ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಹಾಗೂ ಇತರೆ ತನಿಖಾ ಸಂಸ್ಥೆಗಳು ಶಂಕಿತನ ಪತ್ತೆಗಾಗಿ ನೆರೆ ರಾಜ್ಯಗಳಿಗೆ ತನಿಖಾ ತಂಡ ತೆರಳಿದ್ದು, ಅಲ್ಲಿ ಈ ಹಿಂದೆ ನಡೆದ ಸ್ಫೋಟ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇನ್ನು ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳಿಗೆ ತನಿಖಾ ತಂಡಗಳು ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಮಾಡುತ್ತಿವೆ. ಈ ಹಿಂದೆ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ತಮಿಳುನಾಡಿನ ಕೊಯ ಮತ್ತೂರಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ಗಳಿಗೂ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಕೆಲವು ಸಾಮ್ಯತೆಗಳಿವೆ ಎಂದು ಹೇಳಲಾಗಿದೆ. ಹೀಗಾಗಿ ನೆರೆ ರಾಜ್ಯಗಳಿಗೆ ತೆರಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶೀಘ್ರದಲ್ಲೇ ರೇಖಾಚಿತ್ರ ಬಿಡುಗಡೆ: ರಾಮೇಶ್ವರಂ ಕೆಫೆಯ ಸಿಸಿ ಕ್ಯಾಮೆರಾ ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸೆರೆಯಾಗಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ನುರಿತ ವ್ಯಕ್ತಿಗಳಿಂದ ರೇಖಾ ಚಿತ್ರ ಬಿಡಿಸಲು ಸಿದ್ಧತೆ ನಡೆಸಲಾಗಿದೆ.
ಶಂಕಿತ ಗಡ್ಡಧಾರಿಯಾಗಿದ್ದರೆ, ಗಡ್ಡ ಇಲ್ಲದಿದ್ದರೆ, ಮೀಸೆ ಇದ್ದರೆ, ಮೀಸೆ ಇಲ್ಲದಿದ್ದರೆ, ತಲೆಯಲ್ಲಿ ಕೂದಲು ಇದ್ದರೆ, ಬೋಳು ತಲೆಯಾಗಿದ್ದರೆ, ಕನ್ನಡಕ ಧರಿಸಿದರೆ, ಧರಿಸದಿದ್ದರೆ ಹೇಗೆ ಕಾಣಬಹುದು ಎಂಬುದನ್ನು ರೇಖಾಚಿತ್ರದಲ್ಲಿ ಮೂಡಿಸಲಾಗುತ್ತದೆ. ಈ ರೇಖಾಚಿತ್ರ ಬಳಸಿಕೊಂಡು ಶಂಕಿತನ ಪತ್ತೆ ಕಾರ್ಯ ನಡೆಯಲಿದೆ. ಈ ಹಿಂದೆಯೂ ಎರಡ್ಮೂರು ಪ್ರಕರಣಗಳಲ್ಲಿ ರೇಖಾ ಚಿತ್ರದ ಸಹಾಯದಿಂದಲೇ ಆರೋಪಿಗಳ ಮುಖ ಚಹರೆ ಪತ್ತೆ ಹಚ್ಚಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ನೆರೆ ರಾಜ್ಯಕ್ಕೆ ಪರಾರಿಯಾದನಾ ಶಂಕಿತ?: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಘಟನೆ ಬಳಿಕ ರಾಜ್ಯಕ್ಕೆ ಪರಾರಿಯಾಗಿರುವ ಸಾಧ್ಯತೆಯಿದೆ. ಶುಕ್ರವಾರ ಮಧ್ಯಾಹ್ನ 12.56ಕ್ಕೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಕ್ಕೂ ಮುನ್ನ ಶಂಕಿತ ವ್ಯಕ್ತಿ ರಾಜ್ಯದ ಗಡಿದಾಡಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ 11.40ಕ್ಕೆ ಕೆಫೆಗೆ ಭೇಟಿ ನೀಡಿರುವ ಶಂಕಿತ, ಹಲವು ಬಾರಿ ವಾಚ್‌ನಲ್ಲಿ ಸಮಯ ನೋಡಿಕೊಂಡು ರವೆ ಇಡ್ಲಿ ತಿಂದು, ಕೈತೊಳೆಯುವ ಸ್ಥಳದಲ್ಲಿ ಬ್ಯಾಗ್ ಇಟ್ಟು ಹೋಟೆಲ್ ನಿಂದ ತೆರಳಿದ್ದಾನೆ. ಬಳಿಕ ಮಧ್ಯಾಹ್ನ 12.56ಕ್ಕೆ ಆ ಸ್ಫೋಟಕವಿದ್ದ ಬ್ಯಾಗ್ ಸ್ಫೋಟಗೊಂಡಿದೆ. ಈ ಸಮಯದ ಅಂತರದಲ್ಲಿ ಆರೋಪಿ ನೆರೆ ರಾಜ್ಯಕ್ಕೆ ಪರಾರಿಯಾಗಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸಿಸಿಬಿಯಿಂದ ಸ್ಥಳ ಪರಿಶೀಲನೆ : ಸಿಸಿಬಿ ತನಿಖಾಧಿಕಾರಿ ಎಸಿಪಿ ನವೀನ್ ಕುಲಕರ್ಣಿ ನೇತೃತ್ವದ ತಂಡ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಬಾಂಬ್ ಸ್ಫೋಟದ ಸ್ಥಳವನ್ನು ಪರಿಶೀಲಿಸಿದೆ. ಹೋಟೆಲ್‌ನ ಸಿಬ್ಬಂದಿ ಹಾಗೂ ಕೆಲ ಸ್ಥಳೀಯರಿಂದ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಶಂಕಿತ ಓಡಾಡಿದ ಸ್ಥಳಗಳಿಗೂ ತೆರಳಿ ಪರಿಶೀಲಿಸಿದ್ದಾರೆ.