Advertisement

UV Fusion: ವಿದೇಶಿ ವಲಸೆ ಪಕ್ಷಿಗಳ ತಾಣ ಮಾಗಡಿ ಕೆರೆಗೆ ರಾಮ್ಸಾರ್‌ ಗೌರವ

10:23 AM Mar 09, 2024 | Team Udayavani |

ಜಲಭೂಮಿಗಳು ಪಾಳುಭೂಮಿಗಳಲ್ಲ. ಅವು ಮನುಷ್ಯರು ಮತ್ತು ಪ್ರಕೃತಿಗೆ ಹಲವಾರು ಪ್ರಯೋಜನಗಳನ್ನು ಒದಗಿಸುವ ಪ್ರಮುಖ ಪರಿಸರ ವ್ಯವಸ್ಥೆಗಳಾಗಿವೆ ಎಂಬುದು ವಿಶ್ವಸಂಸ್ಥೆಯಲ್ಲಿ ಉಲ್ಲೇಖಿತ ಘೋಷವಾಕ್ಯವಾಗಿದೆ.

Advertisement

ಫೆಬ್ರವರಿ 2ರಂದು ಆಚರಿಸಲಾಗುವ ವಿಶ್ವ ಜೌಗುಪ್ರದೇಶ ದಿನದ ಹಿಂದಿನ ದಿನ ಭಾರತದ 5 ತಾಣಗಳು ರಾಮ್ಸಾರ್‌ ಜೌಗು ಪ್ರದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಇದರಲ್ಲಿ ವಿಶೇಷವೆಂದರೆ ಮೂರು ಕರ್ನಾಟಕದ ಪಕ್ಷಿ ಸಂರಕ್ಷಿತ ಪ್ರದೇಶಗಳು ಹಾಗೂ ಇನ್ನೆರಡು ತಮಿಳುನಾಡಿನ ಪ್ರದೇಶಗಳು ಈ ಪಟ್ಟಿಯಲ್ಲಿದೆ. ಇವು ಜಾಗತಿಕ ರಾಮ್ಸಾರ್‌ ಮಾನ್ಯತೆ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಮೊದಲು ಭಾರತದಲ್ಲಿ 75 ತಾಣಗಳು ರಾಮ್ಸಾರ್‌ ಜೌಗು ಪ್ರದೇಶಗಳ ಪಟ್ಟಿಯಲ್ಲಿದ್ದವು. ಪ್ರಸ್ತುತ ಈ ಸಂಖ್ಯೆ 80ಕ್ಕೆ ಏರಿಕೆಯಾಗಿದೆ.

ಪ್ರತೀ ವರ್ಷ ಫೆಬ್ರುವರಿ 2ರಂದು ವಿಶ್ವ ಜೌಗುಪ್ರದೇಶ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಮಧ್ಯ ಪ್ರದೇಶದ ಇಂದೋರ್‌ ಸಮೀಪದ ಸಿರ್ಪೂರ್‌ ಸರೋವರದ ಪರಿಸರದಲ್ಲಿ ಕಾರ್ಯಕ್ರಮ ನಡೆದಿದ್ದು, ಜೌಗು ಪ್ರದೇಶದ ಸಂರಕ್ಷಣೆಯಲ್ಲಿ ತೊಡಗಿದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅಧಿಕಾರಿಗಳು, ವಿಜಾÒನಿಗಳು, ಪಕ್ಷಿ ವೀಕ್ಷಕರು, ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿದ್ದರು. ಕರ್ನಾಟಕದ ಮೂರು ಪ್ರದೇಶದಲ್ಲಿ ವಿದೇಶಿ ಪಕ್ಷಿಗಳ ಆಶ್ರಯ ತಾಣವಾದ ಮಾಗಡಿ ಕೆರೆ “ರಾಮ್ಸಾರ್‌ ವೆಟ್‌ಲ್ಯಾಂಡ್‌ ಸೈಟ್‌’ ಪಟ್ಟಿಗೆ ಸೇರ್ಪಡೆಯಾಗುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ.

ರಾಮ್ಸಾರ್‌ ವೆಟ್‌ಲ್ಯಾಂಡ್‌ ಸೈಟ್‌ ಎಂದರೇನು?

