ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದ 17 ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಅನರ್ಹಗೊಳಿಸಿ ಐತಿಹಾಸಿಕ ತೀರ್ಪು ನೀಡಿದ್ದ ರಮೇಶ್‌ಕುಮಾರ್ ಸೋಮವಾರ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ಮತ ಯಾಚನೆ ಹಾಗೂ ಧನ ವಿನಿಯೋಗ ವಿಧೇಯಕ ಅಂಗೀಕಾರಗೊಂಡ ನಂತರ ರಮೇಶ್ ಕುಮಾರ್, 14 ತಿಂಗಳು 4 ದಿನಗಳ ತಮ್ಮ ಸಭಾಧ್ಯಕ್ಷ ಹುದ್ದೆಗೆ ರಾಜೀನಾಮೆಯನ್ನು ಪ್ರಕಟಿಸಿ ಉಪಸಭಾಧ್ಯಕ್ಷ ಕೃಷ್ಣಾ ರೆಡ್ಡಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.
ಸ್ಪೀಕರ್ ಆಗಿ ಕೊನೆಯ ದಿನ ಸದನದಲ್ಲಿ ವಿದಾಯ ಭಾಷಣ ಮಾಡಿದ ರಮೇಶ್ ಕುಮಾರ್, ಚುನಾವಣಾ ವ್ಯವಸ್ಥೆ ಸುಧಾರಣೆ ಮತ್ತು ಲೋಕಾಯುಕ್ತ ಕಾಯ್ದೆ ಬಲಪಡಿಸುವಂತಹ ರಚನಾತ್ಮಕ ಕೆಲಸಗಳನ್ನು ಸರ್ಕಾರ ಮತ್ತು ಸದನ ಮಾಡಬೇಕಾಗಿದೆ. ಪ್ರಜಾತಂತ್ರದ ನಾಲ್ಕನೇ ಅಂಗ ಎಂದು ಗುರುತಿಸಿಕೊಂಡಿರುವ ಮಾಧ್ಯಮಗಳು ವೈಯಕ್ತಿಕ ತೇಜೋವಧೆ ಮಾಡುವ ಕೆಲಸಕ್ಕೆ ಇಳಿಯಬಾರದು ಎಂದು ಸಲಹೆ ಮಾಡಿದರು.
ಚುನಾವಣಾ ವ್ಯವಸ್ಥೆಯೇ ಭ್ರಷ್ಟಾಚಾರಕ್ಕೆ ಮೂಲ ಕಾರಣ. ಇಂತಹ ವ್ಯವಸ್ಥೆ ಸುಧಾರಣೆಗೆ ಕ್ರಮ ಆಗಲೇಬೇಕಾಗಿದೆ. ಸಂವಿಧಾನದ 10ನೇ ಪರಿಚ್ಛೇದ ಪರಿಪೂರ್ಣವಾಗಿಲ್ಲ. ಇದಕ್ಕೆ ಸಾಕಷ್ಟು ತಿದ್ದುಪಡಿಗಳು ಆಗಬೇಕಾಗಿದೆ. ಚುನಾವಣಾ ವ್ಯವಸ್ಥೆ ಸುಧಾರಣೆ ಕುರಿತು ಸದನದಲ್ಲಿ ಸಮಗ್ರ ಚರ್ಚೆಯಾಗಿ ನಿರ್ಣಯ ಕೈಗೊಂಡು ಪ್ರಧಾನಿ ಮತ್ತು ಸಂಸತ್ತಿಗೆ ಕಳುಹಿಸಿ ಕೇಂದ್ರದ ಮೇಲೂ ಒತ್ತಡ ಹೇರಬೇಕಾಗಿದೆ. 1951 ರ ಪ್ರಜಾಪ್ರತಿನಿಧಿ ಕಾಯ್ದೆಯೂ ಪರಿಷ್ಕರಣೆಯಾಗಬೇಕಿದೆ. ಸಂಸದೀಯ ಪ್ರಜಾಪ್ರಭುತ್ವ ಉಳಿದರೆ ಮಾತ್ರ ಭ್ರಷ್ಟಾಚಾರದಂತಹ ಪಿಡುಗುಗಳು ನಿವಾರಣೆಯಾಗಲು ಸಾಧ್ಯ ಎಂದು ಪ್ರತಿಪಾದಿಸಿದರು.
