ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿಕ್ಕಮಗಳೂರಿನ ಮುಜಾಮೀಲ್ ಷರೀಫ್, ಶಿವಮೊಗ್ಗದ ತೀರ್ಥಹಳ್ಳಿಯ ಅಬ್ದುಲ್ ಮತೀನ್ ತಾಹಾನ ಸೂಚನೆ ಮೇರೆಗೆ ಸಂಘಟನೆಯ ಇತರರ ಜತೆ ಸೇರಿಕೊಂಡು ರಾಜ್ಯದ ಕೆಲವೆಡೆ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ಎಂಬುದು ಆತನ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ನಗರದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮುಜಾಮೀಲ್ ಷರೀಫ್ಗೆ ಬೆಂಗಳೂರಿನ ಹಲವು ಪ್ರತಿಷ್ಠಿತ ಪ್ರದೇಶಗಳು, ಹೋಟೆಲ್ ಹಾಗೂ ಇತರೆ ಪ್ರಮುಖ ಸ್ಥಳಗಳ ಬಗ್ಗೆ ಹೆಚ್ಚು ಪರಿಚಯವಿತ್ತು. ಸದ್ಯ ತಲೆಮರೆಸಿಕೊಂಡಿರುವ ಶಂಕಿತ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ತಾಹಾ ಜತೆಗೂ ಚರ್ಚೆ ನಡೆಸುತ್ತಿದ್ದ. ಈ ಸಂದರ್ಭದಲ್ಲಿ ಯಾವೆಲ್ಲ ಸ್ಥಳದಲ್ಲಿ ಬಾಂಬ್ ಇರಿಸಬಹುದೆಂದು ಪರಸ್ಪರ ಮಾತನಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಆತನ ವಿಚಾರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೂಂದೆಡೆ ಮುಜಾಮೀಲ್ ಷರೀಫ್ನ ಕಾರ್ಯವೈಖರಿ ಕಂಡು ಐಸಿಸ್‌ನ ದಕ್ಷಿಣ ಭಾರತದ ಕಮಾಂಡೋಗಳು ಈತನನ್ನು ಸಂಪರ್ಕಿಸಿದ್ದರು ಎಂಬುದು ಆತನ ಬಳಿ ಜಪ್ತಿ ಮಾಡಿದ ಮೊಬೈಲ್‌ಗಳಲ್ಲಿ ಪತ್ತೆಯಾಗಿದೆ. ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಮಾಡಿದ ಆ್ಯಪ್‌ಗ್ಳ ಮೂಲಕ ಸಂವಹನ ಮಾಡುತ್ತಿದ್ದರು ಎಂಬುದು ಪತ್ತೆಯಾಗಿದೆ. ಆದರೆ, ಶಂಕಿತ ಈ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಇನ್ನು ಸುಧಾರಿತ ಸ್ಫೋಟಕ ಸಾಧನ ತಯಾರಿಸುವಲ್ಲಿ ಪರಿಣಿತರಾಗಿರುವ ಅಬ್ದುಲ್ ಮತೀನ್ ತಾಹಾ ಮತ್ತು ಮುಸಾವೀರ್ ಹುಸೇನ್ ಶಾಜೀಬ್, ಶಿವಮೊಗ್ಗ ಪ್ರಾಯೋಗಿಕ ಸ್ಫೋಟ ಮತ್ತು ರಾಮೇಶ್ವರಂ ಕೆಫೆ ಸ್ಫೋಟದ ಬಾಂಬ್‌ಗಳನ್ನು ಮುಜಾಮೀಲ್ ಷರೀಫ್ ಸಮ್ಮುಖದಲ್ಲೇ ಸಿದ್ಧಪಡಿಸಿದ್ದರು. ಇನ್ನು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಬಾಂಬ್ ಅನ್ನು ಮುಜಾಮೀಲ್ ಷರೀಫ್ ಸಮ್ಮುಖದಲ್ಲಿ ಮೊಹಮ್ಮದ್ ಶಾರೀಕ್ ತಯಾರಿಸಿದ್ದ ಎಂಬುದು ಗೊತ್ತಾಗಿದೆ. ಏಕೆಂದರೆ, ಈ ಮೂರು ಸ್ಫೋಟದಲ್ಲಿ ಪತ್ತೆಯಾದ ಅವಶೇಷಗಳಿಗೆ ಪರಸ್ಪರ ಸಾಮ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಶಂಕಿತ, ಒಂದೆರಡು ಬಾರಿ ಅಬ್ದುಲ್ ಮತೀನ್ ತಾಹಾನ ಭೇಟಿಯಾಗಿದ್ದೆ ಹೊರತು ಹೆಚ್ಚು ಬಾರಿ ಭೇಟಿ ಆಗಿಲ್ಲ ಎಂದು ಹೇಳುತ್ತಿದ್ದಾನೆ. ಆದರೆ, ಈತ ಹತ್ತಾರು ಬಾರಿ ಅಬ್ದುಲ್ ಮತೀನ್ ಮತ್ತು ಮುಸಾವೀರ್ ಹುಸೇನ್ ಶಾಜೀಬ್ ಭೇಟಿಯಾಗಿರುವ ಮಾಹಿತಿಗೆ ಪೂರಕ ಸಾಕ್ಷ್ಯಗಳು ಪತ್ತೆಯಾಗಿವೆ. ಹೀಗಾಗಿ ಶಂಕಿತನ ಮನೆ ಹಾಗೂ ತಲೆಮರೆಸಿಕೊಂಡಿರುವ ವ್ಯಕ್ತಿಗಳು ಭೇಟಿಯಾದ ಸ್ಥಳಕ್ಕೆ ಕರೆದೊಯ್ದು ಮಹಜರು ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.