ಇರಾನ್‌ ದೇಶದಲ್ಲಿ ರಾಮ್ಸಾರ್‌ ಎಂಬ ನಗರವಿದ್ದು, 1971ರಲ್ಲಿ ಜಗತ್ತಿನ ಚೌಗು ಪ್ರದೇಶಗಳ ಸಂರಕ್ಷಣೆಗಾಗಿ ಯುನೆಸ್ಕೋ ಮೊಟ್ಟ ಮೊದಲ ಬಾರಿಗೆ ಇಲ್ಲಿ ಸಮಾವೇಶ ನಡೆಸಿತ್ತು. 1975ರಲ್ಲಿ ಸ್ಥಳ ಗುರುತಿಸುವ ಪ್ರಕ್ರಿಯೆ ಆರಂಭಿಸಿದ್ದು, ಇದನ್ನು ಹಲವು ರಾಷ್ಟ್ರಗಳು ಅಂಗೀಕರಿಸಿದ್ದರಿಂದ 1975ರ ಡಿ. 21ರಂದು ಅಸ್ತಿತ್ವಕ್ಕೆ ಬಂತು. ಭಾರತ 1982ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ. ಕರ್ನಾಟಕದ ನಾಲ್ಕು ಪ್ರದೇಶಗಳು “ರಾಮ್ಸಾರ್‌ ವೆಟ್‌ಲ್ಯಾಂಡ್‌ ಸೈಟ್’ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಪ್ರದೇಶಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನ ಸಿಗಲಿದ್ದು, ಈ ಮೂಲಕ ಚೌಗು ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ದೊರೆಯುತ್ತದೆ.

Advertisement

ರಾಮ್ಸಾರ್‌ ವ್ಯಾಪ್ತಿ

2023ರ ನವೆಂಬರ್‌ ವರೆಗೆ ಪ್ರಪಂಚಾದ್ಯಂತ 2,500 ರಾಮ್ಸರ್‌ ಸೈಟ್‌ಗಳು ಪತ್ತೆಯಾಗಿವೆ. ಇದು ಒಟ್ಟು 25,71,06,360 ಹೆಕ್ಟೇರ್‌ (63,53,23,700 ಎಕರೆಗಳು) ಪ್ರದೇಶವಾಗಿದ್ದು, 172 ರಾಷ್ಟ್ರಗಳಲ್ಲಿ ಹರಡಿಕೊಂಡಿದೆ.

ಮಾಗಡಿ ಕೆರೆ ವಲಸೆ ಪಕ್ಷಿಗಳ ತಾಣದ ಪರಿಚಯ

ಮಾಗಡಿ ಗ್ರಾಮ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನಲ್ಲಿದ್ದು, ಈ ಗ್ರಾಮದ ಕೆರೆಯ ಒಟ್ಟು ವಿಸ್ತೀರ್ಣ 134.15 ಎಕರೆಯಷ್ಟಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ವಿದೇಶಿ ಹಕ್ಕಿಗಳು ಮಾಗಡಿ ಕೆರೆಗೆ ಬಂದು ಸೇರುತ್ತವೆ ಮತ್ತು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ.

