Advertisement
ನ್ಯೂಪೋರ್ಟ್: ಇದೇ ಮೊದಲ ಸಲ ಎಟಿಪಿ ಕೂಟದ ಫೈನಲ್ ಪ್ರವೇಶಿಸಿದ ಭಾರತದ ರಾಮ್‌ಕುಮಾರ್ ರಾಮನಾಥನ್ ದಿಟ್ಟ ಹೋರಾಟ ನೀಡಿದರೂ ಪ್ರಶಸ್ತಿ ಎತ್ತುವಲ್ಲಿ ವಿಫಲರಾಗಿದ್ದಾರೆ. ರವಿವಾರ ರಾತ್ರಿ ನಡೆದ “ಹಾಲ್ ಆಫ್ ಫೇಮ್’ ಟೆನಿಸ್ ಪಂದ್ಯಾವಳಿಯ ಪ್ರಶಸ್ತಿ ಕಾಳಗದಲ್ಲಿ ಅವರನ್ನು ಅಮೆರಿಕದ 3ನೇ ಶ್ರೇಯಾಂಕದ ಆಟಗಾರ ಸ್ಟೀವ್ ಜಾನ್ಸನ್ 7-5, 3-6, 6-2 ಅಂತರದಿಂದ ಪರಾಭವಗೊಳಿಸಿದರು.20 ವರ್ಷಗಳ ಹಿಂದೆ, ಇದೇ ನ್ಯೂ ಪೋರ್ಟ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತದ ಲಿಯಾಂಡರ್ ಪೇಸ್ ಸಿಂಗಲ್ಸ್ ಪ್ರಶಸ್ತಿಯನ್ನೆತ್ತಿ ಇತಿಹಾಸ ನಿರ್ಮಿಸಿದ್ದರು. ಇದು ಭಾರತೀಯ ಟೆನಿಸಿಗನಿಗೆ ಒಲಿದ ಮೊದಲ ಎಟಿಪಿ ಸಿಂಗಲ್ಸ್ ಪ್ರಶಸ್ತಿಯಾಗಿತ್ತು. ಅಂದಿನ ಫೈನಲ್‌ನಲ್ಲಿ ಪೇಸ್ ದಕ್ಷಿಣ ಆಫ್ರಿಕಾದ ನೆವಿಲ್ಲೆ ಗಾಡ್ವಿನ್ ವಿರುದ್ಧ 6-3, 6-2 ಅಂತರದ ಗೆಲುವು ಸಾಧಿಸಿದ್ದರು. 20 ವರ್ಷಗಳ ಬಳಿಕ ಇದೇ ನ್ಯೂಪೋರ್ಟ್ ಅಂಗಳದಲ್ಲಿ ಭಾರತೀಯ ಟೆನಿಸಿಗನಿಗೆ ಎಟಿಪಿ ಸಿಂಗಲ್ಸ್ ಪ್ರಶಸ್ತಿಯ ಹಾದಿ ತೆರೆದುಕೊಂಡಿತಾದರೂ ರಾಮ್‌ಕುಮಾರ್‌ಗೆ ಈ ಅದೃಷ್ಟ ಇರಲಿಲ್ಲ.
ವಿಶ್ವ ರ್‍ಯಾಂಕಿಂಗ್‌ನಲ್ಲಿ 161ರಷ್ಟು ಕೆಳಗಿನ ಸ್ಥಾನದಲ್ಲಿರುವ ರಾಮ್‌ಕುಮಾರ್ ಫೈನಲ್ ಪ್ರವೇಶಿಸಿದ್ದೇ ದೊಡ್ಡ ಸಾಧನೆ. ಅವರ ಫೈನಲ್ ಹೋರಾಟ ಕೂಡ ಜೋಶ್‌ನಿಂದ ಕೂಡಿತ್ತು. ಆದರೆ ಸರ್ವ್‌ನಲ್ಲಿ ಹಿನ್ನಡೆಯಾದದ್ದು ಭಾರತೀಯನಿಗೆ ಮುಳುವಾಯಿತು. ಇನ್ನೊಂದೆಡೆ ಜಾನ್ಸನ್ ತಮ್ಮ ಶೇ. 83ರಷ್ಟು ಮೊದಲ ಸರ್ವ್‌ಗಳನ್ನು ಯಶಸ್ವಿಗೊಳಿಸಿದರು. ಮೊದಲ ಸೆಟ್‌ನಲ್ಲಿ ಯಾರೂ ಗೆಲ್ಲಬಹುದಾದ ಪರಿಸ್ಥಿತಿ ಇತ್ತು. ಟೈ ಬ್ರೇಕರ್‌ಗೆ ಹೋಗಲಿದ್ದ ಪಂದ್ಯವನ್ನು ಜಾನ್ಸನ್ ತಮ್ಮ ತೆಕ್ಕೆಗೆ ಸೆಳೆದುಕೊಂಡರು. ದ್ವಿತೀಯ ಸೆಟ್‌ನಲ್ಲಿ ರಾಮ್‌ಕುಮಾರ್ ತಿರುಗಿ ಬಿದ್ದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಭಾರೀ ಹಿನ್ನಡೆ ಕಂಡರು. ವಿಳಂಬವಾಗಿ ಆರಂಭಗೊಂಡಿದ್ದ ಈ ಫೈನಲ್ 2 ಗಂಟೆಗಳಲ್ಲಿ ಮುಗಿಯಿತು. ನನ್ನ ಪಾಲಿಗೆ ಇದು ಸ್ಮರಣೀಯ ವಾರವಾಗಿದೆ. ವಾರದುದ್ದಕ್ಕೂ ನಾನು ನನ್ನ ಅತ್ಯುತ್ತಮ ಆಟವನ್ನೇ ಪ್ರದರ್ಶಿಸುತ್ತ ಬಂದೆ. ನ್ಯೂಪೋರ್ಟ್ ಪ್ರಶಸ್ತಿ ಲಭಿಸಲಿಲ್ಲ ಎಂಬುದು ಬೇಸರದ ಸಂಗತಿ. ಸ್ಟೀವ್ ಅವರ ಫೋರ್‌ಹ್ಯಾಂಡ್ ಶಾಟ್ ಅಮೋಘ ಮಟ್ಟದಲ್ಲಿತ್ತು. ತೃತೀಯ ಸೆಟ್‌ನಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ನನ್ನನ್ನು ಮೀರಿಸಿದರು.
