ಗೋಕಾಕ: ಕ್ಷಿಪ್ರ ರಾಜಕೀಯ ಕ್ರಾಂತಿಯಿಂದ ಮಹಾರಾಷ್ಟ್ರ ವಿಕಾಸ ಆಘಾಡಿ ಸರ್ಕಾರದ ಬುಡ ಅಲ್ಲಾಡುತ್ತಿದ್ದು, ಬಿಜೆಪಿ ಇದರ ಲಾಭ ಪಡೆಯಲು ಸಜ್ಜಾಗಿದೆ. ರಾಜಕೀಯ ಗುರು ದೇವೇಂದ್ರ ಫಡ್ನವೀಸ್ ಋಣ ತೀರಿಸಲು ರಮೇಶ ಜಾರಕಿಹೊಳಿ ಮುಂಬೈಗೆ ತೆರಳಿದ್ದಾರೆ!
ಕರ್ನಾಟಕ ಮಾದರಿಯಲ್ಲೇ ಮಹಾರಾಷ್ಟ್ರದಲ್ಲೂ ರಾಜಕೀಯ ಕ್ಷಿಪ್ರ ಕ್ರಾಂತಿಯಾಗಿದೆ. ಕರ್ನಾಟಕದ 2018ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಅಂದು ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಎಸ್‌ವೈ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಬಹುಮತ ಸಾಬೀತು ಬಿಎಸ್‌ವೈಗೆ ಸಾಧ್ಯವಾಗಲಿಲ್ಲ. ಪರಿಣಾಮ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿ ಕಾರಕ್ಕೆ ಬಂದಿತ್ತು. ಕುಮಾರಸ್ವಾಮಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಆಗಿದ್ದರು.
14 ತಿಂಗಳು ಆಗುತ್ತಿದ್ದಂತೆ ಮೈತ್ರಿ ಸರ್ಕಾರದ ವಿರುದ್ಧ 17 ಶಾಸಕರು ಬಂಡಾಯ ಎದ್ದಿದ್ದರು. ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಕ್ಕೆ ಮುನ್ನುಡಿ ಬರೆದವರಲ್ಲಿ ರಮೇಶ ಜಾರಕಿಹೊಳಿ ನೇತೃತ್ವ ವಹಿಸಿದ್ದರು. ಕರ್ನಾಟಕದ ಮಾದರಿಯಲ್ಲೇ ಈಗ ಮಹಾರಾಷ್ಟ್ರದಲ್ಲೂ ರಾಜಕೀಯ ಬೆಳವಣಿಗೆ ನಡೆಯುತ್ತಿವೆ. ಈ ವೇಳೆಯೇ ಕಳೆದ ನಾಲ್ಕು ದಿನಗಳಿಂದ ರಮೇಶ ಜಾರಕಿಹೊಳಿ ಮುಂಬೈನಲ್ಲಿ ಠಿಕಾಣಿ ಹೂಡಿರುವುದು ಕುತೂಹಲ ಮೂಡಿಸಿದೆ.
ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ 17 ಶಾಸಕರಿಗೆ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಆಶ್ರಯ ನೀಡಿತ್ತು. ಆಗ ಮಹಾರಾಷ್ಟ್ರ ಸಿಎಂ ಆಗಿದ್ದ ದೇವೇಂದ್ರ ಫಡ್ನವೀಸ್ ತಿಂಗಳ ಕಾಲ 17 ಶಾಸಕರಿಗೆ ವೈಭವದ ಆಶ್ರಯ ನೀಡಿದ್ದರು. ಆಗಲೇ ರಮೇಶ ಜಾರಕಿಹೊಳಿ ಹಾಗೂ ದೇವೇಂದ್ರ ಫಡ್ನವೀಸ್ ನಡುವಿನ ಸ್ನೇಹ ಗಟ್ಟಿಯಾಗಿತ್ತು. ಆಗಾಗ ರಮೇಶ ಜಾರಕಿಹೊಳಿ ಮುಂಬೈ ಪ್ರವಾಸ ಕೈಗೊಂಡು ಫಡ್ನವೀಸ್ ಅವರನ್ನು ಭೇಟಿ ಆಗುತ್ತಲೇ ಇದ್ದರು. ಫಡ್ನವೀಸ್ ನನ್ನ ರಾಜಕೀಯ ಗುರು ಎಂದು ರಮೇಶ ಹಲವು ಬಾರಿ ಹೇಳಿಕೊಂಡಿದ್ದಾರೆ.
ಸಿಡಿ ಪ್ರಕರಣದಲ್ಲಿ ರಮೇಶ ಜಾರಕಿಹೊಳಿ ರಾಜೀನಾಮೆ ನೀಡಿದಾಗ ಬಿಜೆಪಿ ಬಹುತೇಕ ನಾಯಕರು ರಮೇಶ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ ಫಡ್ನವೀಸ್ ಮಾತ್ರ ರಮೇಶ ಬೆನ್ನಿಗೆ ನಿಂತಿದ್ದರು. ಇದು ಇಬ್ಬರ ನಡುವಿನ ಬಾಂಧವ್ಯಕ್ಕೆ ಸಾಕ್ಷಿ. ಈಗ ಮಹಾವಿಕಾಸ ಅಘಾಡಿ ವಿರುದ್ಧ 40 ಶಾಸಕರು ಬಂಡೆದ್ದು ರೆಸಾರ್ಟ್ ಸೇರಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ತಾಲೀಮು ಚುರುಕುಗೊಂಡಿದ್ದು, ಫಡ್ನವೀಸ್‌ಗೆ ರಮೇಶ್ ಸಹಕಾರ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.
ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಎರಡನೇ ದಿನವೂ ಹೈಡ್ರಾಮಾ ಮುಂದುವರಿದಿದೆ. ಇತ್ತ ಬಿಜೆಪಿ ಕೂಡ ಸರ್ಕಾರ ರಚನೆಗೆ ಕಸರತ್ತು ಆರಂಭಿಸಿದೆ. ಇಂಥ ಸಮಯದಲ್ಲಿ ಫಡ್ನವೀಸ್ ಬೆನ್ನಿಗೆ ನಿಲ್ಲುವ ಮೂಲಕ ರಮೇಶ ಗುರುವಿನ ಋಣ ತೀರಿಸುತ್ತಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.