ಹುಬ್ಬಳ್ಳಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶಕುಮಾರ ಅವರು ಗುರುವಾರ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರ ನಿವಾಸಕ್ಕೆ ಭೇಟಿಕೊಟ್ಟು ಆರೋಗ್ಯ ವಿಚಾರಿಸಿದರಲ್ಲದೆ, ಅವರ ನಿವಾಸದಲ್ಲೇ ಜೋಳದ ರೊಟ್ಟಿ ಮತ್ತು ಪಲ್ಯ ಸವಿದರು.
ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಚಿವರು ಮಧ್ಯಾಹ್ನ 2:30ರ ಸುಮಾರಿಗೆ ಪಾಪು ಅವರ ಮನೆಗೆ ಬಂದಿದ್ದರು. ಊಟದ ಸಮಯವೂ ಆಗಿತ್ತು. ಸಚಿವರೊಂದಿಗೆ ಬಂದಿದ್ದ ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ, ಮಾಜಿ ಸಂಸದ ಪ್ರೊ| ಐ.ಜಿ. ಸನದಿ ಹಾಗೂ ಪಾಪು ಅವರ ಪುತ್ರ ಅಶೋಕ ಪಾಟೀಲ ಅವರು ಭೋಜನ ಸೇವಿಸುವಂತೆ ಆಹ್ವಾನಿಸಿದರು.
ನಂತರ ಡಾ| ಪಾಪು ಅವರ ಜೊತೆಯಲ್ಲಿಯೇ ಭೋಜನ ಮಾಡಿದರು. ಬಿಸಿ ಜೋಳದ ರೊಟ್ಟಿ, ಮಡಿಕೆ ಕಾಳು-ಹೆಸರು ಕಾಳು ಪಲ್ಯ, ಶೇಂಗಾಚಟ್ನಿ, ಮೊಸರು, ಕರ್ಚಿಕಾಯಿ, ಅನ್ನ, ಸಾರು ಸೇವಿಸಿದರು.
ಅಖಂಡ ಕರ್ನಾಟಕ ಪರಿಕಲ್ಪನೆ ಬರೋದ್ಯಾವಾಗ: ರಮೇಶಕುಮಾರ ಅವರೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ ಡಾ| ಪಾಟೀಲ ಪುಟ್ಟಪ್ಪ, ತಾವೊಬ್ಬ ಸಮರ್ಥ ಸಚಿವರಾಗಿದ್ದೀರಿ. ಆದರೆ, ಸರಕಾರ ತಮ್ಮ ಅನುಭವವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದರು.
ಅಲ್ಲದೆ, ಬೆಂಗಳೂರು, ಮೈಸೂರು ಭಾಗದವರು ಅಖಂಡ ಕರ್ನಾಟಕ ಆಗಿದೆ ಎಂಬುದು ಯಾವಾಗ ತಿಳಿದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಇಟ್ ಇಸ್ ವೆರಿ ಡಿಫಿಕಲ್ಟ್ ಎಂದಷ್ಟೆ ಉತ್ತರಿಸಿದ ಸಚಿವರು, ರಾಜಕೀಯ ಜೀವನದಲ್ಲಿ ಅನೇಕ ಸತ್ಯದ ಹಾಗೂ ಕಟೋರದ ಕಂದಕಗಳನ್ನು ನೋಡಿದ್ದೇನೆ ಎಂದರು.