ಹಾಯ್ ರಮೇಶ್… ಹಾಯ್ ಸುರೇಶ್… ಬಹುಶಃ ಮೇಲಿನ ಈ ಡೈಲಾಗ್ ಕೇಳಿರದವರಿಲ್ಲ ಬಿಡಿ. ಯಾಕೆಂದರೆ, ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯಗೊಂಡ ಹೆಸರುಗಳಿವು. ಚಾಕಲೇಟ್ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಇಬ್ಬರು ಅವಳಿ-ಜವಳಿ ಸಹೋದರರ ಹೆಸರಿದು. ಈಗಲೂ ಹಾಯ್ ರಮೇಶ್, ಹಾಯ್ ಸುರೇಶ್ ಎಂಬ ಡೈಲಾಗ್ ಸದ್ದು ಮಾಡುತ್ತಲೇ ಇದೆ. ಇಷ್ಟಕ್ಕೂ ಇಲ್ಲೀಗ ಹೇಳಹೊರಟಿರುವ ವಿಷಯ ಕೂಡ “ರಮೇಶ್ ಸುರೇಶ್’ ಅವರದ್ದೇ.
ಹೌದು, ಕನ್ನಡದಲ್ಲಿ ಈ ಹೆಸರಿನ ಚಿತ್ರವೊಂದು ಇತ್ತೀಚೆಗೆ ಸೆಟ್ಟೇರಿದೆ. ಬಹುತೇಕ ಹೊಸಬರೇ ಸೇರಿ ಮಾಡುತ್ತಿರುವ ಈ ಚಿತ್ರದ ಮೂಲಕ ಗುಬ್ಬಿ ವೀರಣ್ಣ ಅವರ ಮರಿ ಮೊಮ್ಮಗ ಬೆನಕ ಗುಬ್ಬಿ ವೀರಣ್ಣ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ಗುಬ್ಬಿವೀರಣ್ಣ ಅವರ ಪುತ್ರ ಚನ್ನಬಸಪ್ಪರ ಪುತ್ರ ಸದಾಶಿವ ಅವರ ಮಗ ಬೆನಕ “ರಮೇಶ್ ಸುರೇಶ್’ ಚಿತ್ರದ ಇಬ್ಬರು ನಾಯಕರಲ್ಲಿ ಒಬ್ಬರು. ಈ ಚಿತ್ರದಲ್ಲಿ ಮತ್ತೂಬ್ಬ ಹೀರೋ ಯಶುರಾಜ್ ಕೂಡ ನಟಿಸುತ್ತಿದ್ದಾರೆ.
“ರಮೇಶ್ ಸುರೇಶ್’ ಚಿತ್ರದಲ್ಲಿ ವಿಶೇಷತೆ ಇದೆ. ಇಬ್ಬರು ನಿರ್ದೇಶಕರು, ಇಬ್ಬರು ಹೀರೋಗಳು, ಇಬ್ಬರು ನಿರ್ಮಾಪಕರು. ಹೌದು, ಈ ಚಿತ್ರವನ್ನು ನಾಗರಾಜ್ ಮತ್ತು ರಘುರಾಜ್ ಗೌಡ ನಿರ್ದೇಶಿಸಿದರೆ, ಕೃಷ್ಣ ಹಾಗು ಶಂಕರ್ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಉಳಿದಂತೆ ಹೊಸ ಪ್ರತಿಭೆಗಳೇ ಚಿತ್ರದಲ್ಲಿವೆ. “ಚಿತ್ರದ ಶೀರ್ಷಿಕೆ ಹೇಳುವಂತೆ, ಇದೊಂದು ಪಕ್ಕಾ ಹಾಸ್ಯಮಯ ಸಿನಿಮಾ. ಎರಡು ಎಡಬಿಡಂಗಿ ಪಾತ್ರಗಳ ಸುತ್ತ ಕಥೆ ತಿರುಗಲಿದೆ.
ಹಾಸ್ಯದ ಮೂಲಕವೇ ಒಂದು ಗಂಭೀರತೆಗೆ ಕರೆದುಕೊಂಡು ಹೋಗುವ ಚಿತ್ರದಲ್ಲಿ ನಿಗೂಢತೆ ಕೂಡ ಇದೆ. ಅದೇನು ಅನ್ನೋದು ವಿಶೇಷ. ಇಲ್ಲಿ ಕಿಶೋರ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ “ಕತ್ತಲೆ ಗುಡ್ಡದ ಗೂಢಾಚಾರಿಗಳು’ ಎಂಬ ಅಡಿಬರಹವಿದೆ. ಆ ಗೂಢಾಚಾರಿಗಳು ಯಾರು ಅನ್ನೋದೇ ಸಸ್ಪೆನ್ಸ್’ ಎಂಬುದು ನಿರ್ದೇಶಕ ನಾಗರಾಜ್ ಮಲ್ಲಿಗೇನಹಳ್ಳಿ ಅವರ ಮಾತು. ನಾಯಕ ಬೆನಕ ಗುಬ್ಬಿವೀರಣ್ಣ ಅವರಿಗೆ ಇದು ಮೊದಲ ಚಿತ್ರವಂತೆ.
