Advertisement

ಅತೃಪ್ತರಿಗೆ ಮತ್ತೆ ಜಾರಕಿಹೊಳಿ ನೇತೃತ್ವ; ಬೆಲ್ಲದ್ ಸಾಥ್, ತಡರಾತ್ರಿ ಮೀಟಿಂಗ್!

09:20 AM Aug 07, 2021 | Team Udayavani |

ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ವಂಚಿತ ಅತೃಪ್ತ ಶಾಸಕರ ನೇತೃತ್ವವನ್ನು ಮತ್ತೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಹಿಸಿಕೊಂಡಿದ್ದಾರೆ.

Advertisement

ವಲಸಿಗ ಶಾಸಕರಾದ ಶ್ರೀಮಂತ ಪಾಟೀಲ, ಮಹೇಶ್‌ಕುಮಠಳ್ಳಿ, ವಿಧಾನ ಪರಿಷತ್‌ ಸದಸ್ಯರಾಜುಗೌಡ,ಅರವಿಂದ ಬೆಲ್ಲದ ಹಾಗೂ ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್‌ ಅವರು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ನಿವಾಸದಲ್ಲಿ ಗುರುವಾರ ತಡ ರಾತ್ರಿ ಸಭೆ ನಡೆಸಿದ್ದಾರೆ. ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾಗಿರುವ ತಮ್ಮನ್ನು ಸಚಿವ ಸಂಪುಟದಿಂದ ಹೊರಗಿಟ್ಟು ತಮಗೆ ಅನ್ಯಾಯ ಮಾಡಲಾಗಿದೆ ಎಂದು ವಲಸೆ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಬಿಎಸ್‌ವೈ ಸಂಪುಟದಲ್ಲಿದ್ದ ಶ್ರೀಮಂತ ಪಾಟೀಲ್‌ ಹಾಗೂ ಆರ್‌. ಶಂಕರ್‌ಗೆ ಮತ್ತು ಮಹೇಶ್‌ ಕುಮಠಳ್ಳಿಗೆ ಸಚಿವ ಸ್ಥಾನ ನೀಡದೇ ಇರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ ಎನ್ನಲಾಗಿದೆ.

ರಾಜೀನಾಮೆ ಇಂಗಿತ: ಬಿಜೆಪಿ ನಾಯಕರು ನಡು ನೀರಿನಲ್ಲಿಕೈ ಬಿಟ್ಟಿದ್ದು, ನೀವೇ ನ್ಯಾಯ ಕೊಡಿಸಿ ಎಂದು ಜಾರಕಿಹೊಳಿ ಅವರನ್ನು ಶ್ರೀಮಂತ ಪಾಟೀಲ್‌, ಕುಮಠಳ್ಳಿ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ ಅಲ್ಲದೇ, ಈಗ ಖಾಲಿ ಇರುವ ನಾಲ್ಕು ಸಚಿವ ಸ್ಥಾನಗಳಲ್ಲಿ ತಮಗೆ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ. ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:ನಿಗಮ ಅಧ್ಯಕ್ಷರಿಗೆ ಕೊಕ್‌? ಬಿಎಸ್‌ವೈ ಅವಧಿಯಲ್ಲಿ ನೇಮಕವಾದ ಅಧ್ಯಕ್ಷರಿಗೆ ಸಂಕಷ್ಟ

Advertisement

ಆರ್‌. ಶಂಕರ್‌ ಕೂಡ ಬಿಜೆಪಿ ನಾಯಕರ ನಡೆಯ ಬಗ್ಗೆ ಬೇಸರಗೊಂಡಿದ್ದಾರೆ ಎನ್ನಲಾಗಿದ್ದು, ತಮ್ಮಿಂದ ಬಿಜೆಪಿಗೆ ಅಧಿಕಾರ ಬಂದಿದ್ದರೂ, ತಮ್ಮನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೇಇರುವುದು ಯಾವ ನ್ಯಾಯ? ಈ ಬಗ್ಗೆ ಬಿಜೆಪಿ ಹೈಕಮಾಂಡ್‌ ನಾಯಕರ ಜೊತೆ ಚರ್ಚಿಸುವಂತೆ ರಮೇಶ್‌ ಜಾರಕಿಹೊಳಿಗೆ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಸಚಿವ ಸ್ಥಾನ ಸಿಗದೇ ವಂಚಿತರಾಗಿರುವ ಮೂಲ ಬಿಜೆಪಿ ಶಾಸಕರಾಗಿರುವ ಅರವಿಂದ ಬೆಲ್ಲದ ಹಾಗೂ ರಾಜು ಗೌಡ ಸಭೆಯಲ್ಲಿ ಪಾಲ್ಗೊಂಡು ಅಸಮಾಧಾನ ಹೊರ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆಗಳ ಕುರಿತು ಶುಕ್ರವಾರ ಮತ್ತೂಂದು ಸಭೆ ನಡೆಸಿ ಚರ್ಚಿಸಲು ಅತೃಪ್ತರು ನಿರ್ಧರಿಸಿದ್ದರು ಎನ್ನಲಾಗಿದ್ದು, ಆದರೆ, ಶುಕ್ರವಾರ ಯಾವುದೇ ರೀತಿಯ ಸಭೆ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಬೊಮ್ಮಾಯಿ ಆಹ್ವಾನ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅತೃಪ್ತ ಶಾಸಕರು ಸಭೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆಗಿರುವ ಅನ್ಯಾಯವನ್ನು ಸರಿಪಡಿಸುವ ಕುರಿತು ಚರ್ಚಿಸಿ ತೀರ್ಮಾನ ಮಾಡೋಣ ಎಂದು ಅತೃಪ್ತರಿಗೆ ‌ ಮಾತುಕತೆಗೆ ಆಹ್ವಾನ ನೀಡಿದ್ದರು ಎನ್ನಲಾಗಿದೆ. ಆದರೆ, ಮತ್ತೂಂದು ಬಾರಿ ಸಭೆ ಸೇರಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಅತೃಪ್ತರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅದೇಕಾರಣಕ್ಕೆ ಶುಕ್ರವಾರ ಸಿಎಂರನ್ನು ಭೇಟಿ ಮಾಡದೇ ಅಂತರ ಕಾಯ್ದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವ ಸ್ಥಾನದ ವಿಚಾರವಾಗಿ ಈಗಾಗಲೇ ಚರ್ಚೆ ನಡೆದಿದೆ. ಮುಂದಿನ ಜೂನ್‌ ತಿಂಗಳವರೆಗೂ ಎಂಎಲ್ ಸಿ ಖಾಲಿ ಇಲ್ಲ. ಹಾಗಾಗಿ ಈಗ ಸಚಿವ ಸ್ಥಾನವನ್ನೂ ಕೇಳಲು ಸಾಧ್ಯವಿಲ್ಲ. ನಮ್ಮ ತ್ಯಾಗಕ್ಕೆ ಈಗ ಯಾವುದೇ ಬೆಲೆ ಇಲ್ಲ. ನಾವೆಲ್ಲರೂ ಸ್ನೇಹಿತರು, ಹಾಗಾಗಿ ಬಂದು ಭೇಟಿಯಾಗಿದ್ದೇವೆ.

-ಪ್ರತಾಪಗೌಡ ಪಾಟೀಲ್‌, ಮಾಜಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next