Advertisement

Bangalore: ಶಿವಮೊಗ್ಗ,ಮಂಗಳೂರು ಸ್ಫೋಟದಲ್ಲೂ ಮುಜಾಮಿಲ್‌ ಕೈವಾಡ

11:39 PM Mar 30, 2024 | Team Udayavani |

ಬೆಂಗಳೂರು: ಬೆಂಗಳೂರಿನ ಕುಂದಲಹಳ್ಳಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದ ಬಾಂಬರ್‌ ಮುಸಾವೀರ್‌ ಹುಸೇನ್‌ ಶಾಜೀಬ್‌ಗ ಸಹಕಾರ ನೀಡಿದ ಆರೋಪದಲ್ಲಿ ಬಂಧನ ಕ್ಕೊಳಗಾಗಿರುವ ಚಿಕ್ಕಮಗಳೂರಿನ ಮುಜಾಮೀಲ್‌ ಷರೀಫ್ ಶಿವಮೊಗ್ಗದ ಟ್ರಯಲ್‌ ಸ್ಫೋಟ ಹಾಗೂ ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಫೋಟದ ಬಾಂಬರ್‌ಗಳಿಗೂ ಸ್ಫೋಟದ ಕಚ್ಚಾ ವಸ್ತುಗಳು ಹಾಗೂ ಸಿಮ್‌ಕಾರ್ಡ್‌ಗಳ ಪೂರೈಕೆ ಮಾಡಿದ್ದಾನೆಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶಂಕಿತನ ವಿಚಾರಣೆಯನ್ನು ತೀವ್ರಗೊಳಿಸ ಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಪ್ರಕರಣದ ಬಾಂಬರ್‌ ಮುಸಾವೀರ್‌ ಹುಸೇನ್‌ ಶಾಜೀಬ್‌ ಮತ್ತು ಆತನ ಹ್ಯಾಂಡ್ಲರ್‌ ಅಬ್ದುಲ್‌ ಮತೀನ್‌ ತಾಹಾ 2020ರಿಂದ ತಲೆಮರೆಸಿಕೊಂಡಿದ್ದಾರೆ. ಇಬ್ಬರೂ ತಮಿಳು ನಾಡಿನಲ್ಲಿ ತಲೆಮರೆಸಿಕೊಂಡಿದ್ದರು. ಅಲ್ಲಿಂದಲೇ ಅಬ್ದುಲ್‌ ಮತೀನ್‌ ತಾಹಾ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಮುದಾಯದ ಯುವಕರನ್ನು ಉಗ್ರ ಸಂಘಟನೆ ಕಡೆ ಪ್ರಚೋದಿಸುವ ಕಾರ್ಯ ಮಾಡುತ್ತಿದ್ದ. ಅದಕ್ಕಾಗಿ ಇತ್ತೀಚೆಗಷ್ಟೇ ನಿಷೇಧಿಸಲ್ಪಟ್ಟ ಸಂಘಟನೆಯೊಂದರ ಕಾರ್ಯಕರ್ತರನ್ನು ಬಳಸಿಕೊಂಡಿದ್ದ ಎನ್ನಲಾಗಿದೆ.

ಈ ವೇಳೆ ಚಿಕ್ಕಮಗಳೂರಿನ ಸ್ಥಳೀಯ ಮುಖಂಡರೊಬ್ಬರ ಮೂಲಕ 2021ರಲ್ಲಿ ಮುಜಾಮೀಲ್‌ ಷರೀಫ್ನನ್ನು ಪರಿಚಯಿ ಸಿಕೊಂಡಿದ್ದ ಮತೀನ್‌, ಆತನ ಸಂಪೂರ್ಣ ಹಿನ್ನೆಲೆ ತಿಳಿದುಕೊಂಡಿದ್ದ. ಬಳಿಕ ಸಾಕಷ್ಟು ಬಾರಿ ಮತೀನ್‌ ತಾಹಾ, ಷರೀಫ್ ಜತೆ ಮಾತಾಡಿ ಸಂಘಟನೆ ಪರ ಕೆಲಸ ಮಾಡಬೇಕು. ಇದು ಧರ್ಮ ಉಳಿಸುವ ಕಾರ್ಯ ಎಂದೆಲ್ಲ ಆತನಿಗೆ ಪ್ರಚೋದನೆ ನೀಡಿ ಸಂಘಟನೆ ಪರ ಕೆಲಸಕ್ಕೆ ಒಪ್ಪಿಸಿದ್ದ. ಅದಕ್ಕಾಗಿ ಆರ್ಥಿಕ ನೆರವು ನೀಡಲಾಗಿತ್ತು. ಹೀಗಾಗಿ ಮುಜಾಮೀಲ್‌ ಷರೀಫ್, ಐಸಿಸ್‌ ಸಂಘಟನೆ ಪರವಾಗಿ  ಸಹಾನುಭೂತಿ  ಉಳ್ಳವನಾಗಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಆ್ಯಪ್‌ಗಳ ಮೂಲಕ ಸಂಪರ್ಕ:

