ಹೊಸದಿಲ್ಲಿ : ರಾಮೇಶ್ವರಂ ಕಫೆ ಸ್ಫೋಟ ಪ್ರಕರಣದ ತನಿಖೆಯ ಪ್ರಮುಖ ಪ್ರಗತಿಯಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಮೂರು ರಾಜ್ಯಗಳ ಅನೇಕ ಸ್ಥಳಗಳಲ್ಲಿ ಭಾರಿ ದಾಳಿ ನಡೆಸಿದ ನಂತರ ಪ್ರಮುಖ ಸಂಚುಕೋರನನ್ನು ಬಂಧಿಸಿದೆ.
ಮುಝಮ್ಮಿಲ್ ಶರೀಫ್ ಎಂಬಾತನನ್ನು ಸಹ ಸಂಚುಕೋರ ಎಂದು ಬಂಧಿಸಲಾಗಿದ್ದು, ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶ ಸೇರಿದಂತೆ 18 ಸ್ಥಳಗಳಲ್ಲಿ ಎನ್‌ಐಎ ತಂಡಗಳು ಕಾರ್ಯಾಚರಣೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ.
ಮಾರ್ಚ್ 3 ರಂದು ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಎನ್‌ಐಎ, ಸ್ಫೋಟವನ್ನು ನಡೆಸಿದ ಪ್ರಮುಖ ಆರೋಪಿ ಮುಸ್ಸಾವಿರ್ ಶಜೀಬ್ ಹುಸೇನ್‌ನನ್ನು ಮೊದಲು ಗುರುತಿಸಿತ್ತು. ಇತರ ಪ್ರಕರಣಗಳಲ್ಲಿ ಬೇಕಾಗಿರುವ ಮತ್ತೊಬ್ಬ ಸಂಚುಕೋರ ಅಬ್ದುಲ್ ಮಥೀನ್ ತಾಹಾ ಎಂಬಾತನನ್ನೂ ಅದು ಗುರುತಿಸಿದ್ದು ಇಬ್ಬರೂ ಪರಾರಿಯಾಗಿದ್ದಾರೆ.
ಮಾರ್ಚ್ 1 ರಂದು ಐಟಿಪಿಎಲ್ ರಸ್ತೆಯಲ್ಲಿರುವ ಕಫೆಯಲ್ಲಿ ಐಇಡಿ ಸ್ಫೋಟ ಪ್ರಕರಣದಲ್ಲಿ ಗುರುತಿಸಲಾದ ಇತರ ಇಬ್ಬರು ಆರೋಪಿಗಳಿಗೆ ಮುಝಮ್ಮಿಲ್ ಶರೀಫ್ ಬೆಂಬಲವನ್ನು ನೀಡಿದ್ದ ಎಂದು ಎನ್‌ಐಎ ತನಿಖೆ ಬಹಿರಂಗಪಡಿಸಿದೆ.
ಮೂವರು ಆರೋಪಿಗಳ ಮನೆಗಳು ಹಾಗೂ ಇತರ ಶಂಕಿತರ ಮನೆಗಳು ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಿ ತಪಾಸಣೆಯ ವೇಳೆ ನಗದು ಸಹಿತ ವಿವಿಧ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಮತ್ತು ಸ್ಫೋಟದ ಹಿಂದಿನ ದೊಡ್ಡ ಪಿತೂರಿಯನ್ನು ಬಯಲಿಗೆಳೆಯುವ ಪ್ರಯತ್ನಗಳು ಮುಂದುವರೆದಿವೆ ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ.