆ ರಾಮುಲು ಎಷ್ಟು ಹೋರಾಟ ಮಾಡಿದ್ದಾರೆ ಎಂಬುದನ್ನು ಸಿದ್ದರಾಮಯ್ಯನವರು ನನ್ನ ಬಳಿ ಕೇಳ್ಳೋದು ಬೇಕಿಲ್ಲ. ಜನರಿಗೆ ಗೊತ್ತಿದೆ. ಅವರಿಂದಲೇ ಕೇಳಿ ತಿಳಿದುಕೊಳ್ಳಲಿ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ತಿರುಗೇಟು ನೀಡಿದರು. ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು, 371(ಜೆ) ಬಗ್ಗೆ ದಾಖಲಾತಿಗಳನ್ನು ತೆಗೆದು ನೋಡಿದರೆ ಎಷ್ಟು ಹೋರಾಟಗಳನ್ನು ಮಾಡಿದ್ದೇವೆ ಎಂಬುದು ಅವರಿಗೆ ತಿಳಿಯಲಿದೆ.

ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿ ಯಾದ ಬಳಿಕ ರಾಜ್ಯದ ಎಲ್ಲ ಭಾಗದ ಜನರಿಗೆ ಪರಿಚಯವಾಗಿದ್ದಾರೆ. ಅದಕ್ಕೂ ಮುನ್ನ ಅವರು ಯಾರಿಗೂ ಗೊತ್ತಿರಲಿಲ್ಲ. ಹಾಗಾಗಿ 371(ಜೆ) ಬಗ್ಗೆ ರಾಮುಲು ಎಷ್ಟು ಹೋರಾಟ ಮಾಡಿದ್ದಾರೆ ಎಂಬುದನ್ನು ನನ್ನ ಬಳಿ ಕೇಳ್ಳೋದು ಬೇಕಿಲ್ಲ. ಜನರಿಗೆ ಗೊತ್ತಿದೆ. ಅವರಿಂದಲೇ ಕೇಳಿ ತಿಳಿದುಕೊಳ್ಳಲಿ ಎಂದರು. ಶ್ರೀರಾಮುಲು ಅವರು ಕೇವಲ ಗಡ್ಡ ಬಿಟ್ಟು, ಉದ್ಭವ ಮೂರ್ತಿ ಇದ್ದಂತೆ. ಇಂತವರನ್ನು ಇಲ್ಲಿಯ ಜನ ಗೆಲ್ಲಿಸಿ ಸಂಸತ್‌ಗೆ ಕಳುಹಿಸಿದ್ದಾರೆ ಎಂದೆಲ್ಲ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ನಾನು ಸಂಸತ್‌ ಸದಸ್ಯನಾದ ಬಳಿಕ ಸುಮಾರು 572 ಪ್ರಶ್ನೆ ಕೇಳಿದ್ದೇನೆ. 20 ಚರ್ಚೆಗಳಲ್ಲಿ ಭಾಗವಹಿಸಿದ್ದೇನೆ. ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ  ಕೇವಲ 12 ಚರ್ಚೆಗಳಲ್ಲಿ ಭಾಗವಹಿಸಿದ್ದು, ಒಂದು ಪ್ರಶ್ನೆಯನ್ನೂ  ಕೇಳಿಲ್ಲ ಎಂದರು. ನಾವು ವಾಲ್ಮೀಕಿ ಸಮುದಾಯದವರು. ಬೇಟೆಯನ್ನು ನಂಬಿಕೊಂಡು ಬಂದವರು. ಸಿದ್ದರಾಮಯ್ಯ ನಮ್ಮ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next