ಮತ್ತೂಂದೆಡೆ ಅಬ್ದುಲ್‌ ಮತೀನ್‌ ತಾಹಾ ಎನ್‌ಕ್ರಿಪ್ಟ್ ಕಮ್ಯೂನಿಕೇಷನ್‌ ಆ್ಯಪ್‌ಗಳ ಮೂಲಕ ದಕ್ಷಿಣ ಭಾರತದ ಸಹಾನುಭೂತಿ

Advertisement

ಗಳನ್ನು ಸಂಪರ್ಕಿಸುತ್ತಿದ್ದ. ಅದೇ ರೀತಿ ಷರೀಫ್ನನ್ನು ಸಂಪರ್ಕಿಸಿದ್ದಾನೆ ಎಂಬುದು ಆತನ ಮನೆ ಶೋಧಿಸಿದಾಗ ಜಪ್ತಿ ಮಾಡಿದ ಎರಡು ಮೊಬೈಲ್‌ಗ‌ಳಿಂದ ಬೆಳಕಿಗೆ ಬಂದಿದೆ. ಅದರಲ್ಲಿದ್ದ ಕೆಲವು ಎನ್‌ಕ್ರಿಪ್ಟ್ ಆ್ಯಪ್‌ಗ್ಳಲ್ಲಿ ಗ್ರೂಪ್‌ಗ್ಳನ್ನು ರಚಿಸಿಕೊಂಡಿರುವ ಶಂಕಿತರು, ಪಿನ್‌ಕೋಡ್‌ಗಳ ಮೂಲಕ ವ್ಯವಹರಿಸುತ್ತಿದ್ದರು.

ಈ ಆ್ಯಪ್‌ ಮೂಲಕವೇ ಮತೀನ್‌, 2022ರಲ್ಲಿ ಷರೀಫ್ ಅನ್ನು ಸಂಪರ್ಕಿಸಿ ಸದ್ಯದಲ್ಲೇ ಎರಡು ಪ್ರಮುಖ ಕಾರ್ಯ (ಮಂಗಳೂರು ಕದ್ರಿ ದೇವಾಲಯ, ಶಿವಮೊಗ್ಗ ಪ್ರಮುಖ ಸ್ಥಳದಲ್ಲಿ ಸ್ಫೋಟ)ಗಳಿವೆ. ಅದಕ್ಕಾಗಿ ನೀನು ಕೆಲಸ ಮಾಡಬೇಕು.  ನಮ್ಮ ಯೋಧರಿಗೆ ಸಹಕಾರ ನೀಡಬೇಕು ಎಂದು ಸೂಚಿಸಿದ್ದ. ಈ ಹಿನ್ನೆಲೆಯಲ್ಲಿ 2022ರ ಆ.26ರಲ್ಲಿ ನಡೆದ ಶಿವಮೊಗ್ಗ ಪ್ರಾಯೋಗಿಕ ಸ್ಫೋಟ ಪ್ರಕರಣದ ಆರೋಪಿಗಳಾದ ಮಾಜ್‌ ಮುನೀರ್‌ ಮತ್ತು ಮೊಹಮ್ಮದ್‌ ಶಾರೀಕ್‌ ಹಾಗೂ ಇತರಿಗೆ ನಕಲಿ ಆಧಾರ್‌ ಕಾರ್ಡ್‌ ನೀಡಿ ಸ್ನೇಹಿತರ ಅಂಗಡಿಯಿಂದ ಸಿಮ್‌ ಕಾರ್ಡ್‌ಗಳನ್ನು ಷರೀಫ್ ಕೊಡಿಸಿದ್ದ  ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದಲ್ಲಿ ಮಾಜ್‌ ಮುನೀರ್‌ ಹಾಗೂ ಇತರರನ್ನು ಬಂಧಿಸಲಾಗಿತ್ತು.  ತಲೆಮರೆಸಿಕೊಂಡಿದ್ದ ಪ್ರಕರಣದ ಮೊದಲ ಆರೋಪಿ ಮೊಹಮ್ಮದ್‌ ಶಾರೀಕ್‌,  ಕದ್ರಿ ದೇವಾಲಯದಲ್ಲಿ ಐಇಡಿ ಸ್ಫೋಟಿಸಲು ಸಂಚು ರೂಪಿಸಿದ್ದ. ಆದರೆ 2022ರ ನ.19ರಂದು ಮಾರ್ಗ ಮಧ್ಯೆಯೇ ಬಾಂಬ್‌ ಸ್ಫೋಟಗೊಂಡು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.