ಲೋಕಾಯುಕ್ತ ಕಾಯ್ದೆ ಬಲಪಡಿಸುವ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲೇ ಇದ್ದು, ಈ ನಿಟ್ಟಿನಲ್ಲಿ ಗಮನಹರಿಸುವ ಅಗತ್ಯವಿದೆ. ಪ್ರತಿವರ್ಷ ಲೋಕಾಯುಕ್ತ ಸಂಸ್ಥೆಗೆ ನಾವು ಆಸ್ತಿ ವಿವರಗಳನ್ನು ಸಲ್ಲಿಸಿ ಸುಮ್ಮನಾಗುತ್ತೇವೆ. ಜನಪ್ರತಿನಿಧಿಗಳು ಆಸ್ತಿ ವಿವರ ಸಲ್ಲಿಸದಿದ್ದರೆ ಏನು ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವ ಬಗ್ಗೆ ಕಾನೂನಿನಲ್ಲಿ ಏನೂ ಹೇಳಿಲ್ಲ. ಪ್ರತಿ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿಗಳು ನೂರಾರು ಕೋಟಿ ಆಸ್ತಿ ಘೋಷಣೆ ಮಾಡಿಕೊಳ್ಳುತ್ತಾರೆ.
ಆದರೆ, ಅವರ ಆದಾಯದ ಮೂಲ ಯಾವುದು ಎನ್ನುವುದನ್ನು ಚುನಾವಣಾ ಆಯೋಗ ಎಂದೂ ಪ್ರಶ್ನಿಸಿಲ್ಲ. ಏಕಾ ಏಕಿ ಹೆಚ್ಚಳವಾದ ಆದಾಯದ ಬಗ್ಗೆ ಚುನಾವಣಾ ಆಯೋಗ ಜಾರಿ ನಿರ್ದೇಶನಾಲಯದ ಮೂಲಕ ತನಿಖೆಗೆ ಆದೇಶ ಮಾಡುವ ವ್ಯವಸ್ಥೆ ಜಾರಿಯಾಗಬೇಕು. ಭ್ರಷ್ಟಾಚಾರ ವಿರುದ್ಧ ಕೆಲಸ ಮಾಡುವಂತಹ ಸಂಸ್ಥೆಗೆ ಶಕ್ತಿ ತುಂಬುವ ಕೆಲಸವಾಗುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಹೇಳಿದರು.
ಮಾಧ್ಯಮಗಳ ಬಗ್ಗೆಯೂ ಪರೋಕ್ಷ ಅಸಮಾಧಾನ ಹೊರ ಹಾಕಿದ ಅವರು, ಮಾಧ್ಯಮಗಳು ಯಾವುದೇ ವ್ಯಕ್ತಿಯ ವೈಯಕ್ತಿಕ ಬದುಕನ್ನು ರೋಚಕವಾಗಿ ವರದಿ ಮಾಡುವುದು ಸರಿಯಲ್ಲ. ಇದರಿಂದ ಆ ವ್ಯಕ್ತಿ ಮತ್ತು ಕುಟುಂಬದಲ್ಲಿ ಸಾಕಷ್ಟು ತೊಂದರೆ ಅನುಭವಿಸುವಂತಾಗುತ್ತದೆ. ಎಷ್ಟೋ ಸಾರಿ ಮಾಧ್ಯಮಗಳ ರೋಚಕ ವರದಿಗಳಿಂದ ನೊಂದ ವ್ಯಕ್ತಿ ಜೀವ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ವರದಿ ಮಾಡಿ ಎಂದು ಕಿವಿ ಮಾತು ಹೇಳಿದರು.