-ರಾಮ್‌ಕುಮಾರ್
Related Articles
ಪ್ಯಾರಿಸ್: ನ್ಯೂಪೋರ್ಟ್ ಟೆನಿಸ್ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದ ಭಾರತದ ರಾಮ್‌ಕುಮಾರ್‌ರಾಮನಾಥನ್, ಸೋಮವಾರ ಬಿಡುಗಡೆ ಗೊಂಡ ನೂತನ ಟೆನಿಸ್ ರ್‍ಯಾಂಕಿಂಗ್‌ನಲ್ಲಿ 46 ಸ್ಥಾನಗಳ ನೆಗೆತ ಕಂಡು 115ನೇ ಸ್ಥಾನ ಅಲಂಕರಿಸಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್ ಆಗಿದೆ. 23ರ ಹರೆಯದ, ಚೆನ್ನೈ ಮೂಲದ ರಾಮ್‌ಕುಮಾರ್ ನ್ಯೂಪೋರ್ಟ್ ಸಾಧನೆಯಿಂದ 150 ಅಂಕ ಸಂಪಾದಿಸಿದರು.
Advertisement
ಯೂಕಿ ಭಾಂಬ್ರಿ ಟಾಪರ್ಯೂಕಿ ಭಾಂಬ್ರಿ ಒಂದು ಸ್ಥಾನ ಕೆಳಗಿಳಿದರೂ ಭಾರತದ ಅತ್ಯುತ್ತಮ ರ್‍ಯಾಂಕಿಂಗ್‌ನ ಟೆನಿಸಿಗನಾಗಿ ಮುಂದು ವರಿದಿದ್ದಾರೆ (86). ಪ್ರಜ್ಞೆಶ್ ಗುಣೇಶ್ವರನ್ 2 ಸ್ಥಾನ ಕೆಳಗಿಳಿದಿದ್ದಾರೆ (186). ಸುಮಿತ್ ನಗಾಲ್ 269ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸಾಕೇತ್ ಮೈನೇನಿ 18 ಸ್ಥಾನ ಜಿಗಿದಿದ್ದಾರೆ (339). ಹಾಗೆಯೇ ಅರ್ಜುನ್ ಖಾಢೆ 16 ಸ್ಥಾನ ಮೇಲೇರಿದ್ದಾರೆ (345). ವನಿತಾ ಸಿಂಗಲ್ಸ್ ರ್‍ಯಾಂಕಿಂಗ್‌ನಲ್ಲಿ ಅಂಕಿತಾ ರೈನಾ ಮರಳಿ ಟಾಪ್-200 ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ. ಡಬಲ್ಸ್: ಬೋಪಣ್ಣ ಯಥಾಸ್ಥಾನ
ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ 27ನೇ ಸ್ಥಾನದಲ್ಲಿ ಮುಂದುವರಿದರೆ, ದಿವಿಜ್ ಶರಣ್ 2 ಸ್ಥಾನ (38), ಲಿಯಾಂಡರ್ ಪೇಸ್ 5 ಸ್ಥಾನ (80), ಪುರವ್ ರಾಜ 2 ಸ್ಥಾನ (83), ವಿಷ್ಣುವರ್ಧನ್ 6 ಸ್ಥಾನಗಳ (98) ಹಿನ್ನಡೆ ಅನುಭವಿಸಿದ್ದಾರೆ. ಪ್ರಗತಿ ಕಂಡವರು ಜೀವನ್ ನೆಡುಂಚೆಝಿಯನ್ (87) ಮತ್ತು ಎನ್. ಶ್ರೀರಾಮ್ ಬಾಲಾಜಿ (96) ಮಾತ್ರ.