ಚಿಕ್ಕಮಗಳೂರಿನಲ್ಲಿ ತಲೆಮರೆಸಿಕೊಳ್ಳಲು ಸಹಕಾರ :

ಮುಜಾಮೀಲ್‌ ಷರೀಫ್ ಶಿವಮೊಗ್ಗ ಟ್ರಯಲ್‌ ಸ್ಫೋಟ ಮತ್ತು ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಅಬ್ದುಲ್‌ ಮತೀನ್‌ ತಾಹಾನ ಸೂಚನೆ ಮೇರೆಗೆ ಸ್ಫೋಟದ ಕಚ್ಚಾ ವಸ್ತುಗಳನ್ನು ಬಾಂಬರ್‌ಗಳಿಗೆ ಪೂರೈಸಿದ್ದ ಎಂದು ಹೇಳಲಾಗಿದ್ದು, ಆತನ ತೀವ್ರ ವಿಚಾರಣೆ ನಡೆಯುತ್ತಿದೆ. ಶಿವಮೊಗ್ಗದಿಂದ ತಪ್ಪಿಸಿಕೊಂಡಿದ್ದ ಮೊಹಮ್ಮದ್‌ ಶಾರೀಕ್‌ ಚಿಕ್ಕಮಗಳೂರಿನಲ್ಲಿ ಕೆಲವು ದಿನಗಳ ಕಾಲ ತಲೆಮರೆಸಿಕೊಳ್ಳಲು ಮುಜಾಮೀಲ್‌ ಷರೀಫ್ ಸಹಾಯ ಮಾಡಿದ್ದ.  ಬಳಿಕ ಶಾರೀಕ್‌ ಮಂಗಳೂರಿಗೆ ತೆರಳಿ, ಐಇಡಿ ತಯಾರಿಸಿಕೊಂಡು ಆಟೋದಲ್ಲಿ ಕೊಂಡೊಯ್ಯುವಾಗ ಸ್ಫೋಟಗೊಂಡಿತ್ತು. ಆದರೆ ಈ ಎರಡು ಪ್ರಕರಣದಲ್ಲಿ ಮುಜಾಮೀಲ್‌ ಷರೀಫ್ ಹೆಸರು ಕೇಳಿ ಬಂದಿರಲಿಲ್ಲ. ಹೀಗಾಗಿ ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು ಮತ್ತು ಮಂಗಳೂರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಇದ್ದಾರೆ ಎನ್ನಲಾದ ಸಹಾನೂಭೂತಿಗಳ ಮೇಲೆ ಕೇಂದ್ರ, ರಾಜ್ಯದ ತನಿಖಾ ಸಂಸ್ಥೆಗಳು ಹೆಚ್ಚು ನಿಗಾವಹಿಸಿವೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಬಾಂಬರ್‌ಗೂ 2 ಸಿಮ್‌ಕಾರ್ಡ್‌ :

ಇನ್ನು ರಾಮೇಶ್ವರಂ ಕೆಫೆ ಸ್ಫೋಟದ ಬಾಂಬರ್‌ ಮುಸಾವೀರ್‌ ಹುಸೇನ್‌ ಶಾಜೀಬ್‌ಗ ಮುಜಾಮೀಲ್‌ ಷರೀಫ್ ಹಿಂದು ಹೆಸರಿನ ನಕಲಿ ಆಧಾರ್‌ ಕಾರ್ಡ್‌ ನೀಡಿ 2 ಸಿಮ್‌ ಕಾರ್ಡ್‌ಗಳನ್ನು ಕೊಡಿಸಿದ್ದ ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next