Advertisement

ರಾಮ್‌ಕುಮಾರ್‌ಗೆ ಮೊದಲ ಸೆಮಿಫೈನಲ್‌

06:00 AM Jul 21, 2018 | Team Udayavani |

ನ್ಯೂಪೋರ್ಟ್‌: ಭಾರತದ ರಾಮ್‌ಕುಮಾರ್‌ ರಾಮನಾಥನ್‌ ಮೊದಲ ಬಾರಿಗೆ ಎಟಿಪಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ನ್ಯೂಪೋರ್ಟ್‌ನಲ್ಲಿ ನಡೆಯುತ್ತಿರುವ “ಹಾಲ್‌ ಆಫ್ ಫೇಮ್‌ ಓಪನ್‌’ ಗ್ರಾಸ್‌ಕೋರ್ಟ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಅವರು ಈ ಸಾಧನೆ ಮಾಡಿದರು.

Advertisement

23ರ ಹರೆಯದ ರಾಮ್‌ಕುಮಾರ್‌ ರಾಮನಾಥನ್‌ ಗುರುವಾರ ರಾತ್ರಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕೆನಡಾದ ವಾಸೆಕ್‌ ಪೊಸ್ಪಿಸಿಲ್‌ ಅವರನ್ನು 7-5, 6-2 ಅಂತರದಿಂದ ಹಿಮ್ಮೆಟ್ಟಿಸಿದರು. ಒಂದು ಗಂಟೆ, 18 ನಿಮಿಷಗಳ ತನಕ ಇವರಿಬ್ಬರ ಹೋರಾಟ ನಡೆಯಿತು. ಕಳೆದ ವರ್ಷ ಅಂಟಾಲ್ಯ ಓಪನ್‌ನಲ್ಲಿ ವಿಶ್ವದ ನಂ.8 ಆಟಗಾರ ಡೊಮಿನಿಕ್‌ ಥೀಮ್‌ ಅವರನ್ನು ಪರಾಭವಗೊಳಿಸಿದ ಬಳಿಕ ರಾಮ್‌ಕುಮಾರ್‌ ಸಾಧಿಸಿದ ಬಹು ದೊಡ್ಡ ಗೆಲುವು ಇದಾಗಿದೆ. 161ನೇ ರ್‍ಯಾಂಕಿಂಗ್‌ನ ಭಾರತೀಯನ ಮುಂದಿನ ಎದುರಾಳಿ ಅಮೆರಿಕದ ಟಿಮ್‌ ಸಿಜೆಕ್‌.

ಪೇಸ್‌ ಜೋಡಿಗೆ ಸೋಲು
ಅಮೆರಿಕದ ಜಾಮಿ ಸೆರಾಟನಿ ಜತೆಗೂಡಿ ಡಬಲ್ಸ್‌ ಆಡುತ್ತಿರುವ ಲಿಯಾಂಡರ್‌ ಪೇಸ್‌ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ. ಭಾರತದವರೇ ಆದ ಜೀವನ್‌ ನೆಡುಂಚೆಜಿಯನ್‌ ಅಮೆರಿಕದ ಆಸ್ಟಿನ್‌ ಕ್ರಾಜಿಸೆಕ್‌ ಜತೆಗೂಡಿ ಪೇಸ್‌-ಸೆರಾಟನಿ ಜೋಡಿ ವಿರುದ್ಧದ ಕ್ವಾರ್ಟರ್‌ ಫೈನಲ್‌ ಮುಖಾಮುಖೀಯನ್ನು 6-3, 7-6 (3) ಅಂತರದಿಂದ ಗೆದ್ದರು. ಕಳೆದ ಫೆಬ್ರವರಿಯಲ್ಲಿ ಡೇವಿಸ್‌ ಕಪ್‌ ವಿಶ್ವದಾಖಲೆ ನಿರ್ಮಿಸಿದ ಬಳಿಕ ಲಿಯಾಂಡರ್‌ ಪೇಸ್‌ ಆಡಿದ ಮೊದಲ ಪಂದ್ಯ ಇದಾಗಿತ್ತು. 

“ಜೈಂಟ್‌ ಕಿಲ್ಲರ್‌’ 
ಮೊದಲ ಸುತ್ತಿನಲ್ಲಿ ಜೀವನ್‌-ಕ್ರಾಜಿಸೆಕ್‌ ಅಗ್ರ ಶ್ರೇಯಾಂಕದ ನಿಕೋಲಾಸ್‌ ಮೊನ್ರೊ-ಜಾನ್‌ ಪ್ಯಾಟ್ರಿಕ್‌ ಸ್ಮಿತ್‌ ಅವರನ್ನು ಪರಾಭವಗೊಳಿಸಿ “ಜೈಂಟ್‌ ಕಿಲ್ಲರ್‌’ ಎನಿಸಿದ್ದರು. ಸೆಮಿಫೈನಲ್‌ನಲ್ಲಿ ಇಂಡೋ-ಅಮೆರಿಕನ್‌ ಜೋಡಿ 4ನೇ ಶ್ರೇಯಾಂಕದ ಮಾರ್ಸೆಲೊ ಅರೆವಲೊ (ಸ್ಪೇನ್‌)
ಮಿಗ್ಯುಯೆಲ್‌ ಆ್ಯಂಜೆಲ್‌ ರಿಯೆಸ್‌ ವರೆಲ (ಮೆಕ್ಸಿಕೊ) ವಿರುದ್ಧ ಸೆಣಸಲಿದೆ.

ದಿವಿಜ್‌ ಶರಣ್‌ ಮುನ್ನಡೆ
ಭಾರತದ ದಿವಿಜ್‌ ಶರಣ್‌-ಜಾಕ್ಸನ್‌ ವಿತ್ರೊ (ಅಮೆರಿಕ) ಕೂಡ ಡಬಲ್ಸ್‌ ನಲ್ಲಿ ಸೆಮಿಫೈನಲ್‌ ತಲುಪಿದ್ದಾರೆ. 2ನೇ ಶ್ರೇಯಾಂಕದ ಈ ಜೋಡಿ 7-6 (4), 6-3 ಅಂತರದಿಂದ ಆಸ್ಟ್ರೇಲಿಯದ ಮ್ಯಾಥ್ಯೂ ಎಬೆನ್‌-ಉಕ್ರೇನಿನ ಸೆರ್ಗಿ ಸ್ಟಾಕೋವ್‌ಸ್ಕಿ ಅವರನ್ನು ಹಿಮ್ಮೆಟ್ಟಿಸಿತು. ದಿವಿಜ್‌-ಜಾಕ್ಸನ್‌ ಇನ್ನು ನ್ಯೂಜಿಲ್ಯಾಂಡಿನ ಅರ್ಟೆಮ್‌ ಸಿಟಾಕ್‌-ಇಸ್ರೇಲಿನ ಜೊನಾಥನ್‌ ಎರ್ಲಿಚ್‌ ವಿರುದ್ಧ ಆಡಲಿದ್ದಾರೆ. ಸಿಟಾಕ್‌-ಎರ್ಲಿಚ್‌ ಭಾರತದ ಪುರವ್‌ ರಾಜ-ಬ್ರಿಟನ್ನಿನ ಕೆನ್‌ ಸುಪ್‌ಸ್ಕಿ ವಿರುದ್ಧ 4-6, 6-3, 10-8 ಅಂತರದ ಜಯ ಸಾಧಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next