ವಿವಿಧ ಜಾತಿಯ ಹಕ್ಕಿಗಳ ಕಲರವ

ನವೆಂಬರ್‌ ತಿಂಗಳಾಂತ್ಯಕ್ಕೆ ಇಲ್ಲಿಗೆ 130ಕ್ಕೂ ಹೆಚ್ಚು ಜಾತಿಯ ಹಕ್ಕಿಗಳು ವಿವಿಧ ದೇಶಗಳಿಂದ ವಲಸೆ ಬರುವುದಾಗಿ ಪಕ್ಷಿ ತಜ್ಞರು ಅಭಿಪ್ರಯಿಸಿದ್ದಾರೆ. ಪ್ರತಿವರ್ಷವೂ ಚಳಿಗಾಲದ ವೇಳೆ ಕಳೆದ 8-9ವರ್ಷಗಳಿಂದ ಮಂಗೋಲಿಯ, ಪಾಕಿಸ್ಥಾನ, ಬಾಂಗ್ಲಾದೇಶ, ನೇಪಾಲ, ಸೈಬೇರಿಯಾ, ಮಲೇಷಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌, ಲಡಾಖ್‌, ಟಿಬೆಟ್‌, ಸೈಬಿರಿಯ ಸಹಿತ ಹಲವಾರು ದೇಶಗಳಿಂದ ಸಹಸ್ರಾರು ಪಕ್ಷಿಗಳು ಇಲ್ಲಿ ಬಂದು ಸೇರುತ್ತಿವೆ. ಅವುಗಳಲ್ಲಿ ಗೀರು ತಲೆಯ ಬಾತುಕೋಳಿ (ಬಾರ್‌ ಹೆಡೆಡ್‌ ಗೂಸ್‌) ಹಂಸಗಳ ಜಾತಿಗೆ ಸೇರಿದ ಪೇಂಟೆಡ್‌ ಸ್ಟಾರ್ಕ್‌, ಬಾರ್‌ ಹೆಡೆಡ್‌ ಗೂಜ್‌, ಪಟ್ಟೆ ತಲೆ ಹೆಬ್ಟಾತು ಪಕ್ಷಿಗಳು, ಬ್ರಾ‌ಹ್ಮೀಣಿ ಡಕ್‌, ವೈಟ್‌ ಬಿಸ್‌, ಬ್ಲಾಕ್‌ ಬಿಸ್‌, ಬ್ಲಾಕ್‌ ನೆಕ್ಕಡ್‌, ಲೀಟಲ್‌ ಕಾರ್ಮೊರಂಟ್, ಬ್ಲಾಕ್‌ ಐಬಿಸ್‌, ಪೈಂಟೆಡ್‌ ಸ್ಟಾರ್ಕ್‌ ಹಾಗೂ ಸ್ಪೂನ್‌ ಬಿಲ್‌ ಮತ್ತು ಕೇಳದ ನಾರ್ದನ್‌ ಶೆಲ್ವರ್‌, ಲಿಟ್ಲ ಕಾರ್ಪೋರಲ್ಸ್‌, ಅಟಲ್ರಿಂಗ್‌ ಪ್ಲೋವರ್‌, ಲೊಮನ್‌ ಡೇಲ್, ವುಡ್‌ ಸ್ಟಾಂಡ್‌, ಪೈಪರ, ಗ್ರಿವನ್‌ ಟೇಲ್, ಬ್ಲಾಕ್‌ ಡ್ರಾಂಗೋ , ರೆಡ್‌‌ ಢ್ರೋಟ್‌ ಮತ್ತು ಪೆಡ್ಡಿ ಪ್ರೀಪೆಟ್‌ ಹೀಗೆ ಸುಮಾರು 26ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಕೆರೆಯಲ್ಲಿ ಕಾಣ ಸಿಗುತ್ತವೆ.

ಈ ಕೆರೆಯು ಎರೆ ಅಥವಾ ಕಪ್ಪು ಮಣ್ಣಿನಿಂದ ಕೂಡಿದ್ದು, ಇಲ್ಲಿ ಮೀನು, ಉಭಯಚರ, ಮೃದ್ವಂಗಿಗಳು ಹಾಗೂ ಹಾವುಗಳು ವಿಪುಲವಾಗಿರುವುದರಿಂದ ಪಕ್ಷಿಗಳಗೆ ಆಹಾರಕ್ಕೆ ಅನುಕೂಲಕರವಾದ ಸ್ಥಳವಾಗಿದೆ. ಸುತ್ತಲಿನ ಪ್ರದೇಶದಲ್ಲಿ 20-25ಮೈಲಿ ದೂರದವರೆಗೆ ಕೃಷಿ ಪ್ರದೇಶ ಇರುವುದರಿಂದ ಕಾಳು ಕಡ್ಡಿಗಳು ಅವುಗಳಿಗೆ ಎಚ್ಚೆತ್ತವಾಗಿ ದೊರೆಯುತ್ತವೆ.

ಒಟ್ಟಾರೆಯಾಗಿ ಜಲಭೂಮಿಗಳು ಭೂಮಿ ಮತ್ತು ನೀರಿನ ನಡುವಿನ ಕೊಂಡಿ, ಸೌಂದರ್ಯದ ಸ್ಥಳವಾಗಿದೆ. ಇವು ಅಸಂಖ್ಯಾತ ಜಾತಿಗಳಿಗೆ ನೆಲೆಯನ್ನು ಒದಗಿಸುತ್ತವೆ. ಇವುಗಳ ರಕ್ಷಣೆಗೆ ನಾವು ಒಟ್ಟಾಗಿ ಕೆಲಸ ಮಾಡೋಣ.

 ಬಸವರಾಜ ಎಂ. ಯರಗುಪ್ಪಿ

ಗದಗ

Advertisement

Udayavani is now on Telegram. Click here to join our channel and stay updated with the latest news.

Next