“ಇದೊಂದು ಕಾಮಿಡಿ ಚಿತ್ರ. ಚಿತ್ರದಲ್ಲಿ ಸೋಮಾರಿ ಹುಡುಗನಾಗಿ, ಕೆಲಸವಿಲ್ಲದ ಅಲೆಮಾರಿ ಪಡ್ಡೆಯಾಗಿ ಕಾಣಿಸಿಕೊಂಡಿದ್ದೇನೆ. ಇಲ್ಲಿ ಕಥೆಯೇ ಹೀರೋ. ಹಾಸ್ಯದ ಜೊತೆಗೆ ಫೀಲಿಂಗ್ಸ್ ಕೂಡ ಇದೆ’ ಎನ್ನುತ್ತಾರೆ ಬೆನಕ. ಯಶು ರಾಜ್ ಅವರಿಗೂ ಇದು ಮೊದಲ ಅನುಭವ. “ಇಂತಹ ಚಿತ್ರದಲ್ಲಿ ಕೆಲಸ ಮಾಡುತ್ತಿರುವುದು ಅದೃಷ್ಟ. ರಮೇಶ್, ಸುರೇಶ್ ಇಬ್ಬರು ಸಹೋದರರ ಕಥೆ ಇಲ್ಲಿದೆ. ಲೈಫಲ್ಲಿ ಆಗುವಂತಹ ಬದಲಾವಣೆಗಳು ಅವರನ್ನು ಹೇಗೆಲ್ಲಾ ಆಡಿಸುತ್ತದೆ ಎಂಬುದು ಕಥೆ’ ಎಂಬುದು ಯಶುರಾಜ್ ಮಾತು.
ನಾಯಕಿ ಚಂದನಗೆ ಇದು ಮೊದಲ ಕನ್ನಡ ಚಿತ್ರ. ಕಿರುತೆರೆಯಲ್ಲಿದ್ದ ಅವರಿಗೆ “ರಮೇಶ್ ಸುರೇಶ್’ ವಿಭಿನ್ನ ಚಿತ್ರವಂತೆ. ಅವರಿಗೆ ಇಲ್ಲಿ ಮೆಚ್ಯೂರ್ಡ್ ಪಾತ್ರವಿದೆಯಂತೆ. ಅವರ ಲೈಫಲ್ಲಿ ರಮೇಶ್, ಸುರೇಶ್ ಎಂಟ್ರಿಯಾದಾಗ, ಏನೇನು ಆಗುತ್ತೆ ಎಂಬುದು ಕಥೆ’ ಎನ್ನುತ್ತಾರೆ ಚಂದನ. ನಿರ್ಮಾಪಕ ಕೃಷ್ಣ ಅವರಿಗೆ ಇದು ಮೊದಲ ಚಿತ್ರ. “ಒಳ್ಳೆಯ ಸಿನಿಮಾ ಮಾಡುವ ಉದ್ದೇಶದಿಂದ ಉತ್ತಮ ಕಥೆ ಆಯ್ಕೆ ಮಾಡಿಕೊಂಡು ಹೊಸಬರಿಗೆ ಅವಕಾಶ ಕೊಟ್ಟಿದ್ದೇವೆ.
ಇಲ್ಲಿ ಹಾಸ್ಯ ಹೈಲೈಟ್. ಜೊತೆಗೊಂದು ತಿರುವು ಇದೆ. ಅದೇ ಸಿನಿಮಾದ ಜೀವಾಳ. ನಮ್ಮ ನಿರ್ಮಾಣ ಸಂಸ್ಥೆಯಿಂದ ವರ್ಷಕ್ಕೆ ಒಂದು, ಎರಡು ಸಿನಿಮಾ ಕೊಡುವ ಉದ್ದೇಶವಿದೆ. “ರಮೇಶ್ ಸುರೇಶ್’ ಚಿತ್ರದಲ್ಲಿ ಶೇ.80 ರಷ್ಟು ಮನರಂಜನೆ ಗ್ಯಾರಂಟಿ. ಉಳಿದ ಶೇ.20 ರಷ್ಟು ಎಮೋಷನ್ಸ್, ಲವ್ ಇತ್ಯಾದಿ ಸಿಗಲಿದೆ’ ಎನ್ನುತ್ತಾರೆ ಅವರು. ನಿರ್ಮಾಪಕ ಬಿ.ಶಂಕರ್, ಸಂಭಾಷಣೆಗಾರ ಪ್ರಮೋದ್ ,ರಂಗಭೂಮಿ ಕಲಾವಿದೆ ನವನೀತ್ ಜೈನ್, ರೋಬೋ ಗಣೇಶ್, ಸಂಗೀತ ನಿರ್ದೇಶಕ ವನಿತಾ ಜೈನ್ ಮಾತನಾಡಿದರು.